ಮನೋರಂಜನೆ

ಬೆಳಿಗ್ಗೆ ಅಂಬರೀಶ್‌; ರಾತ್ರಿ ಸುದೀಪ್‌

Pinterest LinkedIn Tumblr


ಅಂಬರೀಶ್‌ ಮತ್ತು ಸುದೀಪ್‌ ನಟಿಸುತ್ತಿರುವ “ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ಚಿತ್ರೀಕರಣ ರೌಂಡ್‌ ದಿ ಕ್ಲಾಕ್‌ ನಡೆಯುತ್ತಿದೆ. ಅಂಬರೀಶ್‌ ಮತ್ತು ಸುದೀಪ್‌ ಇಬ್ಬರೂ ನಟಿಸುತ್ತಿದ್ದರೂ, ಇಬ್ಬರೂ ಮುಖಾಮುಖಿಯಾಗುತ್ತಿಲ್ಲ. ಹೇಗೆ ಎಂಬ ಪ್ರಶ್ನೆ ಬರಬಹುದು. ಅದು ಹೇಗೆಂದರೆ, ಬೆಳಿಗ್ಗೆ ಹೊತ್ತು ಮೋಹನ್‌ ಬಿ ಕೆರೆ ಸ್ಟುಡಿಯೋದಲ್ಲಿ ಅಂಬರೀಶ್‌ ಅಭಿನಯದ ಹಾಡೊಂದರ ಚಿತ್ರೀಕರಣ ನಡೆಯುತ್ತಿದ್ದರೆ, ರಾತ್ರಿ ಹೊತ್ತು ಆರ್‌.ಎಸ್‌. ಗೌಡ ಸ್ಟುಡಿಯೋದಲ್ಲಿ ಸುದೀಪ್‌ ಅಭಿನಯದ ಕಬಡ್ಡಿ ಫೈಟ್‌ವೊಂದರ ಚಿತ್ರೀಕರಣ ನಡೆಯುತ್ತಿದೆ.

ಹಾಗಾಗಿ ಒಂದೇ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದರೂ, ಇಬ್ಬರು ದೊಡ್ಡ ಸ್ಟಾರ್‌ಗಳು ನಟಿಸುತ್ತಿದ್ದರೂ, ಇಬ್ಬರೂ ಮುಖಾಮುಖಿಯಾಗುತ್ತಿಲ್ಲ. ಇನ್ನು “ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರೀಕರಣ ಹಾಜರಾಗಿದ್ದರ ಬಗ್ಗೆ ಸುದೀಪ್‌ ಬಹಳ ಖುಷಿಯಾಗಿದ್ದಾರೆ. ಅದೇ ಖುಷಿಯಲ್ಲಿ ಟ್ವೀಟ್‌ ಸಹ ಮಾಡಿಕೊಂಡಿದ್ದಾರೆ. “ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿರುವುದು ಮತ್ತೆ ಮನೆಗೆ ಬಂದಂತಾಗಿದೆ. ಗುರು ನನ್ನ ಜೊತೆಗೆ ಸಹಾಯಕ ನಿರ್ದೇಶಕರಾಗಿದ್ದರು. ಈಗ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಹುಡುಗರು ಕೆಲಸ ಮಾಡುವುದು ನೋಡುವುದೇ ಖುಷಿ.

ಎಲ್ಲಾ ಸನ್ನಿವೇಶಗಳನ್ನು ಬಹಳ ಸುಲಭವಾಗಿ ನಿಭಾಯಿಸುತ್ತಾರೆ’ ಎಂದು ಸುದೀಪ್‌ ಟ್ವೀಟ್‌ ಮಾಡಿಕೊಂಡಿದ್ದಾರೆ. ಇನ್ನು “ಅಂಬಿ ನಿಂಗೆ ವಯಸ್ಸಾಯ್ತೋ’ದಲ್ಲಿ ಸುದೀಪ್‌ ಜೊತೆಗೆ ಶ್ರುತಿ ಹರಿಹರನ್‌ ಸಹ ನಟಿಸುತ್ತಿದ್ದಾರೆ. ಕಬಡ್ಡಿ ಫೈಟ್‌ ಚಿತ್ರೀಕರಣದ ನಂತರ ಜಾತ್ರೆ ಸನ್ನಿವೇಶವೊಂದನ್ನು ಸೆರೆಹಿಡಿಯಲಾಗುತ್ತದಂತೆ. ಚಿತ್ರವನ್ನು ಗುರುದತ್‌ ಗಾಣಿಗ ನಿರ್ದೇಶಿಸುತ್ತಿದ್ದು, ಜಾಕ್‌ ಮಂಜು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತ, ಜೆಬಿನ್‌ ಜಾಕೋಬ್‌ ಛಾಯಾಗ್ರಹಣ ಚಿತ್ರಕ್ಕಿದೆ.

-ಉದಯವಾಣಿ

Comments are closed.