ಮನೋರಂಜನೆ

ಆರಾಧ್ಯ ‘ದೇವಿ’ಯ ಬದುಕಿನ ಕಟು ಸತ್ಯಗಳನ್ನು ಹೇಳಿದ ಆರ್‌ಜಿವಿ

Pinterest LinkedIn Tumblr


ಮುದ್ದು ಮುಖ, ಬೊಗಸೆ ಕಂಗಳ ಚೆಲುವೆ ಶ್ರೀದೇವಿ ತನ್ನ ಅಪೂರ್ವ ಸೌಂದರ್ಯ ಹಾಗೂ ಅದ್ಭುತವಾದ ಅಭಿನಯ, ನೃತ್ಯ ಮೂಲಕ ಲಕ್ಷಾಂತರ ಅಭಿಮಾನಿಗಳ ಕನಸಿನ ರಾಣಿಯಾಗಿ ಮೆರೆದವರು.

ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಅಂತೂ ಶ್ರೀದೇವಿಯ ದೊಡ್ಡ ಅಭಿಮಾನಿ. ಅವರಿಗೋಸ್ಕರ ‘ಕ್ಷಣ ಕ್ಷಣಂ’ ಚಿತ್ರವನ್ನೇ ಮಾಡಿದ್ದರು. ಶ್ರೀದೇವಿ ಮರಣದ ಸುದ್ದಿ ಕೇಳಿ ಶಾಕ್‌ಗೆ ಒಳಗಾಗಿದ್ದರು. ದೇವರೇ ನೀನೆಷ್ಟು ನಿರ್ದಯಿ, ಆಕೆಯನ್ನು ಕರೆದುಕೊಂಡು ನನ್ನ ಮಾತ್ರ ಏಕೆ ಉಳಿಸಿದೆ ಎಂದು ಭಾವುಕರಾಗಿದ್ದರು.

ಶ್ರೀದೇವಿ ಸಾವಿನ ಬಳಿಕ ರಾಮ್‌ಗೋಪಾಲ್‌ ವರ್ಮಾ ಮನದಾಳದ ಮಾತುಗಳಿಗೆ ಅಕ್ಷರ ರೂಪ ನೀಡಿದ್ದಾರೆ. ಒಂದು ಪತ್ರ ಬರೆದಿದ್ದು ಅದರಲ್ಲಿ ಶ್ರೀದೇವಿಯ ಖಾಸಗಿ ಬದುಕು ಹಾಗೂ ಆಕೆ ಎದುರಿಸಿದ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದಾರೆ…

* ಬಾಲ್ಯದಲ್ಲಿಯೇ ಚಿತ್ರರಂಗದಲ್ಲಿ ಮಿಂಚಿದ ಶ್ರೀದೇವಿ ಹದಿಹರೆಯಕ್ಕೆ ಬಂದಾಗ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಆ ಕಾಲದಲ್ಲಿ ಅತ್ಯಧಿಕ ಸಂಭಾವನೆ ಪಡೆಯುತ್ತಿದ್ದ ನಟಿಯೆಂದರೆ ಶ್ರೀದೇವಿ. ಶ್ರೀದೇವಿ ತಂದೆ ತೆರಿಗೆ ಕಟ್ಟುವುದನ್ನು ತಪ್ಪಿಸಲು ಶ್ರೀದೇವಿ ಗಳಿಕೆಯ ಹಣವನ್ನು ನೆಂಟರ ಬಳಿ ಕೊಟ್ಟು ಇಟ್ಟಿದ್ದರು. ಆದರೆ ಅವರ ತಂದೆ ತೀರಿ ಹೋದಾಗ ಯಾರೂ ದುಡ್ಡು ಹಿಂತಿರುಗಿಸಲಿಲ್ಲ. ಅಲ್ಲದೆ ತಾಯಿಯೂ ಕೆಲವು ಕಡೆ ಹಣ ಹೂಡಿಕೆ ಮಾಡಿ ನಷ್ಟ ಅನುಭವಿಸಿದರು. ಇದರಿಂದ ಶ್ರೀದೇವಿಗೆ ಆರ್ಥಿಕ ಸಂಕಷ್ಟ ಎದುರಾಯಿತು.

* ಶ್ರೀದೇವಿ ತಾಯಿಗೆ ಮಿದುಳಿನ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಅದಾದ ಬಳಿಕ ಅವರು ಮಾನಸಿಕ ಅಸ್ವಸ್ಥ ರಾದರು. ಕೆಲ ಕಾಲದ ಬಳಿಕ ಕೊನೆಯುಸಿರೆಳೆದರು. ತಾಯಿ ಸಾಯುವ ಮೊದಲೇ ಎಲ್ಲ ಆಸ್ತಿ ಶ್ರೀದೇವಿಗೆ ಸೇರಬೇಕೆಂದು ಉಯಿಲು ಬರೆದಿದ್ದರು. ಆದರೆ ಶ್ರೀದೇವಿ ಸಹೋದರಿ ಅದನ್ನು ನಮ್ಮ ತಾಯಿ ಮಾನಸಿಕ ಅಸ್ವಸ್ಥರಾಗಿದ್ದಾಗ ಬರೆದಿದ್ದು ಎಂದು ಕೋರ್ಟ್‌ ಮೆಟ್ಟಿಲೇರಿದ್ದರು. ಇದರಿಂದಾಗಿ ಶ್ರೀದೇವಿ ಮತ್ತಷ್ಟು ಆರ್ಥಿಕ ಸಂಕಟಕ್ಕೆ ಒಳಗಾಗಿದ್ದರು.

* ಬೋನಿ ಕಪೂರ್‌ ತಾಯಿ ಶ್ರೀದೇವಿಯನ್ನು ಮೊದಲಿಗೆ ‘ಮನೆ ಮುರುಕಳು’ ಎಂದು ಇಷ್ಟ ಪಡುತ್ತಿರಲಿಲ್ಲ. ಲೋಬಿ ಹೋಟೆಲ್‌ನಲ್ಲಿ ಶ್ರೀದೇವಿ ಹೊಟ್ಟೆಗೆ ಗುದ್ದಿದ್ದರು ಕೂಡ.

* ಚಿಕ್ಕಂದಿನಲ್ಲಿಯೇ ಸೆಲೆಬ್ರಿಟಿಯಾಗಿದ್ದ ಶ್ರೀದೇವಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದರು. ಇದರಿಂದಾಗಿ ಯಾರೊಂದಿಗೂ ಸುಲಭದಲ್ಲಿ ಬೆರೆಯುತ್ತಿರಲಿಲ್ಲ.

* ರಾಮ್‌ಗೋಪಾಲ್ ವರ್ಮಾ ಪ್ರಕಾರ ಆಕೆ ಕ್ಯಾಮರಾ ಮುಂದೆ ನಿಂತಾಗ ಮಾತ್ರ ತುಂಬಾ ಶಾಂತವಾಗಿ, ಸಂತೋಷವಾಗಿ ಇರುತ್ತಿದ್ದರು. ಏಕೆಂದರೆ ಆ್ಯಕ್ಷನ್-ಕಟ್‌ ಸಮಯದಲ್ಲಿ ಮಾತ್ರ ಆಕೆಗೆ ಎಲ್ಲಾ ಕಹಿ ಅನುಭವ ಮರೆತು ಫ್ಯಾಂಟಸಿ ಲೋಕದಲ್ಲಿ ಇರಲು ಸಾಧ್ಯವಾಗುತ್ತಿತ್ತು.

Comments are closed.