ಮನೋರಂಜನೆ

ಮರದೊಳಗಿನ ಕಿಚ್ಚು ಎದೆಯೊಳಗೆ ಇಳಿದ ಪರಿ:ಕಿಚ್ಚು ಚಿತ್ರ ವಿಮರ್ಶೆ

Pinterest LinkedIn Tumblr

*ಶರಣು ಹುಲ್ಲೂರು


ಕಲಾವಿದರುರಾಗಿಣಿ ದ್ವಿವೇದಿ, ಧ್ರುವ ಶರ್ಮ, ಸಾಯಿಕುಮಾರ್‌, ಪ್ರದೀಪ್‌ ರಾಜ್‌, ಸುಚೇಂದ್ರಪ್ರಸಾದ್‌, ರಘು, ಅಮೋಘ್‌, ಕುಮಾರ್‌
ನಿರ್ದೇಶಕ ಪ್ರದೀಪ್‌ ರಾಜ್‌
ಕಾಡನಂಚಿನ ಜನರ ಕಥೆ ಅಂದಾಕ್ಷಣ ನಿರ್ದೇಶಕರಿಗೆ ನೆನಪಾಗುವುದೇ ಈ ಎರಡು ಅಂಶಗಳು. ಒಂದು, ಕಾಡು ಉಳಿಸಿ ಅಭಿಯಾನ. ಮತ್ತೊಂದು ನಕ್ಸಲೀಯರ ಸಮಸ್ಯೆ. ಈ ಎರಡರ ಸುತ್ತ ಗಿರಿಕಿ ಹೊಡೆದ ಅನೇಕ ಚಿತ್ರಗಳು ಕನ್ನಡದಲ್ಲಿ ಬಂದಿವೆ. ಅದಕ್ಕೆ ಹೊಸ ಸೇರ್ಪಡೆ ‘ಕಿಚ್ಚು’ ಚಿತ್ರ. ಇಲ್ಲಿಯೂ ಕಾಡಿನ ಬಗ್ಗೆ ಕಳಕಳಿಯಿದೆ. ನಕ್ಸಲಿಸಂ ಬಗ್ಗೆ ಪ್ರಸ್ತಾಪವಿದೆ. ಇವುಗಳನ್ನು ಹೇಳುತ್ತಲೇ ಪುಟ್ಟದೊಂದು ಲವ್‌ಸ್ಟೋರಿಯನ್ನೂ ತೋರಿಸುತ್ತಾರೆ ನಿರ್ದೇಶಕರು. ಹಾಗಾಗಿ ಮರದೊಳಗಿನ ಮತ್ತು ಮನಸಿನೊಳಗಿನ ‘ಕಿಚ್ಚು’ ಸಿನಿಮಾದುದ್ದಕ್ಕೂ ಪಸರಿಸಿದೆ.

ಜಗತ್ತು ಈಗಾಗಲೇ ಕಾಡು ನಾಶದ ಪರಿಣಾಮವನ್ನು ಎದುರಿಸುತ್ತಿದೆ. ಆದರೂ, ಅದಕ್ಕೊಂದು ಪರಿಹಾರ ಸಾಧ್ಯವಾಗಿಲ್ಲ. ಹೋರಾಟಗಳೆಲ್ಲವೂ ಅರಣ್ಯರೋದನವಾಗಿಯೇ ಉಳಿದಿವೆ. ಇಂಥದ್ದೇ ಹೋರಾಟದ ಮತ್ತೊಂದು ರೂಪದಂತಿದೆ ಕಿಚ್ಚು ಚಿತ್ರ. ಸಿನಿಮಾ ತೆರೆದುಕೊಳ್ಳುವುದು ಪರಿಸರ ಪ್ರೇಮಿಯೊಬ್ಬನ ಬದುಕಿನ ಮೂಲಕ. ಈತನ ಕಾಲಾನಂತರ ಆ ಹೋರಾಟವನ್ನು ಆತನ ಮಗ ಸೂರಿ (ಧ್ರುವ ಶರ್ಮ) ಕೈ ಎತ್ತಿಕೊಳ್ಳುತ್ತಾನೆ. ಜತೆಗೆ ಬಾಲ್ಯದ ಸ್ನೇಹಿತೆ ನಂದಿನಿ (ಅಭಿನಯ)ಕೂಡ ಇವನಿಗೆ ಸಾಥ್‌ ನೀಡುತ್ತಾಳೆ. ಇವರು ಮದುವೆಯಾದ ನಂತರ ಕಾಡು ಉಳಿಸುವುದಕ್ಕಾಗಿ ಇಬ್ಬರೂ ನಕ್ಸಲೈಟ್‌ ಗುಂಪು ಸೇರಿಕೊಳ್ಳುತ್ತಾರೆ. ಅನ್ಯಾಯದ ವಿರುದ್ಧ ಪ್ರತಿಭಟಿಸುತ್ತಾರೆ. ಇವರ ಹೋರಾಟಕ್ಕೆ ಸ್ವತಃ ನಂದಿನಿ ಸಹೋದರಿಯಾದ ಪದ್ದು (ರಾಗಿಣಿ) ವಿರೋಧಿಸುತ್ತಾಳೆ. ಮನೆಯವರ ವಿರೋಧ, ಪೊಲೀಸ್‌ ಕಾರಾರ‍ಯಚರಣೆ, ಟಿಂಬರ್‌ ಮಾಫಿಯಾ ಹೀಗೆ ಎಲ್ಲವನ್ನೂ ವಿರೋಧಿ ತಮ್ಮ ಹೋರಾಟದಲ್ಲಿ ನಂದಿನಿ ಮತ್ತು ಸೂರಿ ಗೆಲ್ಲುತ್ತಾರಾ ಎನ್ನುವುದೇ ಸಿನಿಮಾ.

ಈವರೆಗೂ ಗ್ಲಾಮ್‌ ಪಾತ್ರಗಳಿಗಷ್ಟೇ ಸೀಮಿತವಾಗಿದ್ದ ರಾಗಿಣಿ, ಈ ಚಿತ್ರದಲ್ಲಿ ಹೊಸದಾಗಿ ಕಾಣಿಸುತ್ತಾರೆ. ಕಾಫಿತೋಟದಲ್ಲಿ ಕೆಲಸ ಮಾಡುವ ಮಹಿಳೆಯಾಗಿ ಪಾತ್ರ ನಿರ್ವಹಿಸಿದ್ದಾರೆ. ನಿಜ ಜೀವನದಲ್ಲಿ ಮತ್ತು ತೆರೆಯ ಮೇಲೆಯೂ ಕಿವುಡ ಮತ್ತು ಮೂಕರಾಗಿರುವ ಧ್ರುವ ಮತ್ತು ಅಭಿನಯ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಖಡಕ್‌ ಪೊಲೀಸ್‌ ಆಫೀಸರ್‌ ಆಗಿ ಸಾಯಿಕುಮಾರ್‌, ಎಂದಿನಂತೆ ತಮ್ಮ ಖದರ್‌ ತೋರಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಐದೇ ಐದು ನಿಮಿಷ ಬಂದು ಹೋಗುವ ಸುದೀಪ್‌, ನಕ್ಸಲೈಟ್‌ ಧೋರಣೆಯನ್ನು ಕನ್‌ಫ್ಯೂಸ್‌ ಮಾಡುತ್ತಾರೆ. ಅರ್ಜುನ್‌ ಜನ್ಯ ಸಂಗೀತದಲ್ಲಿ ಹೇಳುವಂಥದ್ದು ಏನೂ ಇಲ್ಲ. ಕ್ರಾಂತಿಗೀತೆಗೆ ಭಕ್ತಿಗೀತೆಯ ಸ್ಪರ್ಶ ನೀಡಿ ಅಚ್ಚರಿ ಮೂಡಿಸುತ್ತಾರೆ ಜನ್ಯ. ಇರುವ ಮಿತಿಯಲ್ಲೇ ಕಥೆಯನ್ನು ಹೇಳಲು ನಿರ್ದೇಶಕರು ಕಷ್ಟಪಟ್ಟಿದ್ದಾರೆ. ಜತೆಗೊಂದು ಪಾತ್ರವನ್ನೂ ಮಾಡಿದ್ದಾರೆ. ಪರಿಸರ ಪ್ರೇಮಿಗಳಿಗೆ ಕೊಂಚ ಹಿಡಿಸಿದರೆ, ಹೋರಾಟದ ಹಿನ್ನೆಲೆ ಇರುವ ನೋಡುಗರಿಗೆ ಚರ್ಚೆ ಹುಟ್ಟುಹಾಕುವ ಚಿತ್ರವಿದು. ಹೋರಾಟದ ಕಿಚ್ಚಿರುವ ಕಲಾರಸಿಕರು ಈ ಸಿನಿಮಾ ಒಮ್ಮೆ ನೋಡಬಹುದು.

Comments are closed.