ಮನೋರಂಜನೆ

ಅಸ್ಪಷ್ಟ ಚಿತ್ರಗಳ ನಿಗೂಢ ಸಿನಿಮಾ: ವರ್ತಮಾನ ಚಿತ್ರ ವಿಮರ್ಶೆ

Pinterest LinkedIn Tumblr

*ಪದ್ಮಾ ಶಿವಮೊಗ್ಗ

ನಮ್ಮ ರೇಟಿಂಗ್ 3 / 5
ಓದುಗರ ರೇಟಿಂಗ್3 / 5
ನಿಮ್ಮ ವಿಮರ್ಶೆ ಬರೆಯಿರಿ
ಕಲಾವಿದರುಸಂಚಾರಿ ವಿಜಯ್,ಸಂಜನಾ ಪ್ರಕಾಶ್,ದೀಪಕ್,ವಾಣಿಶ್ರೀ,ಸಪ್ನಾರಾಜ್.
ನಿರ್ದೇಶಕಉಮೇಶ್ ಅಂಶಿ
ಚಿತ್ರದ ವಿಧSuspense,Thriller
ಅವಧಿ2 hrs. 10 Min.

……………………………….
ಉಮೇಶ್‌ ಅಂಶಿ ಚೊಚ್ಚಲ ನಿರ್ದೇಶನದ ಚಿತ್ರ ವರ್ತಮಾನ ರೆಗ್ಯುಲರ್‌ ಸಿನಿಮಾ ಮಾದರಿಯಿಂದ ಬಹು ದೂರ ಇರುವ ಕನ್ನಡದಲ್ಲಿ ಮೊದಲಬಾರಿಗೆ ತೆರೆಕಂಡ ಹೊಸ ಜಾನರ್‌ನ ಚಿತ್ರ. ಯಾವುದನ್ನೂ ನೇರವಾಗಿ ಹೇಳದೆ, ಸ್ಟೈಲಿಶ್‌ ಹಾಲಿವುಡ್‌ ಕ್ರೈಂ ಸಿನಿಮಾ ಹಾದಿಯಲ್ಲಿ ಕೋಡಿಂಗ್‌ ಮತ್ತು ಡಿ ಕೋಡಿಂಗ್‌ ಮಾದರಿಯಲ್ಲಿ ತೆರೆಕಂಡಿರುವ ಚಿತ್ರ ಇದಾಗಿದೆ.

ಕ್ಲಿಷ್ಟಕರವಾದ ಕಥಾವಸ್ತುವನ್ನು ಸಾಂಕೇತಿಕವಾಗಿ ಹೇಳುತ್ತಾ ಹೊಸ ನಿರೂಪಣಾ ಶೈಲಿಯಲ್ಲಿ ಮೂಡಿಬಂದಿದೆ ವರ್ತಮಾನ. ಸಿನಿಮಾ ಜಗತ್ತಿನಲ್ಲಿ ಚಾಲ್ತಿಯಲ್ಲಿರುವ ಕಂಟೆಂಪರರಿ ಸಂಪ್ರದಾಯದ ಶೈಲಿಯಲ್ಲಿ, ಹೆಚ್ಚಾಗಿ ಅಮೆರಿಕದಲ್ಲಿ ಕ್ರೈಂ ಮತ್ತು ಸೈಕಲಾಜಿಕಲ್‌ ಸ್ಟೋರಿಗಳನ್ನು ಸಂಕೇತಗಳ ಮೂಲಕ ಹೇಳುವ ವಿಧಾನದ ಛಾಯೆ ವರ್ತಮಾನ ಮೇಕಿಂಗ್‌ನಲ್ಲಿ ನೋಡಬಹುದು. ಇಲ್ಲಿ ಏನನ್ನೂ ನೇರವಾಗಿ ಹೇಳುವುದಿಲ್ಲ. ಒಂದು ದೃಶ್ಯದಿಂದ ಇನ್ನೊಂದು ದೃಶ್ಯಕ್ಕೆ ಕಥೆ ಪ್ರಯಾಣ ಮಾಡುವುದಕ್ಕಿಂತ ಪ್ರೇಕ್ಷಕ ಟ್ರಾವೆಲ್‌ ಮಾಡಬೇಕಾಗುತ್ತದೆ. ಹಾಗೇ ಪಾತ್ರಗಳು ಮಾತ್ರ ಮಾತನಾಡುವುದಿಲ್ಲ, ಒಂದು ಫೋಟೋ ನೂರು ಮಾತು ಹೇಳುವಂತೆ ಛಾಯಾಗ್ರಹಣ, ಹಿನ್ನೆಲೆ ಸಂಗೀತ, ಕಲರಿಂಗ್‌ ಮೂಡಿಬಂದಿದೆ. ನಿರ್ದೇಶಕ ಕೋಡ್‌ನಲ್ಲಿ ಹೇಳಿರುವುದನ್ನು ಡಿ ಕೋಡ್‌ ಮಾಡುವ ಕೆಲಸವನ್ನು ಪ್ರೇಕ್ಷಕರಿಗೇ ಬಿಡಲಾಗಿದೆ. ಅಬ್ಸ್‌ಟ್ರಕ್ಟ್ ಮಾದರಿಯ ಪೇಯಿಂಟಿಂಗ್‌ನಂತೆಯೂ ಕಾಣುತ್ತದೆ.

ಚಿತ್ರದಲ್ಲಿನ ಪಾತ್ರಗಳು ಅಕ್ಕಪಕ್ಕದ ಮನೆಯಲ್ಲಿರುವಂಥವಲ್ಲ. ಕಣ್ಣಿಗೆ ಕಾಣದ, ಮನಸ್ಸಿನ ಸೂಕ್ಷ್ಮತೆಗೆ ಸಿಗುವಂಥವು. ಶ್ರೀಮಂತಿಕೆಯ ಬದುಕನ್ನು ಕಂಡುಕೊಳ್ಳಲು ಯುವಕರ ತಂಡವೊಂದು ಕ್ರೈಂ ಹಾದಿಯಲ್ಲಿ ಸಾಗುತ್ತದೆ.

ಅವರಲ್ಲೊಬ್ಬನಾದ ಅನಂತ್‌ (ಸಂಚಾರಿ ವಿಜಯ್‌) ಅನುಭವಿಸುವುದು ನಿಜವೋ, ಕಲ್ಪಿಸಿಕೊಂಡಿದ್ದು ನಿಜವೋ ಎಂಬುದರ ನಡುವಿನ ವ್ಯತ್ಯಾಸ ಬಹಳ ತೆಳುವಾದುದು. ಅದೇ ರೀತಿ ಅನುಭವ ಪ್ರೇಕ್ಷಕನಿಗೂ ಆಗಬಹುದು. ಯಾವ ದೃಶ್ಯ ರಿಯಲ್‌ ಯಾವುದು ಅಲ್ಲ ಎನ್ನುವ ಗೊಂದಲವೂ ಉಂಟಾಗುತ್ತದೆ.

ಇಷ್ಟೆಲ್ಲದರ ನಡುವೆ ಸಿನಿಮಾದ ವಿಶ್ವನಾಥ್‌ ಸಂಕಲನ, ಗೋವಿಂದರಾಜು ಛಾಯಾಗ್ರಹಣ ಮತ್ತು ಶರವಣ ಸಂಗೀತ ಅದ್ಭುತ ಎನ್ನಿಸದಿರದು. ವಿಶಿಷ್ಟವಾದ ಅನುಭವವನ್ನು ನೀಡುತ್ತದೆ. ಪ್ರತಿಯೊಂದು ಫ್ರೇಮ್‌ ಏನನ್ನೋ ಹೇಳುತ್ತಿದೆ ಎನ್ನಿಸುತ್ತದೆ. ಫ್ರೆಶ್‌ ಆಗಿದೆ. ಸಂಗೀತ ನಿರ್ದೇಶಕ ಶರವಣ ಚಿತ್ರದ ಇನ್ನೊಬ್ಬ ಹೀರೊ. ಹಾಲಿವುಡ್‌ ಮತ್ತು ಇಂಡಿಯನ್‌ ಶೈಲಿಯನ್ನು ಬ್ಲೆಂಡ್‌ ಮಾಡಿದ ಸಂಗೀತ ಖುಷಿ ನೀಡುತ್ತದೆ. ಉಮೇಶ್‌ ಭರವಸೆ ಮೂಡಿಸಿದ್ದಾರೆ.

ಸಂಚಾರಿ ವಿಜಯ್‌ ಮತ್ತೊಮ್ಮೆ ಡಿಫಿಕಲ್ಟ್‌ ಪಾತ್ರದಲ್ಲಿ ಅದ್ಭುತ ನಟನೆಯಿಂದ ಮನಸ್ಸು ಗೆಲ್ಲುತ್ತಾರೆ. ಎಲ್ಲರ ನಟನೆಯೂ ಅತ್ಯುತ್ತಮವಾಗಿದೆ. ಇದು ಯಾವುದೋ ಒಂದು ವರ್ಗವನ್ನು ಮನದಲ್ಲಿಟ್ಟುಕೊಂಡು ಮನರಂಜನೆ ನೀಡಲು ಮಾಡಿದ ಚಿತ್ರ ಅಲ್ಲ. ಸಿನಿಮಾಗಿರುವ ಸಾಧ್ಯತೆಗಳನ್ನು ಬಳಸಿಕೊಂಡಿರುವ ನಿರ್ದೇಶಕನ ಸಿನಿಮಾ. ಹಾಗಾಗಿ ರೆಗ್ಯುಲರ್‌ ಸಿನಿಮಾಗಿಂತ ಭಿನ್ನವಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆರೆಕಾಣುತ್ತಿರುವ ಪ್ರಯೋಗಾತ್ಮಕ ಚಿತ್ರಗಳನ್ನು ನೋಡಲು ಬಯಸುವವರು ಈ ಚಿತ್ರ ನೋಡಬಹುದು.

Comments are closed.