ಕರ್ನಾಟಕ

ಹಂಚಿಹೋದ ದಲಿತ ಮತಗಳು: ಕಾಂಗ್ರೆಸ್‌, ಬಿಜೆಪಿ ಮುಂದಿವೆ ಹಲವು ಸವಾಲು

Pinterest LinkedIn Tumblr


ಬೆಂಗಳೂರು: ಕರ್ನಾಟಕ ಚುನಾವಣೆಯಲ್ಲಿ ಈ ಬಾರಿ ಪ್ರಮುಖ ಎದುರಾಳಿ ಪಕ್ಷಗಳಿಗೆ ದಲಿತ ಮತಗಳ ಬೇಟೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ರಾಜ್ಯದ ಒಟ್ಟು ಜನಸಂಖ್ಯೆಯ ಶೇ 20ರಷ್ಟು ಈ ವರ್ಗದ ಮತದಾರರೇ ಇದ್ದು, ಸುಮಾರು 100 ಕ್ಷೇತ್ರಗಳಲ್ಲಿ ನಿರ್ಣಾಯಕ ಶಕ್ತಿಯಾಗಿದ್ದಾರೆ. ಅವುಗಳ ಪೈಕಿ 36 ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಮೀಸಲಾಗಿವೆ.

ಆದರೆ ದಲಿತ ಮತಗಳು ಸಾಮೂಹಿಕವಾಗಿ ಯಾವುದೇ ಪಕ್ಷದ ಪರವಾಗಿ ಚಲಾವಣೆಯಾಗುವ ಸಾಧ್ಯತೆಯಿಲ್ಲ. ಯಾಕೆಂದರೆ ಅವರಲ್ಲೂ ಸಾಕಷ್ಟು ಒಳಪಂಗಡಗಳು, ಭಿನ್ನತೆಗಳಿವೆ. ‘ಅಸ್ಪೃಶ್ಯ’ ದಲಿತರು (ಮಾದಿಗರು) ಮತ್ತು ಇತರರು ಎಂಬ ಪ್ರಮುಖ ಭೇದಗಳಿವೆ. ‘ಅಸ್ಪೃಶ್ಯ’ ದಲಿತರು ಮತ್ತು ಇತರ ದಲಿತ ಗುಂಪುಗಳು- (ಕಾಂಗ್ರೆಸ್‌ ಹಿರಿಯ ಮಲ್ಲಿಕಾರ್ಜುನ ಖರ್ಗೆ ಈ ಸಮುದಾಯದ ಪ್ರತಿನಿಧಿ)- ಕಾಂಗ್ರೆಸ್‌ ಬೆಂಬಲಿಸುತ್ತಿದ್ದರೆ, ಒಳಮೀಸಲು ಜಾರಿಗೊಳಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಮಾದಿಗರು ಬಿಜೆಪಿ ಬೆಂಬಲಿಗರು ಎನ್ನಲಾಗುತ್ತಿದೆ. ಕೆಲವರು ಜೆಡಿಎಸ್‌ ಅಥವಾ ಬಿಎಸ್‌ಪಿಗೂ ಸೇರ್ಪಡೆಯಾಗಿದ್ದಾರೆ.

ಸೆಂಟರ್‌ ಫಾರ್‌ ಸ್ಟಡೀಸ್‌ ಆಫ್‌ ಡೆವಲಪಿಂಗ್‌ ಸೊಸೈಟೀಸ್‌ (ಸಿಎಸ್‌ಡಿಎಸ್‌) ಪ್ರಕಾರ, ಹಿಂದೆಲ್ಲ ಶೇ 50ರಷ್ಟು ದಲಿತರ ಮತಗಳು ಕಾಂಗ್ರೆಸ್‌ ಪರವಾಗಿದ್ದರೆ, ಶೇ 20ರಷ್ಟು ದಲಿತ ಮತಗಳು ಬಿಜೆಪಿ ಪಾಲಾಗುತ್ತಿದ್ದವು. ಆದರೆ 2008ರ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 36 ಎಸ್‌ಸಿ ಮೀಸಲು ಕ್ಷೇತ್ರಗಳ ಪೈಕಿ 22ರಲ್ಲಿ ಬಿಜೆಪಿ ಗೆದ್ದಾಗ ಒಟ್ಟಾರೆ ರಾಜಕೀಯ ಚಿತ್ರಣವೇ ಬದಲಾಯಿತು. ನಂತರ 2013ರಲ್ಲಿ ಕಾಂಗ್ರೆಸ್‌ ಮರಳಿ ಅಧಿಕಾರಕ್ಕೆ ಬಂದಾಗ 17 ಮೀಸಲು ಕ್ಷೇತ್ರಗಳನ್ನು ಗೆದ್ದಿತ್ತು. ದಲಿತ ಮತಗಳ ವಿಭಜನೆಯಾಗಿರುವುದು ಹೊಸ ಬೆಳವಣಿಗೆಯಾಗಿದೆ.

ಕರ್ನಾಟಕ ಚುನಾವಣೆ 2018: ನಿರ್ಣಾಯಕ ಅಂಶಗಳು

ಜಸ್ಟಿಸ್‌ ಸದಾಶಿವ ಆಯೋಗದ ವರದಿ ಪ್ರಕಾರ, ಎಲ್ಲ 101 ದಲಿತ ಗುಂಪುಗಳನ್ನು ನಾಲ್ಕು ವಿಭಾಗಗಳಲ್ಲಿ ಮರು ವರ್ಗೀಕರಣ ಮಾಡಿ ಒಳಮೀಸಲು ಕಲ್ಪಿಸುವಂತೆ ಶಿಫಾರಸು ಮಾಡಲಾಗಿತ್ತು. ಪರಿಶಿಷ್ಟ ಜಾತಿಗಳಿಗೆ ನೀಡಲಾದ ಶೇ 15ರಷ್ಟು ಮೀಸಲಿನಲ್ಲಿ ‘ಅಸ್ಪೃಶ್ಯ’ ಗುಂಪುಗಳಿಗೆ ಶೇ 6, ಇತರ ಗುಂಪುಗಳಿಗೆ ಶೇ 5, ‘ ಅಸ್ಪೃಶ್ಯರಲ್ಲದ’ವರಿಗೆ ಶೇ 3 ಮತ್ತು ಇತರ ಎಸ್‌ಸಿ ಗುಂಪುಗಳಿಗೆ ಶೇ 1 ಮೀಸಲು ಹಂಚಬೇಕೆಂದು ಆಯೋಗ ಶಿಫಾರಸು ಮಾಡಿತ್ತು.

‘ನಾಲ್ಕು ವರ್ಷಗಳಿಂದಲೂ ಈ ಶಿಫಾರಸು ಜಾರಿಮಾಡಿ ಎಂದು ಸಿದ್ದರಾಮಯ್ಯ ಸರಕಾರಕ್ಕೆ ಒತ್ತಾಯಿಸುತ್ತಲೇ ಬಂದಿದ್ದೇವೆ. ಆದರೆ ಇತರ ದಲಿತ ಗುಂಪುಗಳ ಒತ್ತಡಕ್ಕೆ ಮಣಿದು ನಮ್ಮ ಬೇಡಿಕೆಯನ್ನು ಕಡೆಗಣಿಸಲಾಗಿದೆ’ ಎನ್ನುತ್ತಾರೆ ದಲಿತ ನಾಯಕ ಸಿ.ಎನ್‌ ಮುನಿಯಪ್ಪ. ಇಂತಹ ಸನ್ನಿವೇಶದಲ್ಲಿ ಬಿಎಸ್‌ಪಿ ಬೆಂಬಲ ಪಡೆದಿರುವ ಜೆಡಿಎಸ್‌, ಪ್ರಮುಖ ಕ್ಷೇತ್ರಗಳಲ್ಲಿ ದಲಿತರ ಬೆಂಬಲದ ನಿರೀಕ್ಷೆಯಲ್ಲಿದೆ. ಪಕ್ಷದ ವರಿಷ್ಠ ಎಚ್‌.ಡಿ ದೇವೇಗೌಡ ಅವರು ಟೈಮ್ಸ್‌ ಆಫ್‌ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ, ಮೈಸೂರು, ಮಂಡ್ಯ ಮತ್ತು ಬೀದರ್‌ನ ಕೆಲ ಕ್ಷೇತ್ರಗಳಲ್ಲಿ ಮಾಯಾವತಿ ನೇತೃತ್ವದ ಬಿಎಸ್‌ಪಿ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ.

ಆದರೆ, ರಾಜಕೀಯದಲ್ಲಿ ದಲಿತರು ಸ್ಥಾನ ಕಂಡುಕೊಳ್ಳುವುದೇ ದೊಡ್ಡ ಸವಾಲು ಎಂದು ಮಾಜಿ ಬಿಎಸ್‌ಪಿ ಮುಖಂಡರೊಬ್ಬರು ಹೇಳುತ್ತಾರೆ. ಬಿಜೆಪಿ ಮತ್ತು ಜೆಡಿಎಸ್‌ ಒಳ ಒಪ್ಪಂದ ಮಾಡಿಕೊಂಡಿವೆ ಎಂಬ ಗ್ರಹಿಕೆ ಬಲವಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಬೀಳುವ ದಲಿತರ ಮತಗಳನ್ನು ವಿಭಜಿಸಲು ಬಿಎಸ್‌ಪಿ ನೆರವಾಗುತ್ತಿದೆ ಎಂಬ ಭಾವನೆ ವ್ಯಾಪಕವಾಗಿದೆ ಎಂದು ಅವರು ಹೇಳುತ್ತಾರೆ.

Comments are closed.