ಮನೋರಂಜನೆ

ಟ್ವಿಟರ್‌ನಲ್ಲಿ ಪುನೀತ್‌ ಅಭಿಮಾನಿಗಳ ‘ರಚಿತಾ ಬೇಡ’ ಅಭಿಯಾನ

Pinterest LinkedIn Tumblr


ಸೂಪರ್‌ ಹಿಟ್‌ ‘ರಣವಿಕ್ರಮ’ ಚಿತ್ರದ ನಂತರ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಮತ್ತು ನಿರ್ದೇಶಕ ಪವನ್‌ ಒಡೆಯರ್‌ ಮತ್ತೊಮ್ಮೆ ಒಂದಾಗುತ್ತಿರುವ ಸುದ್ದಿ ನಿಮಗೆಲ್ಲ ಗೊತ್ತೇ ಇದೆ. ಈ ಚಿತ್ರಕ್ಕೆ ‘ನಟಸಾರ್ವಭೌಮ’ ಎಂಬ ಟೈಟಲ್‌ ಫಿಕ್ಸ್‌ ಆಗಿದ್ದು, ಅಪ್ಪು ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿರುವ ಚಿತ್ರದ ಟೀಸರ್‌ ಸಖತ್‌ ಸೌಂಡ್‌ ಮಾಡುತ್ತಿದೆ. ಆದರೆ ಅಪ್ಪು ಅಭಿಮಾನಿಗಳಿಗೆ ‘ನಟಸಾರ್ವಭೌಮ’ ಚಿತ್ರಕ್ಕೆ ಸಂಬಂಧಿಸಿದಂತೆ ಒಂದು ಬೇಸರವಿದೆ.

ಮೊದಲು ಈ ಚಿತ್ರದ ನಾಯಕಿ ಪಾತ್ರಕ್ಕೆ ಪ್ರಿಯಾಂಕಾ ಜಾವಲ್ಕರ್‌ ಆಯ್ಕೆಯಾಗಿ, ಚಿತ್ರೀಕರಣವೂ ಪ್ರಾರಂಭವಾಗಿತ್ತು. ಮೊದಲ ದಿನದ ಶೂಟಿಂಗ್‌ ನಂತರ ದಿಢೀರ್‌ ಎಂದು ನಾಯಕಿ ಸ್ಥಾನಕ್ಕೆ ಬದಲಾವಣೆ ಆಯಿತು. ಪ್ರಿಯಾಂಕಾ ‘ನಟಸಾರ್ವಭೌಮ’ನಿಂದ ಹೊರನಡೆದು,, ಆ ಜಾಗಕ್ಕೆ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಅವರನ್ನು ಆಯ್ಕೆ ಮಾಡಲಾಗಿದೆ. ಈ ಹಿಂದೆ ‘ಚಕ್ರವ್ಯೂಹ’ ಚಿತ್ರದಲ್ಲಿ ಪುನೀತ್‌ ಜತೆ ನಟಿಸಿರುವ ರಚಿತಾಗೆ ಇದು ಎರಡನೇ ಅವಕಾಶ.

ಆದರೆ ರಚಿತಾ ರಾಮ್‌ ಅವರನ್ನು ಚಿತ್ರಕ್ಕೆ ಆಯ್ಕೆಮಾಡಿಕೊಂಡಿರುವುದು ಅಪ್ಪು ಅಭಿಮಾನಿಗಳಿಗೆ ಬೇಸರ ತಂದಿದೆ. ಈ ಕುರಿತು ಅಪ್ಪು ಅಬಿಮಾನಿಗಳು ಟ್ವಿಟರ್‌ನಲ್ಲಿ ‘ರಚಿತಾ ಬೇಡ’ ಎನ್ನುವ ಅಭಿಯಾನವನ್ನೂ ಶುರುಮಾಡಿದ್ದಾರೆ. ತಮ್ಮ ಟ್ವೀಟ್‌ಗಳ ಮೂಲಕ ರಚಿತಾ ಅವರನ್ನು ನಾಯಕಿ ಪಾತ್ರದಿಂದ ಕೈಬಿಡಬೇಕು ಎಂದು ನಿರ್ದೇಶಕರನ್ನು ಒತ್ತಾಯಿಸುತ್ತಿದ್ದಾರೆ.

ಪುನೀತ್‌ ಅಭಿಮಾನಿಗಳು ಈ ರೀತಿ ಏಕೆ ಮಾಡುತ್ತಿದ್ದಾರೆ ಎಂಬುವುದಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಆದರೆ ಕೆಲ ಮೂಲಗಳ ಪ್ರಕಾರ ‘ಚಕ್ರವ್ಯೂಹ’ ಚಿತ್ರದ ಪ್ರಮೋಶನ್‌ ವೇಳೆಯಲ್ಲಿ ರಚಿತಾ ಆಡಿದ ಕೆಲ ಮಾತುಗಳು ಅಪ್ಪು ಅಭಿಮಾನಿಗಳಿಗೆ ಕೋಪ ತಂದಿತ್ತು. ಆಗ ಸ್ವತಃ ಪುನೀತ್‌ ಮಧ್ಯ ಪ್ರವೆಶಿಸಿ ವಾತಾವರಣ ತಿಳಿಗೊಳಿಸಿದ್ದರು. ಇದೀಗ ಮತ್ತೆ ರಚಿತಾ ಅವರನ್ನೇ ‘ನಟಸಾರ್ವಭೌಮ’ ಚಿತ್ರಕ್ಕೆ ಆಯ್ಕೆಮಾಡಿಕೊಂಡಿರುವುದು ಪುನೀತ್‌ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿದೆ.

ಅಭಿಮಾನಿಗಳ ಈ ಬೇಸರ ಚಿತ್ರದ ಮೇಲೂ ಪರಿಣಾಮ ಬೀರುವ ಸಾದ್ಯತೆಗಳು ದಟ್ಟವಾಗಿವೆ. ನಿರ್ದೇಶಕ ಪವನ್‌ ಒಡೆಯರ್‌ ಅಪ್ಪು ಅಭಿಮಾನಿಗಳ ಒತ್ತಾಯಕ್ಕೆ ಮಣಿದು ರಚಿತಾ ಅವರನ್ನು ಕೈಬಿಡ್ತಾರಾ ಅಥವಾ ಅವರನ್ನೇ ಮುಂದುವರೆಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Comments are closed.