ಮನೋರಂಜನೆ

ಅಪಘಾತ ಮಾಡಿ…ತನ್ನನ್ನು ಸುಲಿಗೆ ಮಾಡಲು ಯತ್ನಿಸಿದ್ದಾರೆ ಎಂದು ಸುಳ್ಳು ದೂರು ನೀಡಿದ ನಟ

Pinterest LinkedIn Tumblr

ಬೆಂಗಳೂರು: ಶಂಕರಮಠ ಸಿಗ್ನಲ್‌ನಲ್ಲಿ ವಾಹನವೊಂದಕ್ಕೆ ಮಂಗಳವಾರ ರಾತ್ರಿ ಕಾರು ಗುದ್ದಿಸಿದ್ದ ನಟ ವಿಕ್ರಮ್ ಕಾರ್ತಿಕ್, ಅಪಘಾತದ ವಿಷಯ ಮುಚ್ಚಿಟ್ಟು ‘ತನ್ನನ್ನು 8 ಮಂದಿ ಸುಲಿಗೆ ಮಾಡಿದ್ದಾರೆ’ ಎಂದು ಬಸವೇಶ್ವರನಗರ ಠಾಣೆಗೆ ಬುಧವಾರ ಬೆಳಿಗ್ಗೆ ದೂರು ನೀಡಿದ್ದಾರೆ.

‘ವಿಕ್ರಮ್ ನಟಿಸಿರುವ ‘ನಾಗವಲ್ಲಿ ವರ್ಸಸ್‌ ಆಪ್ತಮಿತ್ರರು’ ಚಿತ್ರ ಎರಡು ವಾರಗಳಲ್ಲಿ ಬಿಡುಗಡೆಯಾಗಲಿದೆ. ದೂರಿನ ಅಂಶಗಳು ಸುಳ್ಳು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗುತ್ತಿದೆ. ಸಿನಿಮಾ ಪ್ರಚಾರಕ್ಕಾಗಿ ಈ ದೂರು ನೀಡಿರುವ ಅನುಮಾನ ಇದೆ. ಅದು ಸಾಬೀತಾದರೆ, ಅವರ ವಿರುದ್ಧವೇ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ದೂರಿನ ಅಂಶ: ‘ಸ್ನೇಹಿತನನ್ನು ಮನೆಗೆ ಬಿಟ್ಟು ಮನೆಯತ್ತ ಸ್ವಿಫ್ಟ್‌ ಕಾರಿನಲ್ಲಿ ಬರುತ್ತಿದೆ. ರಾತ್ರಿ 11.30ರ ಸುಮಾರಿಗೆ ಬಸವೇಶ್ವರನಗರದ ವಾಟರ್ ಟ್ಯಾಂಕ್ ಹತ್ತಿರ ದುಷ್ಕರ್ಮಿಗಳು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ’ ಎಂದು ದೂರಿನಲ್ಲಿ ವಿಕ್ರಮ್‌ ತಿಳಿಸಿದ್ದರು.

‘ನನ್ನ ಬಳಿಯಲ್ಲಿದ್ದ ₹50 ಸಾವಿರ ಹಣವನ್ನು ದುಷ್ಕರ್ಮಿಗಳು ಕಿತ್ತೊಯ್ದಿದ್ದಾರೆ. ಆಧಾರ್‌ ಸಂಖ್ಯೆ, ಗುರುತಿನ ಚೀಟಿ, ಮೊಬೈಲ್, ಲ್ಯಾಪ್‌ಟಾಪ್‌ ಹಾಗೂ ಸಿನಿಮಾದ ಹಾರ್ಡ್‌ಡಿಸ್ಕ್‌ ಸಹ ಕಸಿದುಕೊಂಡಿದ್ದಾರೆ. ನಂತರ, ನನ್ನದೇ ಕೆಂಪು ಬಣ್ಣದ ಸ್ವಿಫ್ಟ್‌ ಕಾರಿನಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹಲ್ಲೆಯಿಂದಾಗಿ ಕಿವಿ ಸರಿಯಾಗಿ ಕೇಳುತ್ತಿಲ್ಲ. ಮೈಮೇಲೆ ಗಂಭೀರ ಗಾಯಗಳಾಗಿವೆ. ಪುಣ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ’ ಎಂದು ಅವರು ಹೇಳಿದ್ದರು.

ತನಿಖೆಯಿಂದ ನಿಜಾಂಶ ಬಯಲು:‌ ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ಎರಡು ತಂಡಗಳ ಮೂಲಕ ಆರೋಪಿಗಳ ಪತ್ತೆಗೆ ಮುಂದಾಗಿದ್ದರು. ಘಟನಾ ಸ್ಥಳಕ್ಕೆ ಹೋಗಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದಾಗ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಶಂಕರಮಠ ಸಿಗ್ನಲ್‌ನಲ್ಲಿ ಅಪಘಾತ ನಡೆದ ವಿಷಯ ತಿಳಿದು, ಅದರ ತನಿಖೆ ಕೈಗೊಂಡಾಗಲೇ ನಿಜಾಂಶ ಬಯಲಾಗಿದೆ.

‘ಮದ್ಯದ ಅಮಲಿನಲ್ಲಿದ್ದ ವಿಕ್ರಮ್‌, ಒಬ್ಬರೇ ಕಾರು ಓಡಿಸಿಕೊಂಡು ಮನೆಯತ್ತ ಹೊರಟಿದ್ದರು. ಶಂಕರಮಠ ಸಿಗ್ನಲ್ ಸಮೀಪ ನಿಂತಿದ್ದ ಇನ್ನೊಂದು ಕಾರಿಗೆ ರಾತ್ರಿ 12.30ಕ್ಕೆ ಕಾರು ಗುದ್ದಿಸಿದ್ದರು. ‌ಕಾರಿನ ಮಾಲೀಕರು ವಿಕ್ರಮ್‌ನನ್ನು ತಡೆದು ತರಾಟೆಗೆ ತೆಗೆದುಕೊಂಡಿದ್ದರು. ಕಾರು ದುರಸ್ತಿ ಮಾಡಿಸಿಕೊಡುವಂತೆ ಹೇಳಿದ್ದರು. ಸ್ಥಳೀಯರು ಸಹ ನಟನ ವರ್ತನೆಯನ್ನು ಪ್ರಶ್ನಿಸಿದ್ದರು’

‘ಆಗ ಮಾಲೀಕರನ್ನು ಸಮಾಧಾನಪಡಿಸಿದ್ದ ವಿಕ್ರಮ್‌, ‘ನಾಳೆ ಬಂದು ದುರಸ್ತಿ ಮಾಡಿಸಿಕೊಡುತ್ತೇನೆ. ಅಲ್ಲಿಯವರೆಗೂ ನನ್ನ ಕಾರು, ಮೊಬೈಲ್, ಲ್ಯಾಪ್‌ಟಾಪ್‌ ನಿಮ್ಮ ಬಳಿಯೇ ಇಟ್ಟುಕೊಳ್ಳಿ’ ಎಂದು ಅಲ್ಲಿಂದ ಹೊರಟು ಹೋಗಿದ್ದರು. ನಂತರ, ಅವರೇ ಆಸ್ಪತ್ರೆಗೆ ದಾಖಲಾಗಿದ್ದರು. ಅಪಘಾತದ ಬಗ್ಗೆ ಪ್ರತ್ಯಕ್ಷದರ್ಶಿಗಳಿಂದ ಹೇಳಿಕೆ ಪಡೆದಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

Comments are closed.