ರಾಷ್ಟ್ರೀಯ

ಯಡ್ಯೂರಪ್ಪ ರಾತ್ರೋರಾತ್ರಿ ಶಾಮನೂರು ಮನೆಗ್ ಹೋಗಿದ್ರಂತೆ!

Pinterest LinkedIn Tumblr


ಏನ್ಲಾ ಸೀನ, ನೆನ್ನೆ ಎಲ್ಲಿಲ್ಲಾ, ಈ ಕಡೆ ಕಾಣ್ಲೆ ಇಲ್ವಲ್ಲಾ? ಎಲ್ಲಿ ಹಾಳಾಗ್ ಹೋಗಿದ್ಯೋ ಬಡ್ಡಿಹೈದ್ನೆ? ವತ್ತೊತ್ತರನೇ ಬಂದ್ ಅರಳಿಕಟ್ಟೆ ಹತ್ರುಕ್ಕ್ ವಕ್ರಿಸ್ಕೊಂಡ್ ಬುಟ್ಟಿದ್ದೀಯಾ ಅಂತ ಕೊಶ್ಚನ್ ಮ್ಯಾಲ್ ಕೊಶ್ಚನ್ ಮಾಡ್ತಾನೆ ಬಂದ ಪಟೇಲಪ್ಪ. ಏ ನಾನ್ ನೆನ್ನೆ ಮಂಡ್ಯಾಕ್ ಹೋಗಿದ್ದೆ ಕಣ್ ಬಾ ದೊಡ್ಡಪ್ಪ, ಊರಲ್ಲಿರ್ನಿಲ್ಲ. ಅದಕ್ಕೆ ಇಲ್ಲೆಲ್ಲೂ ಕಾಣಿಸ್ಕಂಡಿಲ್ಲ. ನಾನು ಬರೋದು ರಾತ್ರೆ ಶ್ಯಾನೆ ತಡ ಆಯ್ತು. ಜತ್ಗೆ ಉದಯ್‌ರಂಗ ಬಸ್ ಬ್ಯಾರೆ ನಡು ದಾರೀಲ್ ಕೆಟ್ಟೋಗಿ ಅದೊಸಿ ವತ್ತಾಗೋಯ್ತು ಕಣಾ ಅಂದ ಸೀನ.

ಏನಪ್ಪ ಮಂಡ್ಯಾದಾಗ್ ನಿಂಗಿದ್ದುದ್ದು ಅಂತ ಘನಂಧಾರಿ ಕೇಮೆ? ನೀನಿಲ್ದೇ ನಡೆಯಕ್ಕೆ ಇಲ್ಲ ಬಂದ್ಬುಡು ಅಂತ ಅದ್ಯಾವ್ ಬಡ್ಡಿಹೈದ ನಿಂಗೆ ಟೆಲಿಗ್ರಾಮ್ ಮಾಡಿದ್ದ? ಊರ್ ತಿರ‌್ಗಕ್ ಹೋಗ್ಬೇಕು ಅಂದ್ರೆ, ಬಡ್ಡಿಹೈದ ಏನಾರ ನ್ಯಪ ಮಾಡ್ಕೊಂಡ್ ಹೊಂಟ್ಬುಡ್ತಿಯಾ. ಅದ್ಕೇನ್ ತಡಬಡನೇ ಇಲ್ಲ ಅಂದ ಪಟೇಲಪ್ಪ.

ಹಂಗೇನಿಲ್ಲ ಕಣ್ ಬಾ ದೊಡ್ಡಪ್ಪೋ, ನೆನ್ನೆ ಮಂಡ್ಯ ಸಂಜಯ ಟಾಕೀಸ್ ಸರ್ಕಲ್‌ತಾವ ಇಂದ್ರಾ ಕ್ಯಾಂಟೀನ್ ಉದ್ಘಾಟ್ನೆ ಮಾಡಿದ್ರಲ್ವೇ, ಅಲ್ಗೆ ಹೋಗಿದ್ದೆ ಕಣಾ, ಏನ್ ಜನಾ ಅಂತೀಯಾ, ಮೊದ್ಲಿ ದಿನ ಪುಕ್ಸಟ್ಟೆ ಊಟ ಬ್ಯಾರೆ ಕೊಟ್ರು ನೋಡು ಜನ ಸೇರಿದ್ರು. ಜನ್ದೊಳ್ಗೆ ಒಬ್ರು ಮೊಖ ಒಬ್ರಿಗೆ ಕಾಣ್ತಿರ್ನಿಲ್ಲ. ನಮ್ಗೆ ಇನ್ನ ಮಂಡ್ಯಕ್ಕೋದ್ರೆ ಫುಲ್ ಈಜಿ ಆಯ್ತು ಬುಡು. ಐದ್ರುಪಾಯ್ಗೆ ನಾಷ್ಟ, ಹತ್ರುಪಾಯ್ಗೆ ಹೊಟ್ಟೆತುಂಬಾ ಊಟ ಮಾಡ್ಕಂಡ್ ಬರ್‌ಬೋದು ಅಂದ ಸೀನ.

ಲೇ, ಬಡ್ಡಿಹೈದ್ನೆ, ಮಂಡ್ಯುಕ್ಕು ಬಂದ್ಬುಡ್ತೇ ಇದ್ರಾ ಕ್ಯಾಂಟೀನು. ಒಳ್ಳೇದೆ ಆತು ಬುಡು. ಆದ್ರೆ, ಇದು ಎಲ್ಲಿಗಂಟ ನಡೀತದೆ ಅನ್ಕಂಡಿದ್ದೀಯಾ? ಎಲೆಕ್ಸನ್ ಆಗೋವರ್ಗೆ ಇದ್ರೆ ಹೆಚ್ಚಲ್ವೇ? ಬಡ್ಡೈದ್ನೆ, ಅಲ್ಲೇ ಇದ್ಯಂತೆ ಗೊತ್ತಾಗ್ನಿಲ್ವಾ, ನೆನ್ನೆ ಉದ್ಘಾಟ್ನೆ ಮಾಡಕ್ಕೆ ಪುಣ್ಯಾತ್ಮುರು ಬ್ಯಾರೆ ಯಾವ್ದೋ ಹೋಟ್ಲಿಂದ ತಿಂಡಿ ತರ್ಸಿದ್ರಂತೆ ನಿಜಾನೇ? ‘ಅಟ್ಟಿಕ್ಕಳಾಟ ಆಚಿಂದೀಚ್ಗೆ ಓಡಾಡ್ವಾಗ್ಲೇ ಗೊತ್ತಾಯ್ತದೆ ಅನ್ನಂಗೆ’ ಈವ್ರು ಎಂಥಾ ಚೆಂದುಕ್ಕೆ ಕ್ಯಾಂಟೀನ್ ಮೇಂಟೇನ್ ಮಾಡ್ತಾರೆ ಅನ್ನೋದು ಬ್ಯಾರೆ ಹೋಟ್ಲಿಂದ ತಿಂಡಿ ತಂದಾಗ್ಲೇ ಗೊತ್ತಾಗಕುಲ್ವೇ, ಹಿಂಗೆ ಕಣ್ ಹೇಳು ಇವ್ರು ಮುಂದಿಕ್ಕೆ ಆ ಕ್ಯಾಂಟೀನ್ ಉಳಿಸ್ಕೊಳ್ಳದು ಅಂದ ಪಟೇಲಪ್ಪ.

ಏನಪ್ಪಾ, ಎಲ್ಲ ಆದ್ಮೇಲೆ, ನಮ್ಗೂ ಚೂರ್‌ಚೂರ್ ತಿಂಡಿ ಕೊಟ್ರು, ಶ್ಯಾನೆ ಚೆಂದಾಗಿತ್ತು ಶ್ಯಾವ್ಗೆ ಬಾತು. ತಿನ್ಕೊಂಡ್ ಬಂದ್ವಿ. ಬೋ ರುಚಿಯಾಗಿತ್ತು. ಇಂದ್ರಾ ಮಾಡಿದ್ರೆ ಇಷ್ಟೊಂದ್ ಚೆಂದಾರ್ತದಾ ಅಂತ ನಂಗೂ ಆಗ್ಲೇ ಅನ್ಮುಾನ ಬಂತು. ಹಿಂಗೆ, ಅನ್ನು ಇದ್ರೊಳ್ಗಿರೋ ಸೀಕ್ರೇಟ್ ಮ್ಯಾಟ್ರು? ಅಂದ ಸೀನ. ಇನ್ನೇನ್ಲಾ ಮತ್ತೆ ದೊಡ್ಡೋರ್ ಕಾಟ ತಡೀನಾರುದ್ಕೆ ನಾವು ಕ್ಯಾಂಟೀನ್ ಓಪನ್ ಮಾಡಿದ್ದೀವಿ ಅಂತ ಮಾಡ್ಯವೆ. ಆದ್ರೆ, ಅದ್ಕೆ ಬೇಕಾದ ಅಡ್ಗೆ ಮಾಡಿ ಹಾಕದ್ಕೆ ತಯಾರಿ ಮಾಡ್ಕಂಡಿಲ್ಲ. ಅದ್ಕೆ ಬಂದೋರ್ ಮುಂದೆ ಮರ್ವಾದೆ ಕಳ್ಕಳ್ಳದ್ ಬ್ಯಾಡ ಅಂತೇಳಿ, ಬ್ಯಾರೆ ಹೋಟ್ಲಿಂದ ತಿಂಡಿ ತರ‌್ಸವ್ರೆ. ಬಂದೋರು ಇಲ್ಲಿದೇ ಏನೋ ಊಟ ಚೆನ್ನಾಗ್ಯದೆ.

ನಾಳಿಂದ್ಲೂ ಇಲ್ಗೆ ಬಂದ್ಬುಡನಾ ಅಂತ ಮಾತಾಡ್ಕೊಂಡು ಮನೆಗೋಗ್ಯವೆ. ಆಮ್ಯಾಲ್ ಗೊತ್ತಾಗ್ಯದೆ ಇದು ಇಂದ್ರಾ ಕ್ಯಾಂಟೀನಲ್ಲಿ ಮಾಡಿರೋ ತಿಂಡ್ಯಲ್ಲ ಅಂತ. ಈಗ್ಲೆ ಹಿಂಗ್ ಮಾಡಿರೋರು ಇಂತೋರು ಜಾಸ್ತಿ ದಿನ ನಡುಸ್ತಾರ್ಲಾ ಕ್ಯಾಂಟೀನ್ನಾ.
ಎಲೆಕ್ಸನ್ ಗಂಟ ಹಂಗೆ ಆಡಿಸ್ಬುಟ್ಟು ಆಮೇಲೆ ಮುಚ್ಚಾಕ್ಬುಟ್ಟು ಜನಕ್ಕೆ ಉಚ್ಚೆ ಉಯ್ಯೋ ಜಾಗ ಮಾಡ್ಯಾಕ್ಬುಡ್ತರೆ ಕಣ್ ತಗ ಅಂದ ಪಟೇಲಪ್ಪ.

ಏನೋ ದೊಡ್ಡಪ್ಪ, ನಾಲ್ಕ್ ಜನಕ್ಕೆ ಅನ್ಕೂಲ್ ಆಗೋದ್ನಾ ಏನೋ ಮಾಡ್ತಾರೆ ಅಂತ ಅಂದ್ಕೊಂಡಿರ್ತೀವಿ. ಆದ್ರೆ, ಮಾಡೋ ಅವ್ತಾರ್‌ಗೋಳ್ ನೋಡಿದ್ರೆ ಅದು ಶ್ಯಾನೆ ದಿನ ಬಾಳಲ್ಲ ಅನ್ನೋದು ಗೊತ್ತಾಯ್ತದೆ. ಹಿಂಗೆ ಆದ್ರೆ ಬಡುವ್ರೆಲ್ಲ ಅದ್ಯಾವತ್ತು ಉದ್ಧಾರಾಗದೋ ಕಾಣೆ ಕಣ್ ಹೋಗು. ಅದಿರ್ಲಿ, ಇಷ್ಟು ದಿನದ್ ಗಂಟ ಸುಮ್ಕೆ ಇದ್ದ ಯಡ್ಯೂರಪ್ಪ ಇವತ್ತು ಲಿಂಗಾಯಿತ್ರು ಧರ್ಮದ್ ಬಗ್ಗೆ ಮಾತಾಡವ್ರಂತೆ ಏನ್ ದೊಡ್ಡಪ್ಪ ಸಮಾಚಾರ ಅಂದ ಸೀನ.

ಏನಿಲ್ಲಾ ಕಣ್ಲಾ, ದೊಡ್ಡೋರು ಟೈಮ್ ನೋಡ್ಕಂಡು ಮಾತಾಡಿ ಅಂತೇಳಿದ್ರಂತೆ. ಮೊನ್ನೆ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಲಿಂಗಾಯಿತ ಧರ್ಮದ್ ಇಚಾರ ಬಂದು ಕಿತಾಪತಿ ಇದೇ ಒಳ್ಳೆ ಟೇಮು ಅಂತ ಕಾಂಗ್ರೆಸ್ ಗೌರ್ಮೆಂಟು ಲಿಂಗಾಯತ್ರಿಗೆ ಯಾವ್ದೂ ಒಳ್ಳೇ ಪೋಸ್ಟ್ನೇ ಕೊಟ್ಟಿಲ್ಲ. ಅವ್ರಿಗೆ ಬೇಕಾದ್ ಆಫೀಸರ್‌ಸ್ಗಳ್ನೆಲ್ಲ ಒಳ್ಳೊಳ್ಳೆ ಪೋಸ್ಟಿಗ್ ತಂದ್ಬುಟ್ಟು ನಮ್ಮೋರ್ನೆಲ್ಲ ಕಡೆಗಣಿಸ್ತಾವ್ರೆ ಸಿದ್ರಾಮಯ್ಯ, ಜತ್ಗೆ ಜಾತಿ ಹೆಸ್ರಿನಾಗೆ ಸಮಾಜ ಹೊಡಿಯೋಕ್ ನೋಡ್ತಾ ಅವ್ರೆ ಅಂತೇಳವ್ರಂತೆ ಅಂದ ಪಟೇಲಪ್ಪ.

ಅಷ್ಟೆ ಅಲ್ಲ ಕಣ್ ದೊಡ್ಡಪ್ಪ, ಮೊನ್ನೆ ಮಧ್ಯರಾತ್ರಿಲೋ ಇಲ್ಲ ಬೆಳ್ಳಂಬೆಳಿಗ್ಗೇಲೋ ಶ್ಯಾಮನೂರು ಶಿವಶಂಕ್ರಪ್ಪ ಮನೆಗೆ ಕಾಣದ್ಹಂಗ ಹೋಗಿ ಬಾಳೆದೆಲೆ ಹಾಕಿಸ್ಕೊಂಡು ತಿಂಡಿ ತಿನ್ಕಂಡ್ ಬಂದವ್ರಂತೆ. ಇದು ಅಂದ್ರೆ ಸಿದ್ರಾಮ್ಯ್ಯನೋರ್ಗೆ ಲಿಂಗಾಯ್ತ ಧರ್ಮದ್ ಇಚಾರದಾಗೆ ಯಾವ್ದೇ ನಿರ್ಧಾರ ತಗಂಡ್ರು ಯಡ್ವಟ್ಟು ಮಾಡಂಗದೆ ಅಂದ ಸೀನ.

ಏನೋ ಬುಡು, ನೈಸ್ ರೋಡ್ ಮಾಡ್ತೀನಿ ಅಂತ ರೈತ್ರಿಗೆಲ್ಲ ಮೋಸ ಮಾಡಿದ್ ಖೇಣಿನಾ ಕಾಂಗ್ರೆಸ್‌ಗೆ ಕರ್ಕೊಳ್ಳೋಕೆ ಬೇಜಾನ್ ಫಂಡಿಂಗ್ ಆಗ್ಯದೆ ಅಂತ ನಿಮ್ಮ ಕುಮಾರಣ್ಣ ಆರೋಪ ಮಾಡ್ಯದಂತೆ? ನಿಜ್ವೇನ್ಲಾ ಅಂದ ಪಟೇಲಪ್ಪ. ಕುಮಾರಣ್ಣ ಆರೋಪ ಮಾಡದ್ ಏನ್ ಬಂತು ದೊಡ್ಡಪ್ಪ, ಕಾಂಗ್ರೆಸ್ನೋರೆ ಬೇಜಾನ್ ಎಗ್ರಾಡ್ತಾವ್ರೆ. ನೈಸ್ ಸುತ್ತಮುತ್ತ ಇರೋ ಎಮ್ಮೆಲ್ಲೆಗಳು ಗ್ವಾತ ನಾವು ಅಂತ ಭಯ ಶುರುವಾಗ್ಯದಂತೆ. ಜತ್ಗೆ ಖರ್ಗೆ ಸಾಹೇಬ್ರು ಮೊಕನಾ ಕೆಂಪಗ್ ಮಾಡ್ಕಂಡವ್ರಂತೆ ಅಂದ ಸೀನ.

ಊ ಕಣ್ ಬುಡ್ಲಾ, ಕಾಂಗ್ರೆಸ್‌ಗುವೆ ಯಾಕ್ ಬೇಕಿತ್ತು. ಇರ್ನಾರದೋಳು ಇರುವೆ ಬುಟ್ಕಂಡ್ಳು ಅನ್ನಂಗೆ ಎಲೆಕ್ಸನ್ ಟೈಮ್‌ನಾಗೆ ಹಿಂಗೆಲ್ಲ ಮಾಡ್ಕೊಳ್ಳೋದ್ ಬೇಕಿತ್ತಾ, ಖೇಣಿ ಏನ್ ಒಂದ್ ಐದಾರು ಕ್ಷೇತ್ರ ಗೆಲ್ಲಸ್ಕೊಂಡೋ ತಾಕತ್ ಇರೂ ಮನ್ಸ ಅಂದ್ರೆ ಓಕೆ. ಆದ್ರೆ, ಅವ್ರು ಕ್ಷೇತ್ರದಲ್ಲೆ ಗೆಲ್ತಾರೋ ಇಲ್ವೋ ಅನ್ನೋದು ಗ್ಯಾರಂಟಿ ಇಲ್ಲ. ಅಂತದ್ರದಲ್ಲಿ ಯಾಕ್ ಪಾರ್ಟಿಗ್ ಅಂತ ಗೊಣಗಾಡಕ್ ನಿಂತಾವ್ರೆ ಕೈ ಪಾರ್ಟಿನೋರು ಅಂದ ಸೀನ.

ಏನೋ ಅಪ್ಪಾ, ಎಲೆಕ್ಷನ್ ಹತ್ರ ಬತ್ತಿದ್ದಂಗೆ ಇಲ್ಲದ್ ಉಸಾಬರಿ ಮಾಡಕ್ ಹೋಯ್ತಾ ಅವ್ರೆ. ಈಗ್ಲೆ, ನಲಫಾಡ್ ಜತ್ಗೆ ಒಂದಷ್ಟು ಜನ ಸೇರ್ಕೊಂಡು ಗಂಡಾಂತ್ರ ತಂದ್ ಮಡಿಗ್ಯವ್ರೆ. ಅಂತದ್ರಲ್ಲಿ ಹಿಂಗೆಲ್ಲ ಹಿಂದೆ ಮುಂದೆ ನೋಡ್ದೆ ಸಿಕ್ಕಸಿಕ್ಕೋರ್ನೆಲ್ಲಾ ಪಾರ್ಟಿಗೆ ಸೇರಿಸ್ಕೊಂಡು ಅವಾಂತ್ರ ಮಾಡ್ಕೊಂಡ್ರೆ ಬೋ ಕಷ್ಟ ಆಯ್ತದೆ ಅಂದ ಪಟೇಲಪ್ಪ.

Comments are closed.