ಮನೋರಂಜನೆ

ನಟಿ ಸಿಂಧೂ ಕುಟುಂಬಸ್ಥರ ವಿರುದ್ಧ ಮತ್ತೂಂದು ದೂರು

Pinterest LinkedIn Tumblr


ಬೆಂಗಳೂರು: ಬಾಡಿಗೆ ಅಗ್ರಿಮೆಂಟ್‌ ಮಾಡಿಕೊಡಲು ನೀಡಿದ್ದ ದಾಖಲೆಗಳನ್ನು ದುರುಪಯೋಗ ಪಡಿಸಿಕೊಂಡು ವಂಚಿಸಿರುವ ಆರೋಪದ ಮೇಲೆ ನಟಿ ಸಿಂಧೂ ಮೆನನ್‌ ಕುಟುಂಬ ಸದಸ್ಯರ ವಿರುದ್ಧ ಮತ್ತೂಂದು ದೂರು ದಾಖಲಾಗಿದೆ. ಸಹೋದರ ಮನೋಜ್‌ ಕಾರ್ತಿಕೇನ್‌ ಮತ್ತು ಸಹೋದರಿ ಸುಧಾ ರಾಜಶೇಖರ್‌ ಹಾಗೂ ತಾಯಿ ದೇವಿ ಮೆನನ್‌ ವಿರುದ್ಧ ಯಶವಂತಪುರ ಠಾಣೆಯಲ್ಲಿ ಗಣೇಶ್‌ ರಾವ್‌ ಎಂಬುವರು ದೂರು ನೀಡಿದ್ದು, ಎಫ್ಐಆರ್‌ ದಾಖಲಾಗಿದೆ.

2017ರ ಮಾರ್ಚ್‌ನಲ್ಲಿ ಸಿಂಧೂ ಸಹೋದರಿ ಸುಧಾ ವರ್ಮಾ ಅಸೋಸಿಯೇಟ್ಸ್‌ ಹೆಸರಿನಲ್ಲಿ ಆಯುರ್ವೇದ ಕ್ಲೀನಿಕ್‌ ನಡೆಸುತ್ತಿದ್ದರು. ಇದಕ್ಕೆ ಗಣೇಶ್‌ ರಾವ್‌ ತಮ್ಮ ಕಟ್ಟಡದ ನೆಲಮಹಡಿಯಲ್ಲಿ ಬಾಡಿಗೆ ನೀಡಿದ್ದು, 2 ಲಕ್ಷ ರೂ. ಮುಂಗಡ ಹಣ ಹಾಗೂ ಮಾಸಿಕ 20 ಸಾವಿರ ರೂ. ಬಾಡಿಗೆ ನಿಗದಿ ಮಾಡಲಾಗಿತ್ತು. ಅದರಂತೆ ಮನೋಜ್‌ ಮುಂಗಡವಾಗಿ ಒಂದು ಲಕ್ಷ ಚೆಕ್‌ ನೀಡಿದ್ದರು.

ಆದರೆ, ಈ ಚೆಕ್‌ ಬೌನ್ಸ್‌ ಆಗಿತ್ತು. ನಂತರ ಇದನ್ನು ಪ್ರಶ್ನಿಸಿದಾಗ ಬೇರೆ ಚೆಕ್‌ ಕೊಡುತ್ತೇನೆ, ಹಾಗೆಯೇ ಮಳಿಗೆಯ ಕರಾರು ಪತ್ರ ಮಾಡಿಸುತ್ತೇನೆ ಎಂದು ಕಟ್ಟಡ ಮಾಲೀಕ ಗಣೇಶ್‌ರಾವ್‌ ಅವರ ಆಧಾರ್‌ ಕಾರ್ಡ್‌, ಚುನಾವಣಾ ಗುರುತಿನ ಚೀಟಿ, ಪಾನ್‌ಕಾರ್ಡ್‌ ಹಾಗೂ ಇತರೆ ದಾಖಲೆಗಳನ್ನು ಕರಾರು ಪತ್ರ ಮಾಡಲು ಕೊಂಡೊಯ್ದಿದ್ದ.

ಆದರೆ, ಈ ಮಧ್ಯೆ ಆರೋಪಿ ಬ್ಯಾಂಕಿನಿಂದ ಯಾವುದೇ ಲೋನ್‌ ಆಗಿಲ್ಲ ಮಳಿಗೆ ಬಾಡಿಗೆ ಬೇಡ ಎಂದು ಕೀ ಕೊಟ್ಟು ಹೋಗಿದ್ದ. ಆದರೆ, ನಂತರ ಮೂರು ತಿಂಗಳಾದರೂ ದಾಖಲೆಗಳನ್ನು ವಾಪಸ್‌ ತಂದು ಕೊಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸುನೀಲ್‌ ಇದೇ ದಾಖಲೆಗಳನ್ನು ಇಟ್ಟುಕೊಂಡು ಸಂಜಯ್‌ನಗರ ವಿಜಯ ಬ್ಯಾಂಕಿನಲ್ಲಿ ಗಣೇಶ್‌ರಾವ್‌ ಅವರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಲೋನ್‌ಗೆ ಅರ್ಜಿ ಸಲ್ಲಿಸಿದ್ದ. ಈ ಸಂಬಂಧ ಸಂಜಯ್‌ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಗಣೇಶ್‌ರಾವ್‌ ಅವರನ್ನು ವಿಚಾರಣೆಗೆಂದು ಕರೆಸಿಕೊಂಡಾಗ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

-ಉದಯವಾಣಿ

Comments are closed.