ರಾಷ್ಟ್ರೀಯ

ಅಯೋಧ್ಯೆ: ಮೂರನೆಯವರ ಮಧ್ಯಪ್ರವೇಶಕ್ಕೆ ಸುಪ್ರೀಂ ಕಿಡಿ

Pinterest LinkedIn Tumblr


ಹೊಸದಿಲ್ಲಿ: ಅಯೋಧ್ಯೆ ವಿವಾದಕ್ಕೆ ಸಂಬಂಸಿದಂತೆ ಮೂಲ ಅರ್ಜಿಯಲ್ಲಿ ಇರುವ ವಾದಿ-ಪ್ರತಿವಾದಿಗಳನ್ನು ಹೊರತುಪಡಿಸಿ ಇತರರು ಅರ್ಜಿ ಸಲ್ಲಿಸುವಂತಿಲ್ಲ ಎಂದು ಬುಧವಾರ ತಾಕೀತು ಮಾಡಿರುವ ಸುಪ್ರೀಂ ಕೋರ್ಟ್‌, ಎಲ್ಲಾ 32 ಮಧ್ಯಾಂತರ ಅರ್ಜಿಗಳನ್ನು ವಜಾ ಮಾಡಿದೆ.

ಪ್ರಕರಣದಲ್ಲಿ ತಮ್ಮನ್ನೂ ‘ಪಾರ್ಟಿ’ಗಳಾಗಿ ಸೇರಿಸಿಕೊಂಡು ವಾದ ಆಲಿಸುವಂತೆ ಕೋರಿ ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಸೇರಿದಂತೆ ಹಲವು ಮಂದಿ ಮಧ್ಯಾಂತರ ಅರ್ಜಿ ಸಲ್ಲಿಸಿದ್ದರು. ಬುಧವಾರ ಅರ್ಜಿಗಳ ವಿಚಾರಣೆ ನಡೆಸಿದ, ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾ. ಅಶೋಕ್‌ ಭೂಷಣ್‌ ಮತ್ತು ನ್ಯಾ. ಎಸ್‌ ಎ ನಜೀರ್‌ ಅವರನ್ನೊಳಗೊಂಡ ಪೀಠ, ”ಮೂಲ ಅರ್ಜಿಯಲ್ಲಿ ಇರುವ ವಾದಿ-ಪ್ರತಿವಾದಿಗಳು ಮಾತ್ರ ತಮ್ಮ ವಾದವನ್ನು ಮಂಡನೆ ಮಾಡಬಹುದು. ಅವರನ್ನು ಹೊರತುಪಡಿಸಿ, ಇತರ ಯಾವುದೇ ವ್ಯಕ್ತಿಗಳ ಮಧ್ಯಪ್ರವೇಶವನ್ನು ಮಾನ್ಯ ಮಾಡಲಾಗದು,” ಎಂದು ಹೇಳಿತು.

ಇದೇ ವೇಳೆ, ನ್ಯಾಯಾಲಯದ ಹೊರಗೆ ಸಂಧಾನ ಮಾತುಕತೆಯ ಮೂಲಕ ವ್ಯಾಜ್ಯ ಪರಿಹಾರದ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ ನ್ಯಾಯಾಲಯ, ”ಅದನ್ನು ಎರಡೂ ಕಡೆಯವರು ನಿರ್ಧರಿಸಿಕೊಳ್ಳಬೇಕು,” ಎಂದಿತು. ಮುಂದಿನ ವಿಚಾರಣೆಯನ್ನು ಮಾ. 23ಕ್ಕೆ ನಿಗದಿಗೊಳಿಸಿದೆ.

ಅರ್ಜಿ ವಜಾಗೊಂಡ ಬಗ್ಗೆ ಪ್ರತಿಕ್ರಿಯಿಸಿರುವ ಸುಬ್ರಮಣಿಯನ್‌ ಸ್ವಾಮಿ, ”ಪೂಜೆ ಮಾಡುವುದು ನನ್ನ ಮೂಲ ಹಕ್ಕು. ಆಸ್ತಿಯ ಹಕ್ಕಿಗಿಂತ ಈ ಹಕ್ಕು ದೊಡ್ಡದು. ಆದ್ದರಿಂದ ನನ್ನ ವಾದವನ್ನೂ ಆಲಿಸುವಂತೆ ಕೋರಿ ಮಧ್ಯಾಂತರ ಅರ್ಜಿ ಸಲ್ಲಿಸಿದ್ದೆ,” ಎಂದಿದ್ದಾರೆ.

Comments are closed.