ಮನೋರಂಜನೆ

ಸ್ಫುರದ್ರೂಪಿ ನಟ ವಿನೋದ್ ಖನ್ನಾ ಮುಡಿಗೆ ಫಾಲ್ಕೆ ಪ್ರಶಸ್ತಿ ಗರಿ

Pinterest LinkedIn Tumblr


ಭಾರತೀಯ ಚಲನಚಿತ್ರರಂಗದ ಅತ್ಯುನ್ನತ ಪುರಸ್ಕಾರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ (ಮರಣೋತ್ತರ) ಬಾಲಿವುಡ್‌ನ ಮೇರು ನಟ, ನಿರ್ಮಾಪಕ ವಿನೋದ್ ಖನ್ನಾ ಪಾತ್ರರಾಗಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಅತ್ಯಂತ ಸ್ಫುರದ್ರೂಪಿ ನಟ ಎಂದೇ ಕರೆಸಿಕೊಂಡಿದ್ದ ವಿನೋದ್ ಖನ್ನಾ ಅವರು ‘ಅಮರ್ ಅಕ್ಬರ್ ಅಂಥೋನಿ’, ‘ದಿ ಬರ್ನಿಂಗ್ ಟ್ರೈನ್’ ಮತ್ತಿತರ ಪ್ರಸಿದ್ಧ ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

1946ರ ಅಕ್ಟೋಬರ್ 6ರಂದು ಜನಿಸಿದ ಖನ್ನಾ 1968ರಲ್ಲಿ ಸಿನಿಮಾದಲ್ಲಿ ನಟಿಸಲು ಆರಂಭಿಸಿದ್ದರು. 140ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೇರೆ ಅಪ್ನೆ, ಮೇರಾ ಗಾಂವ್ ಮೇರಾ ದೇಶ್, ಗದ್ದಾರ್, ಜೇಯ್ಲ್ ಯಾತ್ರಾ, ಇಮ್ತಿಹಾನ್, ಮುಕದ್ದರ್ ಕಾ ಸಿಕಂದರ್, ಇನ್ಕಾರ್, ಕಚ್ಚೆ ಧಾಗೆ, ಅಮರ್ ಅಕ್ಬರ್ ಆ್ಯಂಥನಿ, ರಾಜ್‍ಪುತ್, ಕುರ್ಬಾನಿ, ಕುದ್ರತ್, ದಯಾವಾನ್, ಕಾರ್‍ನಾಮಾ ಮತ್ತು ಜುರ್ಮ್ ಅವರ ಅಭಿನಯದ ಕೆಲವು ಜನಪ್ರಿಯ ಚಿತ್ರಗಳು.
65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

1982ರಲ್ಲಿ ತಮ್ಮ ವೃತ್ತಿಬದುಕಿನ ಉತ್ತುಂಗದಲ್ಲಿದ್ದಾಗ, ಖನ್ನಾ ತಾತ್ಕಾಲಿಕವಾಗಿ ಚಿತ್ರೋದ್ಯಮವನ್ನು ತ್ಯಜಿಸಿ ತಮ್ಮ ಆಧ್ಯಾತ್ಮಿಕ ಗುರು ಓಶೊ ರಜನೀಶ್‍ರನ್ನು ಅನುಸರಿಸಿದರು. ಮತ್ತೆ 5 ವರ್ಷಗಳ ವಿರಾಮದ ನಂತರ ಹಿಂದಿ ಚಿತ್ರೋದ್ಯಮಕ್ಕೆ ಹಿಂತಿರುಗಿದ ಅವರು ಇನ್ಸಾಫ್ ಮತ್ತು ಸತ್ಯಮೇವ್ ಜಯತೆ ಎಂಬ ಒಂದರ ಹಿಂದೆ ಮತ್ತೊಂದು ಹಿಟ್ ಚಿತ್ರಗಳನ್ನು ನೀಡಿದರು.

ರಾಜಕೀಯದಲ್ಲೂ ಸಕ್ರಿಯರಾಗಿದ್ದ ವಿನೋದ್ ಖನ್ನಾ ಅವರು ಪಂಜಾಬ್‌ನ ಗುರುದಾಸ್‌ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಪ್ರತಿನಿಧಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ, 2002ರಲ್ಲಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. 2009ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲನುಭವಿಸಿದ್ದ ಖನ್ನಾ 2014ರ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಜಯ ಗಳಿಸಿದ್ದರು. ಪಿತ್ತಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವಿನೋದ್ ಖನ್ನಾ ಅವರು ಏಪ್ರಿಲ್ 27, 2017ರಂದು ಮುಂಬೈನಲ್ಲಿ ನಿಧನರಾದರು.

Comments are closed.