ಮನೋರಂಜನೆ

ತನ್ನ ಕಿರಿಯ ಮಗ ಅಬ್ರಾಮ್‌ನನ್ನು ಹಾಕಿ ಪಟುವಾಗಿ ಮಾಡುತ್ತೇನೆ: ಶಾರುಖ್

Pinterest LinkedIn Tumblr

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್‍ಗೆ ಹಾಕಿ ಎಂದರೆ ಎಷ್ಟು ಇಷ್ಟ ಎಂಬುದು ಎಲ್ಲರಿಗೂ ಗೊತ್ತೇ ಇದೆ. ‘ಚೆಕ್ ದೆ ಇಂಡಿಯಾ’ ಸಿನಿಮಾದಲ್ಲಿ ಭಾರತ ಮಹಿಳಾ ಹಾಕಿ ತಂಡದ ಕೋಚ್ (ಕಬೀರ್ ಖಾನ್) ಪಾತ್ರದಲ್ಲಿ ಎಲ್ಲರನ್ನೂ ರಂಜಿಸಿದ್ದರು. ಇತ್ತೀಚೆಗೆ ಅವರು ಮಾಧ್ಯಮಗಳ ಜತೆಗೆ ಮಾತನಾಡುತ್ತಾ, ತನ್ನ ಕಿರಿಯ ಮಗ ಅಬ್ರಾಮ್‌ನನ್ನು ಹಾಕಿ ಪಟುವಾಗಿ ಮಾಡುತ್ತೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪರವಾಗಿ ಆಡುವಂತೆ ಪ್ರೋತ್ಸಾಹಿಸುತ್ತೇನೆ ಎಂದು ತನ್ನ ಮನಸ್ಸಿನ ಮಾತನ್ನು ಹೇಳಿದ್ದಾರೆ.

ಐಪಿಎಲ್ ಕೋಲ್ಕತಾ ನೈಟ್‌ರೈಡರ್ಸ್ ತಂಡದ ಸಹ ಮಾಲೀಕರಾಗಿರುವ ಶಾರುಖ್ ಭಾನುವಾರ ಈಡನ್‌ಗಾರ್ಡನ್ಸ್‌ನಲ್ಲಿ ನಡೆದ ಮ್ಯಾಚ್ ವೀಕ್ಷಿಸಲು ಕುಟುಂಬ ಸಮೇತ ಬಂದಿದ್ದರು. ಈ ಮ್ಯಾಚ್‌ನಲ್ಲಿ ಕೋಲ್ಕತಾ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಜಯ ಗಳಿಸಿತು. ಮ್ಯಾಚ್ ಬಳಿಕ ಶಾರುಖ್ ತನ್ನ ಮಗಳು ಸುಹಾನಾ, ಕಿರಿಯ ಪುತ್ರ ಅಬ್ರಾಮ್ ಜತೆಗೆ ಮೈದಾನದಲ್ಲಿ ಕುಣಿದಾಡಿದರು.

ಬಳಿಕ ತಂಡದ ಪ್ರತಿಯೊಬ್ಬರನ್ನೂ ಭೇಟಿ ಮಾಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡುತ್ತಾ, ‘ನನ್ನ ಕಿರಿಯ ಮಗ ಅಬ್ರಾಮ್ ಇನ್ನೂ ಕ್ರಿಕೆಟ್ ಆಡಲು ಆರಂಭಿಸಿಲ್ಲ. ಈಗೀಗ ಸ್ವಲ್ಪ ಫುಟ್‌ಬಾಲ್ ಆಡುತ್ತಿದ್ದಾನೆ. ಅವನನ್ನು ಹಾಕಿ ಪ್ಲೇಯರ್ ಮಾಡುತ್ತೇನೆ. ಅಷ್ಟೇ ಅಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಪ್ರಾತಿನಿಧ್ಯ ವಹಿಸುವಂತೆ ಮಾಡುತ್ತೇನೆ’ ಎಂದಿದ್ದಾರೆ.

ತಂಡದಲ್ಲಿ ಗೌತಮ್ ಗಂಭೀರ್ ಇಲ್ಲದ ಕೊರತೆ ಕಾಡುತ್ತಿದೆ. ಕೆಲವು ಕಾರಣಗಳಿಂದ ಅವರು ಕೋಲ್ಕತಾ ನೈಟ್‌ರೈಡರ್ಸ್ ಬಿಡಬೇಕಾಯಿತು. ತಂಡದಲ್ಲಿನ ಪ್ರತಿ ಆಟಗಾರನೂ ಚೆನ್ನಾಗಿ ಆಡಬೇಕೆಂದು, ಸಂತೋಷವಾಗಿ ಇರಬೇಕೆಂದು ಬಯಸುತ್ತೇನೆ. ಕೋಲ್ಕತಾ, ಬಂಗಾಳದಲ್ಲಿ ಅಭಿಮಾನಿಗಳು ಕಾರ್ತಿಗ್‍ಗೆ ಬೆಂಬಲ ನೀಡಿ ಎಂದು ಶಾರುಖ್ ಈ ಸಂದರ್ಭದಲ್ಲಿ ಹೇಳಿದ್ದಾರೆ.

Comments are closed.