ಮನೋರಂಜನೆ

ಸೌಂದರ್ಯದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ತ್ರಿಪುರಾ ಸಿಎಂಗೆ ತಿರುಗೇಟು ನೀಡಿದ ಡಯಾನ

Pinterest LinkedIn Tumblr

ಮುಂಬೈ: ನನ್ನ ವಿನೂತನ ಕಂದು ಬಣ್ಣದ ಬಗ್ಗೆ ನನಗೆ ಹೆಮ್ಮೆ ಎಂದು ಹೇಳುವ ಮೂಲಕ ಮಾಜಿ ವಿಶ್ವ ಸುಂದರಿ ಡಯಾನ್ ಹೇಡನ್ ಅವರು ತಮ್ಮ ಸೌಂದರ್ಯದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ತ್ರಿಪುರಾ ಮುಖ್ಯಮಂತ್ರಿ ಬಿಪ್ಲವ್ ದೇಬ್ ಅವರಿಗೆ ಶುಕ್ರವಾರ ತಿರುಗೇಟು ನೀಡಿದ್ದಾರೆ.

ನಿನ್ನೆ ಅಗರತಾಲದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ದೇಬ್, ಡಯಾನಾ ಹೇಡನ್ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಗೆದ್ದಿದ್ದಾರೆ. ಈ ವಿಷಯವನ್ನು ಕೇಳಿದ ಪ್ರತಿಯೊಬ್ಬರೂ ನಗುತ್ತಾರೆ. ನೀವೇ ಹೇಳಿ, ಡಯಾನಾ ಗೆಲ್ಲಲು ಸಾಧ್ಯವೇ? ಎಂದು ಪ್ರಶ್ನಿಸಿದ್ದರು. ಭಾರತೀಯ ಸೌಂದರ್ಯ ಎಂದರೆ ದೇವತೆಗಳಾದ ಲಕ್ಷ್ಮಿ, ಸರಸ್ವತಿಯರದು. ಡಯಾನ ಹೇಡನ್ ಈ ದರ್ಜೆಯ ಸೌಂದರ್ಯಕ್ಕೆ ಸೂಕ್ತವಲ್ಲ ಎಂದು ಅವರು ವಿವಾದದ ಕಿಡಿ ಹಚ್ಚಿದ್ದರು.

ಐಶ್ವರ್ಯ ರೈ ಅವರ ಗೆಲುವು ನ್ಯಾಯಸಮ್ಮತ. ಅವರದ್ದು ಭಾರತೀಯ ಸೌಂದರ್ಯ ಎಂದಿದ್ದ ದೇಬ್, ಡಯಾನ ಹೇಡನ್ ಅವರ ಆಯ್ಕೆಯ ಹಿಂದೆ ವ್ಯಾವಹಾರಿಕ ಕಾರಣಗಳಿವೆ ಎಂದು ಕೂಡ ಆರೋಪಿಸಿದ್ದರು.

ಕಂದು ಬಣ್ಣದ ಪೂರ್ವಾಗ್ರಹದ ವಿರುದ್ಧ ನಾನು ಬಾಲ್ಯದಿಂದ ಹೋರಾಡುತ್ತಿದ್ದೇನೆ ನನ್ನ ಹೋರಾಟದಲ್ಲಿ ನಾನು ಯಶಸ್ಸು ಸಾಧಿಸಿದ್ದೇನೆ ಎಂದು ಎಂದು ಡಯಾನ ಇಂದು ಪ್ರಕಟಣೆಯಲ್ಲಿ ತಿಸಿದ್ದಾರೆ.

ಜನ ನನ್ನನ್ನು ಕೀಳಾಗಿ ಕಾಣುವುದರ ಬದಲು, ನನ್ನ ಸಾಧನೆಗಳ ಕುರಿತು ಹೆಮ್ಮೆಪಡಬೇಕು ಎಂದು ಪರೋಕ್ಷವಾಗಿ ಬಿಪ್ಲವ್ ದೇಬ್ ​ಗೆ ತಿರುಗೇಟು ನೀಡಿದ್ದಾರೆ. ಜೊತೆಗೆ ಕಂದು ಬಣ್ಣ ಹೊಂದಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ ಎಂದು 1997ರಲ್ಲಿ ವಿಶ್ವ ಸುಂದರಿ ಕಿರೀಟ ಧರಿಸಿದ್ದ ಡಯಾನ ಹೇಳಿದ್ದಾರೆ.

ಸಿಎಂ ಹೇಳಿಕೆಯಿಂದ ನನಗೆ ನೋವಾಗಿದೆ. ದೇಬ್ ಅವರು ಪ್ರಮುಖ ಹುದ್ದೆಯಲ್ಲಿದ್ದಾರೆ, ಅಂಥವರು ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸಬೇಕು ಎಂದು ಡಯಾನ ಸಲಹೆ ನೀಡಿದ್ದಾರೆ.

Comments are closed.