ರಾಷ್ಟ್ರೀಯ

ದೇಶದಲ್ಲೇ ಉತ್ತಮ ನಿರ್ವಹಣೆ ನಗರ ಪುಣೆ: ಸಮೀಕ್ಷೆ

Pinterest LinkedIn Tumblr


ಪುಣೆ: ಕಸ ವಿಲೇವಾರಿ, ರಸ್ತೆಗಳು, ಪಾದಚಾರಿ ಮಾರ್ಗಗಳ ನಿರ್ವಹಣೆ, ಟ್ರಾಫಿಕ್ ನಿಯಂತ್ರಣ, ವಾಯು ಮಾಲಿನ್ಯ, ಉತ್ತಮ ಆಡಳಿತದಂತಹ ಅಂಶಗಳ ಮೇಲೆ ನಡೆಸಿದ ಅಧ್ಯಯನದಲ್ಲಿ ಪುಣೆ ನಗರಕ್ಕೆ ಮೊದಲ ಸ್ಥಾನ ಸಿಕ್ಕಿದ್ದು ಬೆಂಗಳೂರು ಕೊನೆಯ ಸ್ಥಾನದಲ್ಲಿದೆ.

ಭಾರತೀಯ ನಗರ ವ್ಯವಸ್ಥೆ ವಾರ್ಷಿಕ ಸಮೀಕ್ಷೆ 2017 ಹೆಸರಿನಲ್ಲಿ 20 ರಾಜ್ಯಗಳ 23 ನಗರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಪುಣೆ ಹತ್ತು ಪಾಯಿಂಟ್‌ಗಳಲ್ಲಿ 5.1 ಪಾಯಿಂಟ್‌ಗಳನ್ನು ಪಡೆಯುವ ಮೂಲಕ ಉತ್ತಮ ಪಾಲನೆಯ ನಗರ ಎನ್ನಿಸಿಕೊಂಡಿದೆ. ಇದರ ನಂತರದ ಸ್ಥಾನಗಳಲ್ಲಿ ದಿಲ್ಲಿ (4.4), ಮುಂಬೈ (4.2), ಕೋಲ್ಕತ್ತಾ, ತಿರುವನಂತಪುರಂ, ಭುವನೇಶ್ವರ ನಗರಗಳಿವೆ. ಜನಾಗ್ರಹ್ ಸೆಂಟರ್ ಫಾರ್ ಸಿಟಿಜನ್‍ಶಿಪ್ ಅಂಡ್ ಡೆಮಾಕ್ರಸಿ ಎಂಬ ಸರಕಾರೇತರ ಸಂಸ್ಥೆ ಈ ಸಮೀಕ್ಷೆಯನ್ನು ನಡೆಸಿತು.

ಕಳೆದ ವರ್ಷ 9ನೇ ಸ್ಥಾನದಲ್ಲಿದ್ದ ಪುಣೆ, ಮೊದಲ ಸ್ಥಾನದಲ್ಲಿದ್ದ ತಿರುವನಂತಪುರಂವನ್ನು ಐದನೇ ಸ್ಥಾನಕ್ಕೆ ತಳ್ಳಿ ಈ ವರ್ಷ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ಅಧ್ಯಯನದ ಭಾಗವಾಗಿ ಸ್ಥಳೀಯ ಆಡಳಿತದ ಕಾರ್ಯವೈಖರಿಯನ್ನು ವಿಶ್ಲೇಷಿಸಿ, ಆಡಳಿತ ಗುಣಮಟ್ಟವನ್ನು ಗುರುತಿಸಿದ್ದಾರೆ. ಹತ್ತು ಪಾಯಿಂಟ್‌ಗಳ ಸ್ಕೇಲ್ ವಿಧಾನದಲ್ಲಿ 89 ಪ್ರಶ್ನೆಗಳನ್ನು ರೂಪಿಸಿ ಈ ಅಧ್ಯಯನ ನಡೆಸಿದರು. ದೇಶದಲ್ಲಿನ 23 ನಗರಗಳು 3 ರಿಂದ 5.1 ಪಾಯಿಂಟ್‌ಗಳ ನಡುವೆ ಅಂಕ ಪಡೆದಿವೆ.

ದೇಶದ ಐಟಿ ರಾಜಧಾನಿ ಎಂದೇ ಕರೆಸಿಕೊಂಡಿರುವ ಬೆಂಗಳೂರು ನಗರ ಪಟ್ಟಿಯಲ್ಲಿ ತಳ ಸ್ಥಾನ ಪಡೆದಿರುವುದು ಗಮನಾರ್ಹ. ಬೆಂಗಳೂರು, ಚಂಡಿಗಢ, ಡೆಹ್ರಾಡೂನ್, ಪಟನಾ, ಚೆನ್ನೈ ನಗರಗಳು ಕೇವಲ 3ರಿಂದ 3.3 ಪಾಯಿಂಟ್‍ಗಳನ್ನು ಪಡೆದಿವೆ. ಸ್ಥಳೀಯ ಆಡಳಿತದ ಕಾರ್ಯವೈಖರಿ, ಕಾನೂನು, ಆರ್‌ಟಿಐ ಪ್ರತಿಕ್ರಿಯೆ ಆಧಾರವಾಗಿ ಅಧ್ಯಯನ ನಡೆಸಲಾಗಿದೆ.

ಸ್ಥಳೀಯ ಸಂಸ್ಥೆಗಳ ಆರ್ಥಿಕ ಸಾಮರ್ಥ್ಯವನ್ನು ಉತ್ತಮಗೊಳಿಸಿ, ಸೇವೆಗಳನ್ನು ಜನರಿಗೆ ಇನ್ನಷ್ಟು ಹತ್ತಿರ ತರಲು ಪ್ರಯತ್ನಿಸುತ್ತೇವೆ ಎಂದು ಪುಣೆ ಮುನ್ಸಿಪಲ್ ಕಮೀಷನರ್ ಕುನಾಲ್ ಕುಮಾರ್ ತಿಳಿಸಿದ್ದಾರೆ. ಎಲ್ಲಾ ಸೇವೆಗಳನ್ನು ಡಿಜಿಟಲೈಸೇಷನ್ ಮಾಡುವುದರಿಂದ ತಮ್ಮ ಸಮಯ ಉಳಿತಾಯವಾಗುತ್ತಿದ್ದು ಜನರು ಸಂತಸ ವ್ಯಕ್ತಪಡಿಸುತ್ತಿದ್ದಾರೆ ಎಂದಿದ್ದಾರೆ.

ಬೇರೆ ದೇಶಗಳಲ್ಲಿನ ಮೆಟ್ರೋ ನಗರಗಳಲ್ಲಿ ಆಡಳಿತ, ನಿರ್ವಹಣೆಗೆ ಹೋಲಿಸಿದರೆ ಭಾರತೀಯ ನಗರಗಳಿಗೆ ತುಂಬಾ ವ್ಯತ್ಯಾಸ ಇದೆ. ಈ ಅಂಶಗಳಲ್ಲಿ ದಕ್ಷಿಣ ಆಫ್ರಿಕದ ಜೋಹಾನ್ಸ್‌ಬರ್ಗ್, ಬ್ರಿಟನ್ ರಾಜಧಾನಿ ಲಂಡನ್, ಅಮೆರಿಕಾದ ನ್ಯೂಯಾರ್ಕ್ ನಗರಗಳು ಕ್ರಮವಾಗಿ 7.6, 8.8, 8.8 ಪಾಯಿಂಟ್‍ಗಳನ್ನು ಪಡೆದಿವೆ.

Comments are closed.