ಮನೋರಂಜನೆ

ಸಿಂಪಲ್‌ ಅಯ್ಯು: ಭೂತಯ್ಯನ ಮೊಮ್ಮಗ ಅಯ್ಯು ಚಿತ್ರ ವಿಮರ್ಶೆ

Pinterest LinkedIn Tumblr

*ಪದ್ಮಾ ಶಿವಮೊಗ್ಗ


ಕಲಾವಿದರು: ಚಿಕ್ಕಣ್ಣ, ತಬಲಾ ನಾಣಿ, ಹೊನ್ನವಳ್ಳಿ ಕೃಷ್ಣ, ಶ್ರುತಿ, ಹರಿಹರನ್‌, ಸಿದ್ದಿ
ನಿರ್ದೇಶಕ: ನಾಗರಾಜ

ಈ ಹಿಂದೆ ಎರಡು ಚಿತ್ರಗಳನ್ನು ನಿರ್ದೇಶನ ಮಾಡಿದ್ದ ನಾಗರಾಜ್‌ ಪೀಣ್ಯ ಅವರು ಭೂತಯ್ಯನ ಮೊಮ್ಮಗ ಅಯ್ಯು ಚಿತ್ರವನ್ನು ನಿರ್ದೇಶಿಸಿದ್ದಾರೆ. ಹಾಗಂತ ವಿಷ್ಣುವರ್ಧನ್‌ ಅಭಿನಯದ ’ಭೂತಯ್ಯನ ಮಗ ಅಯ್ಯು’ಗೂ ಇದಕ್ಕೂ ಏನಾದರೂ ಸಂಬಂಧ ಇದೆ ಎಂದು ತಿಳಿದುಕೊಳ್ಳಬೇಕಿಲ್ಲ. ಹಾಗೆಯೇ ಹೆಸರಿಗೂ ಚಿತ್ರದ ಕಥೆಗೂ ಸಂಬಂಧವಿಲ್ಲ. ಚಿತ್ರದಲ್ಲೊಬ್ಬ ಭೂತಯ್ಯನಿಗೆ ಮೊಮ್ಮಗ ಇರುತ್ತಾನೆ, ಅವನ ಹೆಸರು ಅಯ್ಯು. ಹಳ್ಳಿಯಲ್ಲಿ ಸಾವನ್ನು ಜನ ಹೇಗೆ ನೋಡುತ್ತಾರೆ ಎನ್ನುವುದನ್ನು ಹಾಸ್ಯದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.

ಮದುವೆಯಾಗಿ ಹೆಣ್ಣನ್ನು ಹುಡುಕುತ್ತಿರುವ ಅಯ್ಯು(ಚಿಕ್ಕಣ್ಣ), ವಯಸ್ಸಾದರೂ ಮದುವೆಯಾಗದೆ ಹೆಣ್ಣಿನ ಹಿಂದೆ ಬೀಳುವ ಅವನ ಮಾವ (ತಬಲಾ ನಾಣಿ), ಇವರ ನಡುವೆ ಬಡ್ಡಿ ವ್ಯವಹಾರ ಮಾಡುವ ಮೆಷಿನ್‌ ಮುನಿಯಪ್ಪ ನನ್ನು ಸತ್ತ ಎಂದು ತಪ್ಪಾಗಿ ಭಾವಿಸುವ ಹಳ್ಳಿಯ ಜನ. ಅಯ್ಯು ಹೆಣ್ಣು ನೋಡಲು ಹೋದಾಗಲೆಲ್ಲಾ ಮಾವನ ಹೆಣ್ಣಿನ ಸಂಗದಿಂದಾಗಿ ಎಡವಟ್ಟಾಗುತ್ತಿರುತ್ತದೆ. ಹೀಗೆ ಕೊನೆಗೆ ನೂರನೇ ಹೆಣ್ಣನ್ನು ನೋಡಲು ಅಯ್ಯು ಮಾವನ ಜತೆ ಹೋಗುತ್ತಾನೆ.

ಇನ್ನೊಂದೆಡೆ ಊರಿನ ನಾಟಿ ವೈದ್ಯ ಮತ್ತು ಬೇಜವಾಬ್ದಾರಿ ವೈದ್ಯನಿಂದಾಗಿ ಮುನಿಯಪ್ಪ ಸತ್ತನೆಂದು ಜನ ಭಾವಿಸಿ ಶವಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಬಡ್ಡಿ ಹೀರುವ ಮುನಿಯಪ್ಪ ಸತ್ತದ್ದಕ್ಕೆ ಮಗಳು, ಅಳಿಯ, ಮಗ, ಊರವರು ಹೇಗೆ ಸಂಭ್ರಮಿಸುತ್ತಾರೆ, ನೊಂದವರಂತೆ ನಾಟಕ ಆಡುತ್ತಾರೆ ಎನ್ನುವುದೇ ಚಿತ್ರದ ಕಥೆ. ಇದರ ನಡುವೆ ಆತ್ಮೀಯ ಸ್ನೇಹಕ್ಕೆ ಉದಾಹರಣೆಯಾಗಿ ಹೊನ್ನವಳ್ಳಿ ಕೃಷ್ಣ ಪಾತ್ರವಿದೆ.

ಪೋಲಿ ಡೈಲಾಗ್‌ನಿಂದಲೇ ಚಿತ್ರ ಪ್ರಾರಂಭವಾಗುತ್ತದೆ. ಇದು ಚಿತ್ರದುದ್ದಕ್ಕೂ ಮುಂದುವರಿಯುತ್ತದೆ. ಚಿತ್ರದಲ್ಲಿ ಮುನಿಯಪ್ಪನ ಹೆಣದ ಮುಂದೆ ಜನ ಯಾವ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಅನ್ನೋದನ್ನೇ ಸಿನಿಮಾದುದ್ದಕ್ಕೂ ತೋರಿಸಲಾಗಿದೆ. ಹಾಸ್ಯಕ್ಕಾಗಿಯೇ ಅತಿಯಾದ ನಟನೆ, ಡೈಲಾಗ್‌ಗಳನ್ನು ಹೇರಲಾಗಿದೆ. ಆದರೆ ಇದು ಕೆಲವು ಕಡೆ ಮಾತ್ರ ನಗು ತರಿಸಿದರೆ ಉಳಿದಂತೆ ಕಿರಿಕಿರಿಯನ್ನುಂಟು ಮಾಡುತ್ತದೆ. ಅತಿಯಾದ ನಾಟಕೀಯತೆಯಿಂದ ಚಿತ್ರ ಸೋಲುತ್ತದೆ.

ಒಂದು ಸಾಮಾಧಾನದ ಸಂಗತಿ ಎಂದರೆ, ಮನರಂಜನೆಗಾಗಿ ಕಮರ್ಷಿಯಲ್‌ ಸೂತ್ರವನ್ನು ಬಳಸದೆ ಇರುವುದು. ಹಿರೋಯಿಸಂ ಇಲ್ಲ, ಐಟಂ ಡಾನ್ಸ್‌ ಇಲ್ಲ. ನಿರ್ದೇಶಕರು ಸಹಜವಾಗಿ ಚಿತ್ರದ ಕಥೆಯನ್ನು ಹೇಳುವ ಪ್ರಯತ್ನ ಮಾಡಿದ್ದರೂ, ಇನ್ನಷ್ಟು ಎಚ್ಚರಿಕೆ ವಹಿಸಬೇಕಿತ್ತು, ಬಿಗಿಯಾಗಿ ದೃಶ್ಯಗಳನ್ನು ಹೆಣೆಯಬೇಕಿತ್ತು ಎನ್ನಿಸುತ್ತದೆ. ಒಳ್ಳೆಯ ಸಿನಿಮಾ ಆಗಬಹುದಾಗಿದ್ದ ಭೂತಯ್ಯನ ಮೊಮ್ಮಗ ಅಯ್ಯು ಅತಿರೇಕಗಳಿಂದಲೇ ಸೋಲುತ್ತದೆ. ಒಂದೆರಡು ಪಾತ್ರಗಳ ಅಬ್ಬರವನ್ನು ಸಹಿಸಲಾಗುವುದಿಲ್ಲ. ಉಳಿದಂತೆ ನಟರೆಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಶ್ರುತಿ ಹರಿಹರನ್‌ಗೆ ಹೆಚ್ಚು ಅವಕಾಶ ಇಲ್ಲ. ಒಂದಿಷ್ಟು ಕಾಮಿಡಿ ಇರೋ ಚಿತ್ರ ನೋಡಬೇಕೆನ್ನುವವರು ಚಿತ್ರ ನೋಡಬಹುದು.

Comments are closed.