ಮನೋರಂಜನೆ

ಎಲ್ಲಾ ಕಡೆಗೂ ಕಾಸ್ಟಿಂಗ್ ಕೌಚ್ ಇದೆ: ಶ್ರೇಯಾ

Pinterest LinkedIn Tumblr

*ಶರಣು ಹುಲ್ಲೂರು

ರಕ್ಷಿತ್‌ ಶೆಟ್ಟಿ ಮತ್ತು ಪುಷ್ಕರ್‌ ಮಲ್ಲಿಕಾರ್ಜುನ್‌ ನಿರ್ಮಾಣದ ‘ಕಥೆಯೊಂದು ಶುರುವಾಗಿದೆ’ ಸಿನಿಮಾದಲ್ಲಿ ಶ್ರೇಯಾ ಅಂಚನ್‌ ಹೊಸ ರೀತಿಯ ಪಾತ್ರವನ್ನು ಮಾಡಿದ್ದಾರೆ. ಈ ಕುರಿತು ಅವರು ಲವಲವಿಕೆಯ ಜತೆ ಮಾತನಾಡಿದ್ದಾರೆ.

* ಕಥೆಯೊಂದು ಶುರುವಾಗಿದೆ ಸಿನಿಮಾದಲ್ಲಿ ನಿಮ್ಮದು ಯಾವ ರೀತಿಯ ಪಾತ್ರ?

ಅದೊಂದು ಸ್ವರ್ಣ ಹೆಸರಿನ ಪಾತ್ರ. ಆಕೆ ತನ್ನ ಜೀವನದ ಬಗ್ಗೆ ಅದ್ಭುತ ಕಲ್ಪನೆ ಕಟ್ಟಿಕೊಂಡಿರುವ ಹುಡುಗಿ. ಅಲ್ಲದೇ, ಇಪ್ಪತ್ತರ ಹರೆಯದ ಹುಡುಗಿಯರ ಪ್ರತಿನಿಧಿಯಾಗಿ ಈ ಸಿನಿಮಾದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಆಕೆಯ ಕನಸು ಕನವರಿಕೆಗಳೇ ಬೇರೆಯದ್ದು. ಅದೊಂದು ಊಹೆಗೂ ಸಿಗದ ವಿಭಿನ್ನ ಪಾತ್ರ.

* ನಿರ್ದೇಶಕರು ನಿಮ್ಮ ಪಾತ್ರದ ಬಗ್ಗೆ ವಿವರಿಸಿದಾಗ ಅದಕ್ಕಾಗಿ ನಿಮ್ಮಲ್ಲಿ ಏನಾದರೂ ಬದಲಾವಣೆ ಬೇಕು ಅಂತ ಅನಿಸಿತ್ತಾ?

ಈಗಾಗಲೇ ನಾನು ಕನ್ನಡದಲ್ಲಿ ಒಂದು, ತುಳುವಿನಲ್ಲಿ ಎರಡು ಸಿನಿಮಾಗಳನ್ನು ಮಾಡಿದ್ದೇನೆ. ಕಥೆಯೊಂದು ಶುರುವಾಗಿದೆ ನನ್ನ ನಾಲ್ಕನೇ ಸಿನಿಮಾ. ಪ್ರತಿ ಪಾತ್ರದ ವಿವರ ಕೇಳಿದಾಗಲೂ ನನ್ನಲ್ಲೊಂದು ಸಿದ್ಧತೆ ಶುರುವಾಗುತ್ತದೆ. ಕಥೆಯೊಂದು ಶುರುವಾಗಿದೆ ಸ್ಟೋರಿ ಕೇಳಿದಾಗಲೂ ಅಂಥದ್ದೊಂದು ಸಿದ್ಧತೆ ನಡೆಯಿತು. ಜತೆಗೆ ನಿರ್ದೇಶಕ ಸೆನ್ನಾ ಹೆಗಡೆ ಕೂಡ ತಮ್ಮ ಕಲ್ಪನೆಯ ಪಾತ್ರ ಹೀಗೆಯೇ ಇರಬೇಕು ಎಂಬ ಸ್ಪಷ್ಟ ಕಲ್ಪನೆಯಿತ್ತು. ಹಾಗಾಗಿ ಕೆಲ ಬದಲಾವಣೆಯೊಂದಿಗೆ ಪಾತ್ರ ಮಾಡಿದ್ದೇನೆ.

* ನಿಮ್ಮ ಪಾತ್ರದೊಂದಿಗೆ ಯಾವ ರೀತಿಯ ಹುಡುಗಿಯರು ಹೋಲಿಕೆ ಮಾಡಿಕೊಳ್ಳುತ್ತಾರೆ?

ಮದುವೆಯ ಅಂಚಿಗೆ ಬಂದಿರುವ ಪ್ರತಿ ಹುಡುಗಿಯರೂ ನಾನು ನಿರ್ವಹಿಸಿದ ಪಾತ್ರವನ್ನು ಹೋಲಿಕೆ ಮಾಡಿಕೊಳ್ಳುತ್ತಾರೆ. ಮದುವೆ ಎಂಬ ಶಬ್ದ ಕೇಳಿದಾಕ್ಷಣ ಅವರಲ್ಲಿ ಒಂದು ಕನ್‌ಫ್ಯೂಷನ್‌ ಶುರುವಾಗುತ್ತದೆ. ಅಂತಹ ಗೊಂದಲದ ಹುಡುಗಿಯರ ತಲ್ಲಣಗಳು ಈ ಚಿತ್ರದಲ್ಲಿವೆ.

* ಕಥೆಯೊಂದು ಶುರುವಾಗಿದೆ ಸಿನಿಮಾ ಯಾವ ಕಾರಣಕ್ಕಾಗಿ ಸ್ಪೆಷಲ್‌ ಅಂತ ಹೇಳುತ್ತೀರಿ?

ಇಲ್ಲಿ ಮೂರು ಜನರೇಷನ್‌ ಕಥೆಯನ್ನು ಹೇಳುವ ಪ್ರಯತ್ನ ಆಗಿದೆ. ದಿಗಂತ್‌, ಪೂಜಾ, ಅಶ್ವಿನ್‌ ರಾವ್‌ ಹೀಗೆ ಪಾತ್ರ ಮಾಡಿದವರೂ ಕೂಡ ಆಯಾ ಕಾಲವನ್ನು ಪ್ರತಿನಿಧಿಸುವಂಥವರು. ಪಾತ್ರ ಮತ್ತು ಪಾತ್ರಧಾರಿ ಎರಡೂ ಭಾವಗಳ ಸಮ್ಮಿಶ್ರಣ ಇಲ್ಲಿದೆ. ಸಿಂಕ್‌ ಸೌಂಡ್‌ ಕೂಡ ಇರುವುದರಿಂದ ಯಾರೂ ನಟಿಸಿದ್ದಾರೆ ಅಂತ ಫೀಲ್‌ ಕೂಡ ಆಗಲ್ಲ. ನಮ್ಮ ಕಣ್ಮುಂದೆಯೇ ಕಥೆ ನಡೆಯುತ್ತಿದೆ ಎನ್ನುವಂತೆ ಮೇಕಿಂಗ್‌ ಇದೆ. ಹಾಗಾಗಿ ಇದೊಂದು ಸ್ಪೆಷಲ್‌ ಸಿನಿಮಾ ಅಂತ ಹೇಳಬಹುದು.

* ಹುಡುಗಿಯರು ಸಿನಿಮಾ ಇಂಡಸ್ಟ್ರಿಗೆ ಬರುವಾಗ ಕಷ್ಟ ಪಡಬೇಕಾಗುತ್ತಾ?

ನನ್ನದೇ ಅನುಭವ ಹೇಳಬೇಕಾದರೆ, ಸಿನಿಮಾ ರಂಗಕ್ಕೆ ನಾನು ಬಂದಾಗ ಯಾರೂ ಗಾಡ್‌ಫಾದರ್‌ ಅಂತ ಇರಲಿಲ್ಲ. ಇಂಡಸ್ಟ್ರಿ ಪರಿಚಯವೂ ನನಗೆ ಇರಲಿಲ್ಲ. ಹಾಗಾಗಿ ಕೆಟ್ಟ ಜನರನ್ನೂ ಭೇಟಿ ಮಾಡಿದ್ದೇನೆ, ಒಳ್ಳೆಯವರೂ ಸಿಕ್ಕಿದ್ದಾರೆ. ಒಳ್ಳೆಯವರ ಸಂಖ್ಯೆ ಹೆಚ್ಚಿದೆ. ನಾನು ಈವರೆಗೂ ಮಾಡಿರುವ ಪ್ರತಿ ಸಿನಿಮಾದ ಟೀಮ್‌ ನನಗೆ ಪ್ರೋತ್ಸಾಹ ನೀಡಿದೆ.

* ಕಾಸ್ಟಿಂಗ್‌ ಕೌಚ್‌ ಬಗ್ಗೆ ದೊಡ್ಡ ಮಟ್ಟದಲ್ಲಿಯೇ ಚರ್ಚೆ ಶುರುವಾಗಿದೆ. ಈ ಕುರಿತು ಏನು ಹೇಳುತ್ತೀರಿ?

ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಎಲ್ಲ ಕ್ಷೇತ್ರದಲ್ಲೂ ಕಾಸ್ಟಿಂಗ್‌ ಕೌಚ್‌ ಸಮಸ್ಯೆಯಿದೆ. ಹುಡುಗಿಯರು ಅಂದಾಕ್ಷಣ ನೋಡುವುದೇ ಕೆಟ್ಟ ದೃಷ್ಟಿಯಿಂದ. ಇಂಥದ್ದೊಂದು ವಾತಾವರಣ ಸಮಾಜದಲ್ಲಿ ನಿರ್ಮಾಣವಾಗಿದೆ. ಹಾಗಾಗಿ ಅದರ ವಿರುದ್ಧ ಕೂಗು ಎದ್ದಿದೆ. ಮನಸ್ಥಿತಿ ಸರಿ ಹೋದರೆ, ಎಲ್ಲವೂ ಸರಿಯಾದೀತು. ಅಂಥದ್ದೊಂದು ಆಶಾಭಾವನೆ ನನ್ನಲ್ಲಿದೆ.

Comments are closed.