ಮನೋರಂಜನೆ

ಹರೀಶ್ ಶೇರಿಗಾರ್ ನಿರ್ಮಾಣದ “ಮಾರ್ಚ್ 22” ಸಿನೆಮಾದ ಹಾಡಿಗೆ ’65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ ಪ್ರದಾನ; ‘ಅತ್ಯುತ್ತಮ ಗೀತ ರಚನೆ’ಕಾರ ಪ್ರಶಸ್ತಿ ಸ್ವೀಕರಿಸಿದ ಪ್ರಹ್ಲಾದ್

Pinterest LinkedIn Tumblr

ನವದೆಹಲಿ: ಕನ್ನಡ ಚಿತ್ರರಂಗದಲ್ಲಿ ಭಾರೀ ಸಂಚಲನವನ್ನು ಮೂಡಿಸಿದ್ದ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಹಾಗು ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಾಣದ ‘ಮಾರ್ಚ್ 22’ ಕನ್ನಡ ಚಿತ್ರದ ಹಾಡಿನ ಗೀತ ರಚನೆಗೆ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿದ್ದು, ಗುರುವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನೀರಿಗೆ ಸಂಬಂಧಿಸಿ ಸಮಾಜದಲ್ಲಿ ಸೌಹಾರ್ದತೆಯನ್ನು ಬಿಂಬಿಸುವಂಥ ಕಥಾ ಹಂದರವನ್ನು ಇಟ್ಟುಕೊಂಡು ACME ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಖ್ಯಾತ ಉದ್ಯಮಿ ಹಾಗೂ ಹೆಸರಾಂತ ಹಿನ್ನೆಲೆ ಗಾಯಕ ಹರೀಶ್ ಶೇರಿಗಾರ್ ಹಾಗು ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಾಣದಲ್ಲಿ, ಕೋಡ್ಲು ರಾಮಕೃಷ್ಣ ನಿರ್ದೇಶನದಲ್ಲಿ ಮೂಡಿಬಂದ ‘ಮಾರ್ಚ್ 22’ ಕನ್ನಡ ಚಿತ್ರದ ಬಗ್ಗೆ ಅಪಾರ ಮೆಚ್ಚುಗೆ, ವಿಮರ್ಶೆಗಳು ವ್ಯಕ್ತವಾಗಿದ್ದವು.

ಈ ಸಿನೆಮಾದ ಅರ್ಥಗರ್ಭಿತ ಹಾಡು ‘ಮುತ್ತು ರತ್ನದ ಪ್ಯಾಟೆ’ ಹಾಡಿನ ಗೀತ ರಚನೆಗೆ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ‘ಅತ್ಯುತ್ತಮ ಗೀತ ರಚನೆ’ ಪ್ರಶಸ್ತಿಯನ್ನು ಗೀತ ರಚನಾಕಾರ ಪ್ರಹ್ಲಾದ್ ಅವರು ಹರೀಶ್ ಶೇರಿಗಾರ್ ಉಪಸ್ಥಿತಿಯಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿಯನ್ನು ವಾರ್ತಾ ಮತ್ತು ಪ್ರಸಾರ ಸಚಿವೆ ಸ್ಮೃತಿ ಇರಾನಿ ಮತ್ತು ರಾಜ್ಯ ಖಾತೆಯ ಸಚಿವ ರಾಜ್ಯವರ್ಧನ ರಾಥೋಡ್‌ ಅವರು ಪ್ರದಾನ ಮಾಡಿದರು.

 

ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದ 10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ಮಾರ್ಚ್-22’ ಆಯ್ಕೆಯಾಗಿತ್ತು.

ಸಿನೆಮಾ ಜಗತ್ತಿಗೆ ಎಂಟ್ರಿ ನೀಡಿದ ಹರೀಶ್ ಶೇರಿಗಾರ್ ಹಾಗು ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ಅವರ ನಿರ್ಮಾಣದ ‘ಮಾರ್ಚ್ 22’ ಮೊದಲ ಕಾಣಿಕೆಯಾದರೆ, ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿರುವ ಈ ಚಿತ್ರದ ‘ಮುತ್ತು ರತ್ನದ ಪ್ಯಾಟೆ’ ಹಾಡಿನಲ್ಲಿ ಯುಎಇಯ ಹೆಸರಾಂತ ಉದ್ಯಮಿ, ಪದ್ಮಶ್ರೀ ಪುರಸ್ಕೃತ ಡಾ.ಬಿ.ಆರ್.ಶೆಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಇನ್ನೊಂದು ವಿಶೇಷ. ಈ ಹಾಡಿಗೆ ಕದ್ರಿ ಮಣಿಕಾಂತ್ ಸಂಗೀತ ನೀಡಿದ್ದಾರೆ. ಬಾಲಿವುಡ್’ನ ಖ್ಯಾತ ಗಾಯಕ ಕೈಲಾಶ್ ಖೇರ್ ಅದ್ಭುತವಾಗಿ ಹಾಡಿದ್ದಾರೆ.

ಹರೀಶ್ ಶೇರಿಗಾರ್ ಹಾಗು ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ಅವರ ನಿರ್ಮಾಣದ ನಟ ಜೈಜಗದೀಶ್ ಅವರ ಮಕ್ಕಳ ‘ಯಾನ’ ಹಾಗು ಅನಂತ್ ನಾಗ್-ರಾಧಿಕಾ ಚೇತನ್ ನಟನೆಯ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ತೆರೆಕಾಣಲು ಸಿದ್ಧವಾಗಿದೆ.

ಸಾಮಾಜಿಕ ಕಳಕಳಿಯುಳ್ಳ, ಸಮಾಜದಲ್ಲಿ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯಬಲ್ಲ, ಸದಭಿರುಚಿಯ ಈ ಸಿನೆಮಾದಲ್ಲಿ ಹಿರಿಯ ನಟ ಅನಂತ್ ನಾಗ್ ಹಾಗೂ ಗೀತಾ ಜೊತೆ ಹಿರಿಯ ಕಲಾವಿದರಾದ ಶರತ್ ಲೋಹಿತಾಶ್ವ, ಅಶೀಷ್ ವಿದ್ಯಾರ್ಥಿ, ಸಾಧು ಕೋಕಿಲಾ, ಜೈಜಗದೀಶ್, ರವಿ ಕಾಲೇ, ವಿನಯಾ ಪ್ರಸಾದ್, ಪದ್ಮಜಾ ರಾವ್, ರಮೇಶ್ ಭಟ್, ಶ್ರೀನಿವಾಸ್ ಮೂರ್ತಿ, ರವೀಂದ್ರನಾಥ್ ಸೇರಿದಂತೆ ಹಲವು ಹಿರಿಯ ನಟ-ನಟಿಯರು ನಟಿಸಿದ್ದು, ಆರ್ಯವರ್ಧನ್ ಮತ್ತು ಕಿರಣ್ ರಾಜ್ ನಾಯಕರಾಗಿ ಕಾಣಿಸಿಕೊಂಡಿದ್ದು, ಮೇಘಶ್ರೀ ಮತ್ತು ದೀಪ್ತಿ ಶೆಟ್ಟಿ ನಾಯಕಿಯರಾಗಿ ತಮ್ಮ ನಟನೆಯನ್ನು ಮುಂದಿಟ್ಟಿದ್ದಾರೆ. ಜೊತೆಗೆ ಕಿಶೋರ್, ಸೃಜನ್ ರೈ, ಶಾಂತಾ ಆಚಾರ್ಯ, ದುಬೈಯ ರಂಗಭೂಮಿ ಕಲಾವಿದರಾದ ಚಿದಾನಂದ ಪೂಜಾರಿ, ಸುವರ್ಣ ಸತೀಶ್, ಪ್ರಶೋಭಿತ ಮುಂತಾದವರು ನಟಿಸಿದ್ದಾರೆ.

Comments are closed.