ಮನೋರಂಜನೆ

ಇದು ಹಾಲಿವುಡ್‌ ಲೆವೆಲ್‌ನ ಸಿನಿಮಾ

Pinterest LinkedIn Tumblr

4
ಯಶ್‌ ಮಾತಿಗೆ ಸಿಗುವುದು ಅಪರೂಪ. ಯಾಕೆ ಸಿಗುವುದಿಲ್ಲ ಎನ್ನುವುದಕ್ಕೂ ಕಾರಣವಿದೆ. ಅವರ ಕೊನೆಯ ಚಿತ್ರ “ಸಂತು ಸ್ಟ್ರೇಯ್ಟ್ ಫಾರ್ವರ್ಡ್‌’ ಬಿಡುಗಡೆಯಾಗಿ ಒಂದೂವರೆ ವರ್ಷಗಳಾಗಿವೆ. ಇನ್ನು ಒಂದು ವರ್ಷದಿಂದ “ಕೆಜಿಎಫ್’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಹಾಗಾಗಿ ಯಶ್‌ ಮತ್ತು ಮಾಧ್ಯಮದವರ ಮುಖಾಮುಖೀಯಾಗಿರಲಿಲ್ಲ. ಭಾನುವಾರ “ಬಕಾಸುರ’ ಚಿತ್ರದ ಪ್ರಚಾರದಲ್ಲಿ ಭಾಗವಹಿಸಿದ ಯಶ್‌, ನಂತರ ಮಾಧ್ಯಮದವರೊಂದಿಗೆ ಮನಬಿಚ್ಚಿ ಮಾತಾಡಿದರು. ಯಶ್‌ ಏನೆಲ್ಲಾ ಮಾತಾಡಿದ್ರು ಗೊತ್ತಾ?

ಯಶಸ್ಸಿನ ಅಡಿಪಾಯ: ಇಷ್ಟು ವರ್ಷದ ನನ್ನ ಯಶಸ್ಸು ಏನಿದೆ ಅದು ಕೇವಲ ನನ್ನ ಮುಂದಿನ ಪಯಣದ ಅಡಿಪಾಯವಷ್ಟೇ. ನನ್ನ ಕನಸುಗಳು ದೊಡ್ಡದಿವೆ. ಅವೆಲ್ಲವನ್ನು ಸಾಕಾರಗೊಳಿಸುತ್ತಾ ಮುಂದೆ ಸಾಗಲು ಒಂದು ಗಟ್ಟಿ ಅಡಿಪಾಯ ಬೇಕಿತ್ತು. ಅದು ಇಲ್ಲಿವರೆಗಿನ ಯಶಸ್ಸುನಲ್ಲಿ ಸಿಕ್ಕಿದೆ. “ಕೆಜಿಎಫ್’ ಚಿತ್ರದಿಂದ ನನ್ನ ಗುರಿ, ಕನಸುಗಳು ದೊಡ್ಡದಾಗಿವೆ.

ಹಾಲಿವುಡ್‌ ಮಟ್ಟದ ಸಿನಿಮಾ: ಕೆಜಿಎಫ್ ಮೂರು ವರ್ಷಗಳ ಹಿಂದಿನ ಕನಸು. ಈ ಚಿತ್ರ ನಮ್ಮ ಶಕ್ತಿಯನ್ನು ತೋರಿಸುತ್ತದೆ. ಕೆಜಿಎಫ್ನಿಂದ ಇಡೀ ದೇಶಕ್ಕೆ ಕನ್ನಡ ಚಿತ್ರರಂಗದ ಪರಿಚಯವಾಗುತ್ತದೆ. ನನ್ನ ಸಿನಿಮಾ ಎಂದು ಈ ಮಾತು ಹೇಳುತ್ತಿಲ್ಲ. ನಮ್ಮ ಚಿತ್ರರಂಗದಲ್ಲಿ ನಡೆಯೋ ಗುಣಮಟ್ಟದ ಕೆಲಸ, ಯಾವ ರೀತಿಯ ಸಿನಿಮಾಗಳು ಬರುತ್ತದೆ ಅನ್ನೋದು “ಕೆಜಿಎಫ್’ ಮೂಲಕ ತಿಳಿಯಲಿದೆ. ಇದು ಹಾಲಿವುಡ್‌ ಗುಣಮಟ್ಟದ ಸಿನಿಮಾ. ಸಿನಿಮಾ ಬಂದಾಗ ನಿಮಗೇ ಗೊತ್ತಾಗುತ್ತದೆ.

ಗುಣಮಟ್ಟ ಮುಖ್ಯ: ಇವತ್ತು ಸಿನಿಮಾಕ್ಕೆ ಭಾಷೆಯ ಬೇಲಿ ಇಲ್ಲ. ಡಿಜಿಟಲ್‌ ಮಾರುಕಟ್ಟೆ ಬೆಳೀತಾ ಇದೆ. ಯಾವ ಭಾಷೆಯ ಸಿನಿಮಾವನ್ನಾದರೂ ನೋಡುವ ಅವಕಾಶ ಸುಲಭವಾಗಿ ಸಿಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ಸಿನಿಮಾವನ್ನೂ ಬೇರೆ ಕಡೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಸಿನಿಮಾ ಬೇರೆ ಕಡೆ ತೂಗಬೇಕೆಂದಾಗ ಅದಕ್ಕೆ ಅದರದ್ದೇ ಆದ ಗುಣಮಟ್ಟವಿರಬೇಕು. ಅದನ್ನು ಮ್ಯಾಚ್‌ ಮಾಡಿದಾಗ ಮಾತ್ರ ಬಿಝಿನೆಸ್‌ ಹಾಗೂ ಇತರ ವಿಷಯಗಳಲ್ಲಿ ಯಶಸ್ಸು ಸಿಗುತ್ತದೆ. ನಿಮ್ಮ ಚಿತ್ರದ ಸಬೆಕ್ಟ್ ಏನೇ ಇರಬಹುದು. ಆದರೆ, ಅದನ್ನು ಹೇಗೆ ಕಟ್ಟಿಕೊಟ್ಟಿದ್ದೀರಿ ಎಂಬುದೂ ಕೂಡಾ ಮುಖ್ಯವಾಗುತ್ತದೆ.

ದೊಡ್ಡ ಬಜೆಟ್‌: ಚಿತ್ರದ ಬಜೆಟ್‌ ತುಂಬಾ ದೊಡ್ಡದು. ಖರ್ಚು ಮಾಡುತ್ತಾನೆ ಇದ್ದೇವೆ. ಅಷ್ಟೊಂದು ಖರ್ಚು ಬೇಕಾ ಎಂದು ನೀವು ಕೇಳಬಹುದು. ಚಿತ್ರದಲ್ಲಿನ ಸೂಕ್ಷ್ಮ ಅಂಶಗಳನ್ನು ತುಂಬಾ ನೀಟಾಗಿ ಮಾಡಲಾಗಿದೆ. ಎಲ್ಲೂ ರಾಜಿ ಆಗಿಲ್ಲ. ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಜೊತೆಗೆ ಇನ್ನಷ್ಟು ಭಾಷೆಯಿಂದಲೂ ಬೇಡಿಕೆ ಬಂದಿದ್ದು, ಮಾತುಕತೆ ನಡೆಯುತ್ತಿದೆ.

ಮುಂದೆ ಬೇಗ ಸಿನಿಮಾ: ಎರಡು ಚಾಪ್ಟರ್‌ಗಳಲ್ಲಿ “ಕೆಜಿಎಫ್’ ಬರಲಿದೆ. ಈಗ “ಚಾಪ್ಟರ್‌-1′ ಬಿಡುಗಡೆಯಾಗಲಿದೆ. ಆ ನಂತರ “ಚಾಪ್ಟರ್‌-2′. ಈಗಾಗಲೇ “ಚಾಪ್ಟರ್‌-2’ಗೆ ಬೇಕಾದ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಉಳಿದಂತೆ “ಚಾಪ್ಟರ್‌-2’ಗೆ ಮತ್ತಷ್ಟು ಸಿದ್ಧತೆಗಳು ಬೇಕು. “ಚಾಪ್ಟರ್‌-1′ ಬಿಡುಗಡೆಯಾದ ನಂತರ ಬೇರೊಂದು ಸಿನಿಮಾ ಮಾಡುವಷ್ಟು ಗ್ಯಾಪ್‌ ಸಿಗಬಹುದು. ಇನ್ನು ಮುಂದೆ ಬೇಗ ಬೇಗ ಸಿನಿಮಾ ಮಾಡಬೇಕು. ಇಲ್ಲಾಂದ್ರೆ ಜನಾನೂ ಹೊಡಿತಾರೆ, ಅಮ್ಮಾನೂ ಹೊಡಿತಾರೆ, ಹೆಂಡ್ತಿನೂ ಹೊಡ್ದ್ರು ಹೊಡೀಬಹುದು. ಮುಂದೆ ಹರ್ಷ ಜೊತೆ “ರಾಣಾ’ ಹಾಗೂ ನಿರ್ದೇಶಕ ನರ್ತನ್‌ ಅವರ ಜೊತೆಗೊಂದು ಸಿನಿಮಾ ಮಾಡಲಿದ್ದೇನೆ.

ಬಜೆಟ್‌ ಮುಖ್ಯವಲ್ಲ: “ಕೆಜಿಎಫ್’ ಚಿತ್ರದ ಬಜೆಟ್‌ ತುಂಬಾ ದೊಡ್ಡದಿದೆ ನಿಜ. ಹಾಗಂತ ಮುಂದಿನ ಎಲ್ಲಾ ಸಿನಿಮಾಗಳು ಬಜೆಟ್‌ನಲ್ಲಿ ದೊಡ್ಡದಾಗಿರಬೇಕೆಂದು ನಾನು ಬಯಸುವುದಿಲ್ಲ. ಉದಾಹರಣೆಗೆ ನಾನು “ಗಜಕೇಸರಿ’ನೂ ಮಾಡಿದ್ದೇನೆ, “ರಾಜಾಹುಲಿ’ಯಂತಹ ಹಳ್ಳಿ ಸಬೆಕ್ಟ್ ಕೂಡಾ ಮಾಡಿದ್ದೇನೆ. ನನ್ನ ಉದ್ದೇಶ ಬಜೆಟ್‌ ಅಲ್ಲ, ಎಲ್ಲಾ ಕಡೆಗೂ, ಎಲ್ಲಾ ರೀತಿಯ ಪ್ರೇಕ್ಷಕರಿಗೂ ತಲುಪುವಂತಹ ಸಿನಿಮಾ ಮಾಡುವುದು ನನ್ನ ಉದ್ದೇಶ.

ಮಾರುಕಟ್ಟೆ ಹಿಂದಿನ ಶ್ರಮ: ಇವತ್ತು ನನ್ನ ಸಿನಿಮಾ ಎಲ್ಲಾ ಕಡೆ ತಲುಪುತ್ತದೆ ಅಂದರೆ ಅದರ ಹಿಂದೆ ಎಷ್ಟು ಕೆಲಸ ಮಾಡಿದ್ದೇವೆ ಎಂಬುದು ನಮಗೆ ಗೊತ್ತು. ಇಷ್ಟು ಮಾರ್ಕೇಟ್‌ ಕ್ರಿಯೇಟ್‌ ಮಾಡೋದಿಕ್ಕೆ ನೂರಾರು ಕೆಲಸ ಮಾಡಿದ್ದೇವೆ. ಗಡಿ ಭಾಗಗಳಿಗೆ ಸಿನಿಮಾವನ್ನು ಹೇಗೆ ತಲುಪಿಸಬೇಕೆಂದು ಗಂಟೆಗಟ್ಟಲೇ ಚರ್ಚೆ ಮಾಡಿದ್ದೇವೆ.

ಕಲೆಕ್ಷನ್‌ ಪಾರದರ್ಶಕವಾಗಿದೆ: ಕಲೆಕ್ಷನ್‌ ವಿಚಾರವನ್ನು ನಿರ್ಮಾಪಕರೇ ಮುಂದೆ ಬಂದು ಸರಿಯಾದ ಅಂಶ ಹೇಳಬೇಕು. ಇಲ್ಲವಾದರೆ ಗಾಸಿಪ್‌, ಸುಳ್ಳು ಎಂಬಂತೆ ಹಬ್ಬುತ್ತದೆ. ಒಳ್ಳೆಯ ಕಲೆಕ್ಷನ್‌ ಆದ ನಿರ್ಮಾಪಕ “ಚೆನ್ನಾಗಿ ಆಗಿದೆ, ಬಿಡಿ ಸಾರ್‌’ ಅಂತಾನೆ. ಸ್ವಲ್ಪ ಕಡಿಮೆ ಆದಾಗ “ಅಷ್ಟು ಕೋಟಿ ಇಷ್ಟು ಕೋಟಿ’ ಎನ್ನುತ್ತಾನೆ. ಇಷ್ಟು ಕೋಟಿ ಆಗಿದೆ ಎನ್ನುವುದರಿಂದ ಇನ್ನೊಂದಷ್ಟು ಕೋಟಿ ಬರಬಹುದು ಎಂಬುದು ಅವರ ಲೆಕ್ಕಾಚಾರವಾಗಿರುತ್ತದೆ. ಈಗ ಎಲ್ಲವೂ ಪಾರದರ್ಶಕವಾಗಿದೆ.

ಸದ್ಯಕ್ಕೆ ನಿರ್ಮಾಣವಿಲ್ಲ: ನಿರ್ಮಾಣ ಮಾಡೋದು ದೊಡ್ಡ ವಿಷಯವಲ್ಲ. ಆದರೆ ಜಯಣ್ಣ, ವಿಜಯ್‌ ಕಿರಗಂದೂರು ಅವರ ನಿರ್ಮಾಣ ಸಂಸ್ಥೆ ನನ್ನ ನಿರ್ಮಾಣ ಸಂಸ್ಥೆ ಇದ್ದಂತೆ. ಅವರು ಮಾಡುತ್ತಿದ್ದಾರೆ. ನಾವೇ ಮಾಡಿ ನಾವೇ ತಿನ್ನಬಾರದು. ಎಲ್ಲರೂ ತಿನ್ನಬೇಕು.

ಕಲಾವಿದ ಕಷ್ಟಪಡಬಾರದು: ಯಾವ ಕಲಾವಿದನೂ ನನಗೆ ಕಷ್ಟ ಇದೆ ಎಂದು ಬಂದು ಟಿವಿ ಮುಂದೆ ಕೂರುವಂತಾಗಬಾರದು. ಅವನಿಗೆ ಸಹಾಯಕ್ಕೆ ಬರುವಂತಹ ಇನ್ಸ್‌ಶೂರೆನ್ಸ್‌ ಅನ್ನು ಕಲಾವಿದರ ಸಂಘ ಮಾಡಿಸಬೇಕು.

ಸಾಥ್‌ ಕೊಡುವವರ ಪರ ಪ್ರಚಾರ: ಸಾಕಷ್ಟು ಮಂದಿ ಬಂದು ಪ್ರಚಾರಕ್ಕೆ ಕರೆಯುತ್ತಾರೆ. ಪ್ರತಿಯೊಬ್ಬರನ್ನು ನಾನು ಸಂದರ್ಶನ ಮಾಡುವಂತೆ “ನಿಮ್ಮ ಉದ್ದೇಶವೇನು, ಜನರಿಗೆ ಏನು ಮಾಡುತ್ತೀರಿ’ ಎಂದು ಕೇಳುತ್ತೇನೆ. ನನ್ನ ಒಂದಷ್ಟು ಕನಸುಗಳಿವೆ. ಅದಕ್ಕೆ ಸಾಥ್‌ ನೀಡುವವರ ಪರ ನಾನಿದ್ದೇನೆ. ನನಗೆ ಪಕ್ಷ ಮುಖ್ಯವಲ್ಲ. ನಾನು ಸಿದ್ಧಾಂತಕ್ಕೆ ಸಿಕ್ಕಿಹಾಕಿಕೊಳ್ಳುವ ವ್ಯಕ್ತಿಯಲ್ಲ. ನನ್ನಿಂದ ಸಮಾಜಕ್ಕೆ ಏನಾದರೂ ಸಹಾಯವಾಗಬೇಕು ಅಷ್ಟೇ. ನಾಲ್ಕು ಜನರಿಗೆ ಸಹಾಯವಾಗಿ ನಾನು ಕೆಟ್ಟವನಾದರೂ ನನಗೆ ಬೇಸರವಿಲ್ಲ.

-ಉದಯವಾಣಿ

Comments are closed.