ಮನೋರಂಜನೆ

ಟಗರುಗೆ 50ರ ಸಂಭ್ರಮ; ದುಬೈನಲ್ಲಿ ಸದ್ಯದಲ್ಲೇ ಪ್ರೀಮಿಯರ್‌ ಶೋ

Pinterest LinkedIn Tumblr


ಶಿವರಾಜಕುಮಾರ್‌ ಅಭಿನಯದ “ಟಗರು’ ನಾಳೆ ಯಶಸ್ವಿ ಹಾಫ್ ಸೆಂಚ್ಯುರಿ ಬಾರಿಸಲಿದೆ. ಈ 50ನೇ ದಿನದ ಸಂಭ್ರಮವನ್ನು ದೊಡ್ಡ ಮಟ್ಟದಲ್ಲಿ ಆಚರಿಸುವುದಕ್ಕೆ ಚಿತ್ರತಂಡ ಸಹ ಯೋಚಿಸುತ್ತಿದೆ. ಈಗಾಗಲೇ ಶಿವರಾಜಕುಮಾರ್‌, ಧನಂಜಯ್‌ ಸೇರಿದಂತೆ ಚಿತ್ರತಂಡದ ಹಲವು ಸದಸ್ಯರು ಶಿವಮೊಗ್ಗ, ದಾವಣಗೆರೆ ಮುಂತಾದ ಊರುಗಳಿಗೆ ಹೋಗಿ ಚಿತ್ರವನ್ನು ಪ್ರಮೋಟ್‌ ಮಾಡಿ ಬಂದಿದ್ದಾರೆ. ಈ 50ನೇ ದಿನದ ಸಂಭ್ರಮದಲ್ಲಿ ಶಿವರಾಜಕುಮಾರ್‌ ಅವರು ಬೆಂಗಳೂರು ಮತ್ತು ಮೈಸೂರಿನ ಚಿತ್ರಮಂದಿರಗಳಿಗೆ ಭೇಟಿ ಕೊಟಡಲಿದ್ದಾರೆ.

ಹೌದು, 50ನೇ ದಿನದ ಸಂಭ್ರಮಾಚರಣೆಗಾಗಿ ಶನಿವಾರ (ಏಪ್ರಿಲ್‌ 14ರಂದು) ಶಿವರಾಜಕುಮಾರ್‌, ಧನಂಜಯ್‌ ಮತ್ತು ನಿರ್ದೇಶಕ ಸೂರಿ ಅವರು ಬೆಳಿಗ್ಗೆ 10.30ಕ್ಕೆ ಗೋಪಾಲನ್‌ ಆರ್ಚ್‌, ಮಧ್ಯಾಹ್ನ 1ಕ್ಕೆ ಸಂತೋಷ್‌, 3.30ಕ್ಕೆ ವೀರೀಶ್‌, ಸಂಜೆ 6.30ಕ್ಕೆ ಜೆ.ಪಿ. ನಗರದ ಸಿದ್ಧಲಿಂಗೇಶ್ವರ ಚಿತ್ರಮಂದಿರಗಳಿಗೆ ಭೇಟಿಕೊಡಲಿದ್ದಾರೆ.

ಅದಾದ ಮರುದಿನ ಹಾಸನ, ಮೈಸೂರು ಮತ್ತು ಮಂಡ್ಯದಲ್ಲಿ ಯಶಸ್ಸಿನ ಮುಂದುವರೆಯಲಿದ್ದು, 15ರ ಬೆಳಿಗ್ಗೆ 10.30ಕ್ಕೆ ಹಾಸನದ ಎಸ್‌.ಬಿ.ಜಿ ಚಿತ್ರದಿಂದ ಪ್ರಾರಂಭವಾಗುವ ಈ ಕಾರ್ಯಕ್ರಮ ನಂತರ ಮಧ್ಯಾಹ್ನ ಮೈಸೂರಿನ ಸಂಗಮ ಚಿತ್ರಮಂದಿರದಲ್ಲಿ ಮುಂದುವರೆಯಲಿದ್ದು, ಸಂಜೆ 5ಕ್ಕೆ ಸರಸ್ವತಿ ಚಿತ್ರಮಂದಿರ ಮತ್ತು 6.30ಕ್ಕೆ ಮಂಡ್ಯದ ಸಂಜಯ್‌ ಚಿತ್ರಮಂದಿರದಲ್ಲಿ ಮುಕ್ತಾಯವಾಗಲಿದೆ. ಇಲ್ಲೂ ಸಹ ಶಿವರಾಜಕುಮಾರ್‌, ಧನಂಜಯ್‌ ಮತ್ತು ನಿರ್ದೇಶಕ ಸೂರಿ ಭಾಗವಹಿಸಲಿದ್ದಾರೆ.

ಈಗಾಗಲೇ ಚಿತ್ರವು ಇಂಗ್ಲೆಂಡ್‌ನ‌ ಈಸ್ಟ್‌ ಲಂಡನ್‌, ಎಡಿನ್‌ಬರ್ಗ್‌, ಲೇಸೆಸ್ಟರ್‌ ಮುಂತಾದ ಕಡೆ ಬಿಡುಗಡೆಯಾಗಲಿದ್ದು, 20ರ ನಂತರ ದುಬೈನಲ್ಲಿ ಪ್ರೀಮಿಯರ್‌ ಕಾಣಲಿದೆ. ಆ ಸಂದರ್ಭದಲ್ಲಿ ಶಿವರಾಜಕುಮಾರ್‌ ಅವರು ದುಬೈಗೆ ಹೋಗಿ ಅಲ್ಲಿನ ಜನರ ಜೊತೆಗೆ ಚಿತ್ರ ನೋಡುವುದರ ಜೊತೆಗೆ, ಸಂವಾದದಲ್ಲಿ ಭಾಗವಹಿಸಲಿದ್ದಾರೆ.

-ಉದಯವಾಣಿ

Comments are closed.