ರಾಷ್ಟ್ರೀಯ

ಚೆನ್ನೈ: ರೈತ ನಾಯಕನಿಗೆ ಬಿಜೆಪಿ ನಾಯಕಿಯಿಂದ ಕಪಾಳ ಮೋಕ್ಷ

Pinterest LinkedIn Tumblr


ಚೆನ್ನೈ: ಕೇಂದ್ರ ಸರಕಾರವನ್ನು ಟೀಕಿಸುವ ಕರಪತ್ರಗಳನ್ನು ಹಂಚಿದ ಕಾರಣಕ್ಕೆ ಸಿಟ್ಟಿಗೆದ್ದ ಬಿಜೆಪಿ ಮಹಿಳಾ ವಿಭಾಗದ ಜಿಲ್ಲಾ ಕಾರ್ಯದರ್ಶಿ ನೆಲ್ಲಯ್‌ಯಮ್ಮಾಳ್‌, ತಮಿಳು ನಾಡಿನ ರೈತ ನಾಯಕ ಪಿ ಅಯ್ಯಕಣ್ಣು ಅವರಿಗೆ ಕಪಾಳ ಮೋಕ್ಷ ಮಾಡಿ, ಕೋಪಾವೇಶದ ಪರಾಕಾಷ್ಠೆಯಲ್ಲಿ ಕಾಲಲ್ಲಿದ್ದ ಚಪ್ಪಲಿಯನ್ನು ಕೈಗೆತ್ತಿಕೊಂಡು ಬೆದರಿಸಿದ ಘಟನೆಯ ವಿಡಿಯೋ ಚಿತ್ರಿಕೆ ಈಗ ವೈರಲ್‌ ಆಗಿದೆ.

ಮಾತಿನ ಜಗಳದಲ್ಲಿ ಉದ್ರಿಕ್ತತೆ ತಲೆದೋರಿದ ಈ ಘಟನೆ ನಡೆದದ್ದು ಚೆನ್ನೈನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ.

ರೈತ ನಾಯಕ ಅಯ್ಯಕಣ್ಣು ಅವರು ರೈತರ ಸಂಕಷ್ಟಗಳ ಬಗ್ಗೆ ಸರಕಾರದ ಗಮನ ಸೆಳೆದು ಪರಿಹಾರ ಕಾಣಲು ನೂರು ದಿನಗಳ ಪ್ರತಿಭಟನಾ ರಾಲಿ ನಡೆಸುತ್ತಿದ್ದಾರೆ. ಈ ರಾಲಿಯನ್ನು ಅವರು ಕಳೆದ ವಾರ ಕನ್ಯಾಕುಮಾರಿಯಲ್ಲಿ ಆರಂಭಿಸಿದರು. ಅವರು ಹೋದಲ್ಲೆಲ್ಲ ಜನರನ್ನು ಉದ್ದೇಶಿಸಿ ಮಾತನಾಡಿ ರೈತರ ಬೇಡಿಕೆಗಳನ್ನು ಒಳಗೊಂಡ ಕರಪತ್ರಗಳನ್ನು ಜನರಿಗೆ ವಿತರಿಸುತ್ತಾರೆ. ಅವರ ಬೇಡಿಕೆಗಳಲ್ಲಿ ರೈತರ ಕೃಷಿ ಸಾಲ ಮನ್ನಾ, ರೈತರ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ, ಹಿರಿಯ ರೈತರಿಗೆ ಪಿಂಚಣಿ ಮುಖ್ಯವಾಗಿವೆ.

ತಿರುಚೆಂದೂರು ದೇವಳ ಆವರಣವನ್ನು ಇವರು ಪ್ರವೇಶಿಸಿ ಅಲ್ಲಿದ್ದವರಿಗೆ ರೈತರ ಬೇಡಿಕೆಗಳ ಕರ ಪತ್ರ ವಿತರಿಸುವಾಗ ಅಲ್ಲಿಗೆ ಧಾವಿಸಿ ಬಂದ ಬಿಜೆಪಿ ನಾಯಕಿ ಕರಪತ್ರ ಕಸಿದು ಮಾತಿನ ಜಗಳ ಆರಂಭಿಸಿ ಕಪಾಳ ಮೋಕ್ಷ ಮಾಡಿ ಚಪ್ಪಲಿ ಕೈಗೆತ್ತಿಕೊಂಡು ರೈತ ನಾಯಕನಿಗೆ ಬೆದರಿಕೆ ಹಾಕಿದರು !

-ಉದಯವಾಣಿ

Comments are closed.