ಕರಾವಳಿ

ಮಂಗಳೂರು : ಚುನಾವಣಾ ಪ್ರಚಾರ ಅನುಮತಿಗೆ ಹಾಗೂ ನೀತಿ ಸಂಹಿತಿ ಉಲ್ಲಂಘನೆಯ ದೂರು ನೀಡಲು ಆನ್‍ಲೈನ್ ವ್ಯವಸ್ಥೆ

Pinterest LinkedIn Tumblr

ಮಂಗಳೂರು ಎಪ್ರಿಲ್ 10 : ರಾಜ್ಯ ವಿಧಾನಸಭಾ ಚುನಾವಣೆ ಪ್ರಯಕ್ತ ಅಭ್ಯರ್ಥಿಗಳಿಗೆ, ರಾಜಕೀಯ ಪಕ್ಷಗಳಿಗೆ ಪ್ರಚಾರ ಕಾರ್ಯಗಳಿಗೆ ಅನುಮತಿ ನೀಡಲು ಹಾಗೂ ಸಾರ್ವಜನಿಕರಿಂದ ನೀತಿ ಸಂಹಿತಿ ಉಲ್ಲಂಘನೆ ಬಗ್ಗೆ ದೂರು ಸ್ವೀಕರಿಸಲು ಚುನಾವಣಾ ಆಯೋಗವು “ಸುವಿಧಾ” ಹಾಗೂ ಸಮಾಧಾನ್ ಎಂಬ ವಿನೂತನ ಆನ್‍ಲೈನ್ ವ್ಯವಸ್ಥೆ ಜಾರಿಗೆ ತಂದಿದೆ.

ರಾಜಕೀಯ ಪಕ್ಷಗಳು ಹಾಗೂ ಚುನಾವಣೆಗೆ ಸ್ಪರ್ಧಿಸುವವರು ನಡೆಸುವ ಸಭೆ, ಬಹಿರಂಗ ಸಮಾವೇಶಗಳು, ತಾತ್ಕಾಲಿಕ ಕಚೇರಿ ಸ್ಥಾಪನೆ, ಸೌಂಡ್ ಸಿಸ್ಟಂಗಳ ಬಳಕೆ, ವಾಹನಗಳ ಬಳಕೆ, ಮೆರವಣಿಗೆ, ರಸ್ತೆ ಬದಿ ಸಭೆಗಳು, ಹೆಲಿಕಾಪ್ಟರ್ ಮತ್ತು ಹೆಲಿಪ್ಯಾಡ್ ಅನುಮತಿ, ಬ್ಯಾರಿಕೇಡ್ ಮತ್ತು ಪ್ಲಾಟ್‍ಫಾರಂ ಅಳವಡಿಕೆ ಸೇರಿದಂತೆ ವಿವಿಧ ಪ್ರಚಾರ ಕಾರ್ಯಗಳಿಗೆ ಅನುಮತಿ ನೀಡಲು “ಸುವಿಧಾ” ಎಂಬ ವ್ಯವಸ್ಥೆ ಅಳವಡಿಸಲಾಗಿದೆ. ಇದರಿಂದ ಒಂದೇ ಸಭೆ/ಸಮಾರಂಭಗಳಿಗೆ ವಿವಿಧ ಕಚೇರಿಗಳಿಗೆ ಅಲೆದಾಡುವ ಬದಲು ಆಯಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿಯಲ್ಲಿಯೇ ಈ ಎಲ್ಲಾ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಬಹುದು.

ಅದೇ ರೀತಿಯಲ್ಲಿ ಚುನಾವಣಾ ನೀತಿ ಸಂಹಿತೆಗಳ ಉಲ್ಲಂಘನೆ ಸೇರಿದಂತೆ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಲು “ ಸಮಾಧಾನ್” ಎಂಬ ಆನ್‍ಲೈನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಸಾರ್ವಜನಿಕರು ಇದರಲ್ಲಿ ಚುನಾವಣೆಗೆ ಸಂಬಂಧಪಟ್ಟ ಯಾವುದೇ ದೂರುಗಳನ್ನು ಅಥವಾ ಮತದಾರರ ಪಟ್ಟಿ, ಗುರುತಿನ ಚೀಟಿಗಳಿಗೆ ಸಂಬಂದಪಟ್ಟ ದೂರು, ಅಹವಾಲುಗಳನ್ನು ಸಲ್ಲಿಸಬಹುದು. ದೂರಿಗೆ ಪೂರಕವಾದ ಯಾವುದೇ ಫೋಟೋ ಅಥವಾ ವೀಡಿಯೋಗಳನ್ನು ಕೂಡಾ ಅಗತ್ಯವಿದ್ದಲ್ಲಿ ಅಪ್‍ಲೋಟ್ ಮಾಡಬಹುದು.

ಈ ಎರಡು ಆನ್‍ಲೈನ್ ವ್ಯವಸ್ಥೆಯಲ್ಲಿ ಅರ್ಜಿ ಸಲ್ಲಿಸಿದ ತಕ್ಷಣ ನೋಂದಣಿ ಸಂಖ್ಯೆ ದೊರೆಯಲಿದ್ದು, ಇದರಿಂದ ಅರ್ಜಿಯ ಸ್ಥಿತಿಗತಿ ಬಗ್ಗೆ ಅರ್ಜಿದಾರರಿಗೆ ಟ್ರಾಕಿಂಗ್ ಮಾಡಲು ಅವಕಾಶವಿದೆ.

ಚುನಾವಣಾ ಆಯೋಗದ ವೆಬ್‍ಸೈಟ್ www.ceokarnataka.kar.nic.in ಇದರ ಮುಖಪುಟದಲ್ಲಿಯೇ ‘ಸುವಿಧಾ’ ಹಾಗೂ ‘ಸಮಾಧಾನ್’ ಲಿಂಕ್‍ಗಳು ಲಭ್ಯವಿದ್ದು, ರಾಜಕೀಯ ಪಕ್ಷಗಳು, ಸಾರ್ವಜನಿಕರು ಇದನ್ನು ಬಳಸಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Comments are closed.