ರಾಷ್ಟ್ರೀಯ

27 ಸಾವು ದೃಢೀಕರಿಸಿದ್ದ ಬಿಹಾರ ಸಚಿವರು ಈಗ ಹೇಳ್ತಾರೆ:ಯಾರೂ ಸತ್ತಿಲ್ಲ!

Pinterest LinkedIn Tumblr


ಮೋತಿಹಾರಿ : ಇದು ವಿಚಿತ್ರವಾದರೂ ನಿಜ; ಬಿಹಾರದ ಮೋತಿಹಾರಿಯಲ್ಲಿ ನಿನ್ನೆ ಶುಕ್ರವಾರ ಖಾಸಗಿ ಬಸ್ಸೊಂದು ಆಳದ ಕಮರಿಗೆ ಬಿದ್ದು ಸಂಭವಿಸಿದ್ದ ಅವಘಡದಲ್ಲಿ 27 ಮಂದಿ ಮೃತಪಟ್ಟರೆಂದು ಹೇಳಿದ್ದ ಬಿಹಾರದ ಪ್ರಕೋಪ ನಿರ್ವಹಣ ಸಚಿವ ದಿನೇಶ್‌ ಚಂದ್ರ ಅವರೇ ಇಂದು “ಮೋತಿಹಾರಿ ಬಸ್‌ ಅಪಘಾತದಲ್ಲಿ ಯಾರೊಬ್ಬರೂ ಸತ್ತಿಲ್ಲ” ಎಂದು ಹೇಳಿದ್ದಾರೆ. ಸಚಿವರ ಈ ಹೊಸ ಹೇಳಿಕೆಯಿಂದ ಜನರು ಹುಬ್ಬೇರಿಸುವಂತಾಗಿದೆ.

ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಗೆ ತಲಾ ನಾಲ್ಕು ಲಕ್ಷ ಪರಿಹಾರ ನೀಡುವುದಕ್ಕೆ ಅವಕಾಶವಿದೆ ಎಂದು ನಿನ್ನೆ ಹೇಳಿದ್ದ ಸಚಿವ ದಿನೇಶ್‌ ಚಂದ್ರ ಯಾದವ್‌ ಅವರೇ ಇಂದು ತಮ್ಮನ್ನು ಸಮರ್ಥಿಸಿಕೊಳ್ಳುತ್ತಾ, “ಹೌದು, ಮೋತಿಹಾರಿ ಅಪಘಾತದಲ್ಲಿ 27 ಮಂದಿ ಸತ್ತಿದ್ದರೆಂದು ನಾನು ಹೇಳಿದ್ದೆ; ಆದರೆ ಅದು ಸ್ಥಳೀಯ ಮೂಲಗಳನ್ನು ಆಧರಿಸಿ ನೀಡಿದ್ದ ಹೇಳಿಕೆಯಾಗಿತ್ತು; ಹಾಗಿದ್ದರೂ ನಾನು ಆಗಲೇ ಹೇಳಿದ್ದೆ ಅಂತಿಮ ವರದಿಯನ್ನು ಮಾತ್ರವೇ ಪರಿಗಣಿಸಲಾಗುವುದು’ ಎಂದು ಇವತ್ತು ಹೇಳಿದರು.

ಈ ಅಪಘಾತದಲ್ಲಿ ಬದುಕುಳಿದ ಕೆಲವರು ಹೇಳಿರುವ ಪ್ರಕಾರ “ಅಪಘಾತ ಸಂಭವಿಸಿದಾಗ ಬಸ್ಸಿನಲ್ಲಿ ಕೇವಲ 13 ಮಂದಿ ಪ್ರಯಾಣಿಕರು ಮಾತ್ರವೇ ಇದ್ದರು; ಜತೆಗೆ ಚಾಲಕ, ಹೆಲ್ಪರ್‌ ಇದ್ದರು. ಒಟ್ಟು 32 ಮಂದಿ ಪ್ರಯಾಣಿಕರು ತಮ್ಮ ಸೀಟ್‌ ಬುಕ್‌ ಮಾಡಿದ್ದರು. ಆದರೆ ಮುಜಫ‌ರನಗರದಲ್ಲಿ ಬಸ್‌ ಹತ್ತಿದವರು 13 ಮಂದಿ ಮಾತ್ರ; ಉಳಿದವರು ಗೋಪಾಲ್‌ಗ‌ಂಜ್‌ನಲ್ಲಿ ಬಸ್ಸು ಹತ್ತುವವರಿದ್ದರು.

ಸಚಿವರು ಇವತ್ತು ಹೇಳಿರುವುದು ಇಷ್ಟು : ಅಪಘಾತ ಸಂಭವಿಸಿದಾಗ ಬಸ್ಸಿನಲ್ಲಿ 13 ಮಂದಿ ಮಾತ್ರವೇ ಇದ್ದರು. ಎಂಟು ಮಂದಿಯನ್ನು ಅಧಿಕಾರಿಗಳು ಆಸ್ಪತ್ರೆಗೆ ಒಯ್ದಿದ್ದರು. ಉಳಿದ ಐದು ಮಂದಿಯ ಸುಳಿವೇ ಇರಲಿಲ್ಲ; ಅವರ ಯಾವುದೇ ಅವಶೇಷಗಳೂ ಸಿಕ್ಕಿಲ್ಲ; ಅಪಘಾತ ಸಂಭವಿಸಿದಾಕ್ಷಣ ಆ ಐವರು ತಾವೇ ಸ್ಥಳದಿಂದ ನಿರ್ಗಮಿಸಿರಬಹುದು.

ದಿಲ್ಲಿಗೆ ಹೊರಟಿದ್ದ ಬಸ್ಸು ಬಿಹಾರದ ಪೂರ್ವ ಚಂಪಾರಣ್‌ ಜಿಲ್ಲೆಯ ಹೈವೇ ಯಲ್ಲಿ ಸ್ಕಿಡ್‌ ಆಗಿ ಆಳವಾದ ಕಮರಿಗೆ ಉರುಳಿ ಬಿದ್ದು ಬೆಂಕಿ ಹೊತ್ತಿಕೊಂಡಿತ್ತು. ಈ ಘಟನೆ ನಡೆದದ್ದು ಮೋತಿಹಾರಿಯಿಂದ 30 ಕಿ.ಮೀ. ದೂರದ ಕೋತ್ವಾ ಪೊಲೀಸ್‌ ಠಾಣೆ ವ್ಯಾಪ್ತಿಗೆ ಒಳಪಡುವ ಬೇಲ್ವಾ ಗ್ರಾಮಕ್ಕೆ ಸಮೀಪದ 28ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ.

ಹವಾ ನಿಯಂತ್ರಿತ ಖಾಸಗಿ ಬಸ್ಸು ಮೋತಿಹಾರಿಯಿಂದ 85 ಕಿ.ಮೀ. ದೂರದ ಮುಜಫ‌ರಪುರದಿಂದ ತನ್ನ ಯಾನವನ್ನು ಆರಂಭಿಸಿತ್ತು. ಬೆಂಕಿಹೊತ್ತಿಕೊಂಡು ಉರಿದ ಬಸ್ಸಿನಲ್ಲಿ ಯಾವುದೇ ದೇಹಗಳು ಸಿಕ್ಕಿಲ್ಲ.

-Udayavani

Comments are closed.