ಮನೋರಂಜನೆ

ಬೆಂಗಳೂರನ್ನೇ ಬೆಚ್ಚಿ ಬೇಳಿಸಿದ್ದ ಘಟನೆ: ಅಟೆಂಪ್ಟ್ ಟು ಮರ್ಡರ್

Pinterest LinkedIn Tumblr

*ಶರಣು ಹುಲ್ಲೂರು

ಕೆಲ ವರ್ಷಗಳ ಹಿಂದೆ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಘಟನೆಯನ್ನು ‘ಎಟಿಎಂ’ ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಅಮರ್‌. ಎಟಿಎಂವೊಂದರಲ್ಲಿ ಮಹಿಳೆಯ ಮೇಲೆ ನಡೆದ ದೌರ್ಜನ್ಯವನ್ನು ಹಲವು ಆಯಾಮಗಳಲ್ಲಿ ನೋಡುವ ಪ್ರಯತ್ನ ಈ ಸಿನಿಮಾದಲ್ಲಿ ಆಗಿದೆಯಂತೆ. ಹಾಗಾಗಿ ಇದು ಎಲ್ಲರ ಇಷ್ಟದ ಚಿತ್ರ ಆಗಲಿದೆ ಎನ್ನುತ್ತಾರೆ ನಿರ್ದೇಶಕರು.

ಪ್ರಮುಖವಾಗಿ ಐದೇ ಐದು ಪಾತ್ರಗಳು ಸಿನಿಮಾದಲ್ಲಿವೆ. ನೈಜ ಘಟನೆಯ ಹಿಂದೆ ಬೀಳುವ ಪೊಲೀಸ್‌ ಆಫೀಸರ್‌, ದಿಟ್ಟ ಪತ್ರಕರ್ತೆ, ಕ್ಯಾಬ್‌ ಡ್ರೈವರ್‌, ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಹುಡುಗಿ ಮತ್ತು ವಿಲನ್‌ ನಡುವಿನ ರೋಚಕ ಕಥೆ ಇಲ್ಲಿದೆ. ಈ ಸ್ಟೋರಿಯನ್ನು ವಿಭಿನ್ನ ರೀತಿಯಲ್ಲಿ ಹೇಳಿದ್ದಾರಂತೆ ನಿರ್ದೇಶಕರು.

‘ನೈಜ ಘಟನೆಯನ್ನು ಚಿತ್ರಕ್ಕಾಗಿ ಆರಿಸಿಕೊಂಡಿದ್ದರೂ, ಅದಕಷ್ಟು ಸಿನಿಮೀಯ ಟ್ವಿಸ್ಟ್‌ ಕೊಟ್ಟಿದ್ದೇವೆ. ದೃಶ್ಯದಿಂದ ದೃಶ್ಯಕ್ಕೆ ಸಿನಿಮಾ ಥ್ರಿಲ್‌ ನೀಡುತ್ತಲೇ ಸಾಗುತ್ತದೆ. ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುವಂಥ ಚಿತ್ರ ಇದಾಗಲಿದೆ’ ಅಂತಾರೆ ಅಮರ್‌.

ಈ ಚಿತ್ರವನ್ನು 70ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್‌ ಮಾಡುವ ಪ್ಲಾನ್‌ ಮಾಡಿದ್ದಾರೆ ನಿರ್ಮಾಪಕ ಎಸ್‌.ವಿ.ನಾರಾಯಣ್‌. ಈ ಕುರಿತು ಅವರು ಹೇಳುವುದು ಹೀಗೆ, ‘ಮಹಿಳೆಯರ ಮೇಲಿನ ದೌರ್ಜನ್ಯವನ್ನು ಈಗ ಎಲ್ಲರೂ ಖಂಡಿಸುತ್ತಿದ್ದಾರೆ. ಅದಕ್ಕಾಗಿ ಮರುಗುತ್ತಿದ್ದಾರೆ. ಪ್ರತಿಯೊಬ್ಬ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಇರುವಂಥ ಕುಟುಂಬಗಳು ನೋಡುವಂಥ ಚಿತ್ರವಿದು. ತುಂಬಾ ಗಂಭೀರವಾದ ವಿಷಯದ ಜತೆಗೆ ಮನರಂಜನೆಗೆ ಬೇಕಿರುವ ಅಂಶಗಳು ಕೂಡ ಚಿತ್ರದಲ್ಲಿವೆ. ಹಾಗಂತ ಡಬಲ್‌ ಮೀನಿಂಗ್‌ ಡೈಲಾಗ್‌, ಮಾದಕತೆ, ರಕ್ತ ತೋರಿಸುವಂಥ ದುಸ್ಸಾಹಸಕ್ಕೆ ನಾವು ಕೈ ಹಾಕಿಲ್ಲ. ಇಡೀ ಕುಟುಂಬ ಸಮೇತ ಕೂತು ನೋಡುವಂಥ ಚಿತ್ರ ಇದಾಗಿದೆ’ ಎನ್ನುವುದು ನಿರ್ಮಾಪಕರ ಮಾತು.

ಕಥೆಯಷ್ಟೇ ಪಾತ್ರಗಳಿಂದಾಗಿಯೂ ಈ ಸಿನಿಮಾ ಕುತೂಹಲ ಮೂಡಿಸಿದೆ. ಕಿರುತೆರೆಯ ಮೂಲಕ ಫೇಮಸ್‌ ಆಗಿರುವ ವಿನಯ್‌ ಈ ಸಿನಿಮಾದಲ್ಲಿ ಲೀಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಟಿಎಂನಲ್ಲಿ ನಡೆದ ದರೋಡೆಯ ಬೆನ್ನು ಬೀಳುವ ಅಧಿಕಾರಿ ಪಾತ್ರ ಅದಾಗಿದೆ. ನಾಯಕನಷ್ಟೇ ಪ್ರಬಲವಾಗಿದೆಯಂತೆ ವಿಲನ್‌ ಪಾತ್ರ. ಈ ಪಾತ್ರವನ್ನು ಸೂರ್ಯ ನಿರ್ವಹಿಸಿದ್ದಾರೆ. ವಾಹಿನಿಗಳಲ್ಲಿ ನಿರೂಪಕಿಯಾಗಿ ಚಿರಪರಿಚಿತವಾಗಿರುವ ಹೇಮಲತಾ ಈ ಚಿತ್ರದಲ್ಲಿ ಪತ್ರಕರ್ತೆಯಾಗಿ ನಟಿಸಿದ್ದಾರೆ. ಕ್ಯಾಬ್‌ ಡ್ರೈವರ್‌ ಆಗಿ ಚಂದು, ಐಟಿ ಕಂಪೆನಿಯಲ್ಲಿ ಕೆಲಸ ಮಾಡುವ ಹುಡುಗಿಯಾಗಿ ಶೋಭಿತಾ ನಟಿಸಿದ್ದಾರೆ.

“ಎಲ್ಲ ಮಹಿಳೆಯರು ನೋಡುವಂಥ ಚಿತ್ರವಿದು. ಮಹಿಳಾ ದೌರ್ಜನ್ಯದ ಕುರಿತು ಸದ್ಯ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಸಿನಿಮಾದಲ್ಲೂ ಅಂಥದ್ದೊಂದು ವಿಷಯ ಪ್ರಸ್ತಾಪ ಆಗುತ್ತದೆ. ಅಲ್ಲದೇ ಪ್ರೇಕ್ಷಕರಿಗೆ ಇಷ್ಟವಾಗುವಂಥ ಅನೇಕ ಅಂಶಗಳು ಸಿನಿಮಾದಲ್ಲಿವೆ.” -ಎಸ್‌.ವಿ.ನಾರಾಯಣ್‌, ನಿರ್ಮಾಪಕ

Comments are closed.