ಹರ್ಷಿಕಾ ಪೂಣಚ್ಚ ಈ ಹಿಂದೆ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಅಲ್ಲಿನ ಎರಡು ಹಿಂದಿ ಸಿನಿಮಾಗಳಿಗೆ ಸಹಿ ಹಾಕಿದ್ದಾರೆ ಎಂಬ ಸುದ್ದಿ ಇದೇ ಬಾಲ್ಕನಿಯಲ್ಲಿ ಬಂದಿತ್ತು. ಅದಾಗಿ ಸ್ವಲ್ಪ ದಿನಗಳ ಬಳಿಕ ಹರ್ಷಿಕಾ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಎಂದು ಹೇಳಿದ್ದರು. ಆದರೆ, ಯಾಕೆ ನಟಿಸುತ್ತಿಲ್ಲ ಎಂಬುದಕ್ಕೆ ಸ್ಪಷ್ಟ ಉತ್ತರ ಕೊಟ್ಟಿರಲಿಲ್ಲ. ಅವರೀಗ ಅದಕ್ಕೊಂದು ಸ್ಪಷ್ಟನೆ ಕೊಟ್ಟಿದ್ದಾರೆ. ಅವರೇ ಹೇಳುವಂತೆ, “ಬಾಲಿವುಡ್ ಆಫರ್ ಬಿಡಲು ಕಾರಣ ಕಾಸ್ಟಿಂಗ್ ಕೌಚ್. ಹೌದು, ನನಗೂ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ.
ಬಾಲಿವುಡ್ ಆಫರ್ ಬಂದಿದ್ದು ಸುಳ್ಳಲ್ಲ. ಎರಡು ಹಿಂದಿ ಚಿತ್ರಗಳಿಗೆ ಅಗ್ರಿಮೆಂಟ್ ಕೂಡ ಮಾಡಿಕೊಂಡಿದ್ದೆ. ಇನ್ನೇನು ಅಡ್ವಾನ್ಸ್ ಆಗಬೇಕು ಎನ್ನುವಷ್ಟರಲ್ಲಿ, ಅಲ್ಲಿನ ಮ್ಯಾನೇಜರ್ ಒಬ್ಬರು, ಕಮಿಟ್ಮೆಂಟ್ ಇರುತ್ತೆ ಅಂದಾಗ, ತಕ್ಷಣವೇ ನಾನು ಆ ಎರಡು ಪ್ರಾಜೆಕ್ಟ್ ಕೈ ಬಿಟ್ಟು, ಫ್ಲೈಟ್ನಲ್ಲಿ ಬೆಂಗಳೂರಿಗೆ ಬಂದಿಳಿದೆ. ಬಾಲಿವುಡ್ನಲ್ಲಿ ನನಗದು ಬ್ಯಾಡ್ ಎಕ್ಸ್ಪೀರಿಯನ್ಸ್ ಆಯ್ತು. ಪ್ರತಿಯೊಂದು ಅನುಭವ ಕೂಡ ಹೊಸದಾಗಿಯೇ ಇರುತ್ತೆ. ಆದರೆ, ಬಾಲಿವುಡ್ನಲ್ಲಿ ನನಗೆ ಆ ರೀತಿ ಆಗಿದ್ದು ಮರೆಯುವಂತಿಲ್ಲ. ಬೆಂಗಳೂರಿಗೆ ಬಂದಾಗ, ಎಷ್ಟೋ ಜನ ಬಾಲಿವುಡ್ ಸಿನಿಮಾಗಳ ಸುದ್ದಿ ಸುಳ್ಳು ಅಂತಾನೂ ಭಾವಿಸಿಕೊಂಡರು. ಆದರೆ, ನಿಜ ಸುದ್ದಿ ಏನೆಂಬುದು ನನಗಷ್ಟೇ ಗೊತ್ತು. ಅದನ್ನು ಹೇಳಿಕೊಳ್ಳುವುದಕ್ಕೂ ನನಗೆ ಇಷ್ಟವಿರಲಿಲ್ಲ. ಈಗ ಬಾಲಿವುಡ್ ಸಿನಿಮಾ ವಿಷಯ ಬಂದಾಗ ಅನಿವಾರ್ಯವಾಗಿ ಹೇಳಿಕೊಳ್ಳಬೇಕಾಗಿದೆ ಎನ್ನುತ್ತಾರೆ ಹರ್ಷಿಕಾ.
ನನಗೆ ದೇವರು ಸಾಕಷ್ಟು ಆಯ್ಕೆಗಳನ್ನು ಕೊಟ್ಟಿದ್ದಾನೆ. ಹಾಗಂತ ಶಾರ್ಟ್ಕಟ್ ರೂಟ್ನಲ್ಲಿ ಹೋಗುವುದು ಇಷ್ಟವಿಲ್ಲ. ಅಂತಹ ಚಿತ್ರಗಳೂ ನನಗೆ ಬೇಕಿಲ್ಲ ಅಂತಾನೇ ಅಲ್ಲಿಂದ ಹಿಂದಿರುಗಿ ಬಂದೆ. ಎಲ್ಲರೂ ಹಾಗೇ ಇರುವುದಿಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡಿದ್ದೇನೆ. ನನ್ನೊಂದಿಗೆ ಯಾರೊಬ್ಬರೂ ಹಾಗೇ ಕೆಟ್ಟದ್ದಾಗಿ ನಡೆದುಕೊಂಡಿಲ್ಲ. ನಾನು ಕನ್ನಡ ಚಿತ್ರರಂಗಕ್ಕೆ ಬಂದಾಗ, 15 ವರ್ಷ ವಯಸ್ಸು. ಇಲ್ಲಿಗೆ ಬಂದು 11 ವರ್ಷಗಳಾಗಿವೆ. ಇಷ್ಟು ವರ್ಷಗಳಲ್ಲಿ ಅಂತಹ ಯಾವುದೇ ಕೆಟ್ಟ ಅನುಭವ ಆಗಿಲ್ಲ. ಇಲ್ಲಿ ಯಾರೋ ಒಂದಿಬ್ಬರು ಹಾಗೆ ಇರುತ್ತಾರೆ ಅಂದ ಮಾತ್ರಕ್ಕೆ ಎಲ್ಲರೂ ಹಾಗೆಯೇ ಇರುವುದಿಲ್ಲ. ನಿಜ ಹೇಳುವುದಾದರೆ, ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ನನಗಂತೂ ಅಂತಹ ಯಾವುದೇ ಅನುಭವ ಆಗಿಲ್ಲ ಎಂದಷ್ಟೇ ಹೇಳುತ್ತಾರೆ ಹರ್ಷಿಕಾ.
-ಉದಯವಾಣಿ
Comments are closed.