ಕರ್ನಾಟಕ

20ಸಾವಿರ ಸರ್ಕಾರಿ ನೌಕರರ ಶೇ.20 ಸಂಬಳಕ್ಕೆ ಕತ್ತರಿ!

Pinterest LinkedIn Tumblr

| ಶ್ರೀಕಾಂತ್ ಶೇಷಾದ್ರಿ


ಬೆಂಗಳೂರು: ಮೀಸಲು ಮುಂಬಡ್ತಿ-ಹಿಂಬಡ್ತಿ ವಿಚಾರದಲ್ಲಿ ಸುಪ್ರಿಂಕೋರ್ಟ್ ಆದೇಶ ಪಾಲನೆಗೆ ಸರ್ಕಾರ ಒಲ್ಲದ ಮನಸ್ಸಿನಿಂದ ಅಣಿಯಾಗುತ್ತಿರುವ ಬೆನ್ನಲ್ಲೇ, ಹಿಂಬಡ್ತಿ ಆತಂಕದಲ್ಲಿರುವ 20 ಸಾವಿರ ಅಧಿಕಾರಿಗಳು, ನೌಕರರ ಸಂಬಳಕ್ಕೂ ಕತ್ತರಿ ಬೀಳುವುದು ಖಚಿತವಾಗಿದೆ. ಹಿಂಬಡ್ತಿ ಪಡೆಯುವವರಿಗೆ ಮಾಸಿಕ ವೇತನದ ಶೇ.20ಕ್ಕಿಂತ ಹೆಚ್ಚಿನ ಹಣ ಕಡಿತವಾಗಲಿದೆ.

ಸುಪ್ರಿಂ ಆದೇಶದಂತೆ ಹುದ್ದೆಯಲ್ಲಿ ಹಿಂಬಡ್ತಿ ಜಾರಿಗೆ ತಂದರೂ, ವೇತನಶ್ರೇಣಿಯಲ್ಲಿ ಬದಲಾವಣೆ ಮಾಡದೆ ಇರಲು ಸರ್ಕಾರ ಇಚ್ಛಿಸಿತ್ತು. ಆದರೆ, ಹುದ್ದೆಗೆ ತಕ್ಕ ವೇತನಶ್ರೇಣಿ ಪಾಲನೆಯಾಗಿಲ್ಲ ಎಂಬ ವಿಚಾರಕ್ಕೆ ಆಡಿಟರ್ ಜನರಲ್ ಆಕ್ಷೇಪ ಎದುರಾಗಬಹುದೆಂಬ ಗಂಭೀರ ಸಲಹೆ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ತನ್ನ ನಿಲುವು ಸಡಿಲಿಸುವ ಅನಿವಾರ್ಯತೆ ಎದುರಾಗಿದೆ. ಹುದ್ದೆಗೆ ಸಮನಾದ ವೇತನದ ಬದಲು ಹೆಚ್ಚಿಗೆ ವೇತನ ನೀಡುವುದು ಸರಿಯಾದ ಕ್ರಮವಲ್ಲ. ಈ ಕಾರಣಕ್ಕೆ ಆಡಿಟರ್ ಜನರಲ್ ಸರ್ಕಾರದ ಪ್ರಸ್ತಾಪ ಒಪು್ಪವುದು ಕಷ್ಟ ಎಂಬುದು ಹಣಕಾಸು ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಆದ್ದರಿಂದ ಹಿಂಬಡ್ತಿಗೊಳ್ಳುವ ಅಧಿಕಾರಿಗಳು ಎರಡು ರೀತಿಯ ಮುಜುಗರಕ್ಕೆ ಒಳಗಾಗುವಂತಾಗಿದೆ.

ಸೌಲಭ್ಯಗಳಿಗೂ ಕತ್ತರಿ: ಎಕ್ಸಿಕ್ಯುಟೀವ್ ಹುದ್ದೆಯಲ್ಲಿನ ಅಧಿಕಾರಿಗಳು ಹಿಂಬಡ್ತಿಗೊಂಡಲ್ಲಿ ಸರ್ಕಾರಿ ವಾಹನ ಬಳಸುವ ಅವಕಾಶ ಕಳೆದುಕೊಳ್ಳುತ್ತಾರೆ. ಹಾಗೆಯೇ ಹುದ್ದೆಗೆ ತಕ್ಕಂತೆ ಸಹಜವಾಗಿ ಲಭ್ಯವಾಗಿದ್ದ ವಿಶೇಷ ಚೇಂಬರ್ ಸೌಲಭ್ಯದಿಂದ ವಂಚಿತರಾಗಲಿದ್ದಾರೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹತ್ತಾರು ವರ್ಷಗಳಿಂದ ಮುಂಬಡ್ತಿ ಮೀಸಲು ಭಾಗ್ಯಪಡೆದವರು ಇನ್ನು ಮುಂದೆ ಹುದ್ದೆ ಜತೆಗೆ ವೇತನವನ್ನೂ ಕಳೆದುಕೊಳ್ಳಲಿದ್ದು, ಅಧಿಕಾರಿ ಗತ್ತು ತೊರೆದು ಸಾಮಾನ್ಯ ನೌಕರರ ಜತೆಗೆ ಕುಳಿತು ಕೆಲಸ ಮಾಡಬೇಕಾದ ಸಂದರ್ಭ ಎದುರಾಗಲಿದೆ. ಇದೇ ವೇಳೆ ಹಿಂಬಡ್ತಿಗೊಂಡವರ ಸ್ಥಳಕ್ಕೆ ಜ್ಯೇಷ್ಠತಾಪಟ್ಟಿಯನುಸಾರ ಬಡ್ತಿ ಪಡೆದುಕೊಳ್ಳುವವರು ವೇತನ ಹೆಚ್ಚಳದ ಅವಕಾಶ ಪಡೆದುಕೊಳ್ಳುವರು. ಸರ್ಕಾರಕ್ಕೆ ಈ ಬೆಳವಣಿಗೆಯಿಂದ ಆರ್ಥಿಕವಾಗಿ ಯಾವುದೇ ಹೊರೆಯಾಗದೇ ಇದ್ದರೂ, ಹಿಂಬಡ್ತಿ ಹೊಂದಿದವರ ಜೇಬಿಗೆ ಮಾತ್ರ ದೊಡ್ಡ ಕತ್ತರಿ ಬೀಳಲಿದೆ.

9ಕ್ಕೆ ವಿಚಾರಣೆ

ಮೇ 1ರೊಳಗೆ ಈ ಪ್ರಕ್ರಿಯೆ ನಡೆಸಲು ಕೆಲವೇ ಕೆಲವು ಇಲಾಖೆ ಅಧಿಕಾರಿಗಳು ಆಸಕ್ತಿ ವಹಿಸಿ ಅನುಪಾಲನಾ ವರದಿ ಅಪೇಕ್ಷಿಸಿದ್ದಾರೆ. ಮತ್ತೆ ಕೆಲವು ಇಲಾಖೆಗಳಲ್ಲಿ ಹಿಂಬಡ್ತಿಗೊಳಿಸಿದ ಆದೇಶ ಹೊರಡಿಸಿದ್ದಾರೆ. ಅಂದರೆ ಜ್ಯೇಷ್ಠತಾ ಪಟ್ಟಿಯನುಸಾರ ಅರ್ಹರಿಗೆ ಬಡ್ತಿ ನೀಡಿ ಆದೇಶ ನೀಡದೇ ಇರುವುದು ವಿವಿಧ ಇಲಾಖೆಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಪ್ರಮುಖ ಹುದ್ದೆಗಳಲ್ಲಿರುವವರು ಹಿಂಬಡ್ತಿಗೊಂಡರೂ ಅವರು ಅಧಿಕಾರ ಬಿಟ್ಟುಕೊಡದೆ ರಜೆ ಮೇಲೆ ತೆರಳಿದ್ದಾರೆ. ಇನ್ನು ಕೆಲವರಿಗೆ ಹಿಂಬಡ್ತಿ ನೀಡಿ ಸ್ಥಳ ನಿಯೋಜನೆ ಮಾಡದೇ ಅದೇ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಡಲಾಗಿದೆ.

ಮೇ 9ರಂದು ಸುಪ್ರಿಂಕೋರ್ಟ್​ನಲ್ಲಿ ಪ್ರಕರಣ ವಿಚಾರಣೆಗೆ ಬರಲಿದ್ದು, ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅನುಪಾಲನಾ ವರದಿ ಸಲ್ಲಿಸಲಿದೆ. ಇನ್ನೊಂದು ಕಡೆ ಅಹಿಂಸಾ ಸಂಘಟನೆ ಮೇ 9ರಂದು ಸರ್ಕಾರದ ಸಲ್ಲಿಸಿರುವ ಅನುಪಾಲನಾ ವರದಿಯಲ್ಲಿನ ದೋಷದ ಬಗ್ಗೆ ವಿವರಣೆ ನೀಡುವ ಅವಕಾಶ ಪಡೆದುಕೊಂಡಿದೆ. ಇದೇ ವೇಳೆ ಶೇ.18ರ ಮೀಸಲು ನೀಡುವ ವಿಚಾರದಲ್ಲಿ ಸರ್ಕಾರ ಇತ್ತೀಚೆಗೆ ಹೊರಡಿಸಿದ ಆದೇಶವನ್ನು ನ್ಯಾಯಾಲಯದ ಗಮನಕ್ಕೆ ತರಲು ಅಹಿಂಸಾ ನಿರ್ಧರಿಸಿದೆ. ಸಮಗ್ರ ಪ್ರಾತಿನಿಧ್ಯ ವರದಿಯನುಸಾರ ಮೀಸಲು ನೀಡಬೇಕು, ಆದರೆ ಸರ್ಕಾರ ಅಂಥದ್ದೊಂದು ವರದಿಯನ್ನೇ ಮಾಡಿಕೊಂಡಿಲ್ಲ ಎಂಬುದು ಅಹಿಂಸಾ ಸಂಘಟನೆ ವಾದ.

ಲಕ್ಷ ಲಕ್ಷಕ್ಕೆ ಸ್ಥಳ ಬಿಕರಿ

ಸುಪ್ರಿಂ ಆದೇಶದ ಪ್ರಕಾರ ಮೇ 1 ರೊಳಗೆ ಎಲ್ಲ ಇಲಾಖೆಗಳ ಹಿಂಬಡ್ತಿ ಮುಂಬಡ್ತಿ ಪ್ರಕ್ರಿಯೆ ಮುಗಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ. ಈ ಕಾರಣಕ್ಕೆ ತಕ್ಷಣವೇ ಸುಪ್ರಿಂ ಆದೇಶ ಪಾಲನೆಗೆ ಎಲ್ಲ ಇಲಾಖೆ ಮುಖ್ಯ ಅಧಿಕಾರಿಗಳು ಇಲಾಖೆ ಸಂದೇಶ ಕಳುಹಿಸಿ ತಕ್ಷಣವೇ ಅನುಪಾಲನಾ ವರದಿ ಕೇಳಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಕೆಲವು ಇಲಾಖೆಗಳ ಕೆಳ ಹಂತದ ಅಧಿಕಾರಿಗಳು ಸ್ಥಳ ನಿಯೋಜನೆಗೆ ಹಣಕ್ಕಾಗಿ ಬೇಡಿಕೆ ಇಡುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ. ‘ಹೊಸ ಸರ್ಕಾರ ಬರುವುದರೊಳಗೆ ಸ್ಥಳ ನಿಯೋಜನೆ ನಮ್ಮದೇ ತೀರ್ವನ. ನೀವು ಕೇಳಿದಲ್ಲಿಗೆ ಹಾಕಿಕೊಡುತ್ತೇವೆ ಎಂದು ಪ್ರಮುಖ ಹುದ್ದೆಗಳಿಗೆ ಎರಡರಿಂದ ಐದು ಲಕ್ಷ ರೂಪಾಯಿವರೆಗೆ ಬೇಡಿಕೆ ಇಡಲಾಗುತ್ತಿದೆ’ ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಒಬ್ಬರು ಗಂಭೀರ ಆರೋಪ ಮಾಡಿದ್ದಾರೆ.

Comments are closed.