
ಶರಣ್ ಅಭಿನಯದ “ರ್‍ಯಾಂಬೋ 2′ ಈ ತಿಂಗಳ ಕೊನೆಯ ಹೊತ್ತಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿ, ಚಿತ್ರವನ್ನು ಸೆನ್ಸಾರ್ ಮಂಡಳಿಗೆ ತೋರಿಸುವ ಧಾವಂತದಲ್ಲಿರುವ ಚಿತ್ರತಂಡವು, ಈ ಮಧ್ಯೆ ಸದ್ದಿಲ್ಲದೆ ಇನ್ನೋವೇಟೀವ್ ಫಿಲ್ಮ್ ಸಿಟಿಯಲ್ಲಿ ಒಂದು ಹಾಡನ್ನು ಚಿತ್ರೀಕರಿಸುವಲ್ಲಿ ನಿರತವಾಗಿದೆ.
ವಿಶೇಷವೆಂದರೆ, ಈ ಚಿತ್ರದಲ್ಲಿ ಶರಣ್ ಜೊತೆಗೆ ಐವರು ನಾಯಕಿಯರು ಹೆಜ್ಜೆ ಹಾಕುತ್ತಿದ್ದಾರೆ. ಹೌದು, ಶರಣ್ ಜೊತೆಗೆ ಈ ಹಿಂದಿನ ಕೆಲವು ಚಿತ್ರಗಳಲ್ಲಿ ನಟಿಸಿರುವ ಶ್ರುತಿ ಹರಿಹರನ್, ಶುಭಾ ಪೂಂಜ, ಭಾವನಾ ರಾವ್, ಸಂಚಿತಾ ಪಡುಕೋಣೆ ಮತ್ತು ಮಯೂರಿ, “ರ್‍ಯಾಂಬೋ 2’ನ ಹಾಡಿನಲ್ಲಿ ಶರಣ್ ಜೊತೆಗೆ ಹಾಕುತ್ತಿದ್ದಾರೆ. ಈಗಾಗಲೇ ಕಳೆದ ಎರಡು ದಿನಗಳಿಂದ ಈ ಹಾಡಿನ ಚಿತ್ರೀಕರಣ ನಡೆಯುತ್ತಿದೆ.
ಮದುವೆಯಾಗದ ನಾಯಕ ಹುಡುಗಿಯ ಹುಡುಕಾಟದಲ್ಲಿ ಹಾಡುವ “ಎಲ್ಲಿ ಕಾಣೆ ಎಲ್ಲಿ ಕಾಣೆ …’ ಎಂಬ ಹಾಡಿನ ಚಿತ್ರೀಕರಣವಾಗುತ್ತಿದ್ದು, ಮುರಳಿ ಮಾಸ್ಟರ್ ಹಾಡಿಗೆ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ. ಶರಣ್ ಅವರ ಲಡ್ಡು ಸಿನಿಮಾ ಬ್ಯಾನರ್‌ನಡಿ ಈ “ರ್‍ಯಾಂಬೋ 2′ ಚಿತ್ರವು ನಿರ್ಮಾಣವಾಗುತ್ತಿದ್ದು, ಚಿತ್ರದ ನಿರ್ಮಾಣದಲ್ಲಿ ಅಟ್ಲಾಂಟ ನಾಗೇಂದ್ರ ಹಾಗೂ ಚಿತ್ರಕ್ಕೆ ಕೆಲಸ ಮಾಡುವ ತಂತ್ರಜ್ಞರು ಕೈ ಜೋಡಿಸಿದ್ದಾರೆ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಛಾಯಾಗ್ರಾಹಕ ಸುಧಾಕರ್ ರಾಜ್, ಸಂಕಲನಕಾರ ಕೆ.ಎಂ. ಪ್ರಕಾಶ್, ಕಲಾ ನಿರ್ದೇಶಕ ಮೋಹನ್ ಬಿ ಕೆರೆ, ಕ್ರಿಯೇಟಿವ್ ಹೆಡ್ ತರುಣ್ ಸುಧೀರ್ ಇವರೆಲ್ಲಾ ವರ್ಕಿಂಗ್ ಪಾಟ್ನರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರದಿಂದ ಬಂದ ಲಾಭದಲ್ಲಿ ಎಲ್ಲರಿಗೂ ಶೇರ್ ಸಿಗಲಿದೆಯಂತೆ. ಈ ಹಿಂದೆ “ದಿಲ್‌ವಾಲ’ ಚಿತ್ರ ಮಾಡಿದ್ದ ಅನಿಲ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಶರಣ್‌ಗೆ ನಾಯಕಿಯಾಗಿ ಆಶಿಕಾ ನಟಿಸಿದ್ದಾರೆ. ಚಿತ್ರದಲ್ಲಿ ಚಿಕ್ಕಣ್ಣ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
-ಉದಯವಾಣಿ
Comments are closed.