ಮನೋರಂಜನೆ

ಕಾವೇರಿ ವಿವಾದ: ಪ್ರಧಾನಿ ಮೋದಿಗೆ ಕಮಲ್ ಟ್ವೀಟ್

Pinterest LinkedIn Tumblr
 

 

ಚೆನ್ನೈ: ತಮಿಳುನಾಡಿನಲ್ಲಿ ಕಾವೇರಿ ನೀರಿಗಾಗಿ ಹಾಹಾಕಾರ ಭುಗಿಲೆದ್ದಿದ್ದು, ಇದರ ರಾಜಕೀಯ ಲಾಭ ಪಡೆಯಲು ತಾಮುಂದು ನಾಮುಂದು ಎಂದು ರಾಜಕೀಯಕ್ಕೆ ಅಡಿಯಿಟ್ಟಿರುವ ಸಿನಿಮಾ ನಟರು ಮುಂದಾಗಿದ್ದಾರೆ. ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕೆಂಬುದು ಅವರ ಪ್ರಮುಖ ಬೇಡಿಕೆ. ಈ ವಿಚಾರವಾಗಿ ಈಗಾಗಲೆ ಸುಪ್ರೀಂಕೋರ್ಟ್ ಮೇ 3ರೊಳಗೇ ಸ್ಕೀಂನ ಕರಡು ರೂಪಿಸಬೇಕೆಂದು ಕೇಂದ್ರ ಸರಕಾರಕ್ಕೆ ಸ್ಪಷ್ಟ ಶಬ್ದಗಳಲ್ಲಿ ಸೂಚನೆ ನೀಡಿದೆ.

ಕಾವೇರಿ ನಿರ್ವಹಣಾ ಮಂಡಳಿ ಅಸಾಧ್ಯ: ಸುಪ್ರೀಂ ಕೋರ್ಟ್ ವಕೀಲ ಸ್ಪಷ್ಟನೆ

ಇನ್ನೊಂದು ಕಡೆ ಕಾವೇರಿ ವಿವಾದ ಬಗೆಹರಿಯುವವರೆಗೂ ಐಪಿಎಲ್ ಪಂದ್ಯಗಳು ಚೆನ್ನೈನಲ್ಲಿ ಆಡುವಂತಿಲ್ಲ ಎಂದು ಪ್ರತಿಭಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮಕ್ಕಳ್ ನೀದಿ ಮಯ್ಯಂ ಅಧ್ಯಕ್ಷ ಕಮಲ್ ಹಾಸನ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಮಾತನಾಡಿರುವ ವೀಡಿಯೋ ಒಂದನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಗೌರವಾನ್ವಿತ ಪ್ರಧಾನ ಮಂತ್ರಿಗೆ, ತಮಿಳುನಾಡು ಜನರು ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ನ್ಯಾಯ ಸಿಕ್ಕಿದೆಯಾದರೂ ಅದನ್ನು ಜಾರಿಗೆ ತರುತ್ತಿಲ್ಲ. ಕರ್ನಾಟಕದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ವಿಚಾರದಲ್ಲಿ ಕೇಂದ್ರ ತಡ ಮಾಡುತ್ತಿದೆ ಎಂದು ಜನ ಭಾವಿಸುತ್ತಿದ್ದಾರೆ. ಆ ಆಲೋಚನೆ ದೇಶಕ್ಕೆ ಅಪಾಯಕಾರಿ, ಅಪಮಾನಕರ. ಇದು ಬದಲಾಗುತ್ತದೆ ಎಂದು ಭಾವಿಸುತ್ತಿದ್ದೇನೆ’ ಎಂದಿದ್ದಾರೆ.

ನರ್ಮದಾ ನದಿ ನೀರು ವಿವಾದವನ್ನು ಶೀಘ್ರ ಬಗೆಹರಿಸಿದಿರಿ. ಆದರೆ ಕಾವೇರಿ ವಿವಾದ ಬಗೆಹರಿಸಲು ಯಾಕೆ ಸಾಧ್ಯವಾಗುತ್ತಿಲ್ಲ. ಮೇ 12ರಂದು ಚುನಾವಣೆ ಇರುವ ಕಾರಣ ತಡ ಮಾಡಲಾಗುತ್ತಿದೆ? ಚುನಾವಣೆಗಿಂತ ಜನ ಮುಖ್ಯ ಅಲ್ಲವೇ ಎಂದು ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ.

ಈ ಪ್ರತಿಭಟನೆ ವಿರುದ್ಧ ರಜನಿಕಾಂತ್ ಸಹ ಪ್ರತಿಕ್ರಿಯಿಸಿದ್ದು, ತಮಿಳರ ಪ್ರತಿಭಟನೆಗೆ ಬೆಂಬಲ ನೀಡಬೇಕೆಂದು, ಐಪಿಎಲ್ ಮ್ಯಾಚ್ ಆಡುವಾಗ ಚೆನ್ನೈ ತಂಡದ ಆಟಗಾರರು ಹಾಗೂ ಪ್ರೇಕ್ಷಕರು ಕಪ್ಪುಪಟ್ಟಿ ಧರಿಸಬೇಕೆಂದು ಸೂಚಿಸಿದ್ದಾರೆ. ನೀರಿಲ್ಲದೆ ಪರದಾಡುತ್ತಿರುವ ರೈತರ ಕಷ್ಟವನ್ನು ಅರ್ಥಮಾಡಿಕೊಂಡು ಚೆನ್ನೈ ಮ್ಯಾಚ್‌ಗಳನ್ನು ಆಡದಿರುವುದೇ ಒಳಿತು. ಅದು ಸಾಧ್ಯವಾಗದಿದ್ದರೆ ಆಡುವಾಗ ಕಪ್ಪುಪಟ್ಟಿ ಧರಿಸಬೇಕೆಂದು ತಮಿಳು ಆಟಗಾರರನ್ನು ಕೋರಿದ್ದಾರೆ.

Comments are closed.