ಕೆಲವೇ ಸಿನಿಮಾಗಳಲ್ಲಿ ನಟಿಸಿ ಮರೆಯಾಗುವ ಅದೆಷ್ಟೋ ನಾಯಕಿಯರು ಹೊಟ್ಟೆ ಕಿಚ್ಚುಪಡುವ ಮಟ್ಟಕ್ಕೆ ಶ್ರೀದೇವಿಯವರು ರಾರಾಜಿಸುತ್ತಾ ಹೋದರು. ಪುಟ್ಟ ಮಗುವಿನಿಂದ ಆರಂಭವಾದ ಪಯಣದಲ್ಲಿ ಪ್ರೇಮಿಯಾಗಿ, ಪತ್ನಿಯಾಗಿ, ಮುಗ್ಧಳಾಗಿ, ಹಠಮಾರಿ ಹೆಣ್ಣಾಗಿ, ನ್ಯಾಯಕ್ಕಾಗಿ ಹೋರಾಡುವ ಛಲದ ಹೆಣ್ಣಾಗಿ, ಹೋರಾಟದಲ್ಲಿ ನಾಯಕನಿಗೆ ಬೆನ್ನೆಲುಬಾಗಿ ನಿಲ್ಲುವ ಧೈರ್ಯ ವಂತಳಾಗಿ, ಮಧ್ಯಮ ವರ್ಗದ ಮಹಿಳೆಯರ ಪ್ರತಿನಿಧಿಯಂಥ ಪಾತ್ರಗಳನ್ನು ಹೆಚ್ಚಾಗಿ ನಿರ್ವಹಿಸಿದ್ದಾರೆ.
ಬಹುಶಃ ಶ್ರೀದೇವಿಯವರಿಗೆ ಸಿಕ್ಕಂತಹ ಒಂದು ಅದ್ಭುತ ಕೆರಿಯರ್ ಯಾವ ನಟಿಗೂ ಸಿಕ್ಕಿಲ್ಲ ಎಂದರೆ ತಪ್ಪಲ್ಲ. ನೀವು ಅವರ ಸಿನಿ ಪಯಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ನಿಮಗೆ ಒಬ್ಬ ಪರಿಪೂರ್ಣ ಹೆಣ್ಣು ಕಾಣಸಿಗುತ್ತಾಳೆ. ಅದು ಮಗುವಿನಿಂದ ಹಿಡಿದು ತಾಯಿಯವರೆಗಿನ ಅದ್ಭುತವಾದ ಜರ್ನಿ. ನಾಯಕಿಯಾಗಿ ಎಂಟ್ರಿಕೊಟ್ಟು ಕೆಲವೇ ಸಿನಿಮಾಗಳಲ್ಲಿ ನಟಿಸಿ ಮರೆಯಾಗುವ ಅದೆಷ್ಟೋ ನಾಯಕಿಯರು ಹೊಟ್ಟೆ ಕಿಚ್ಚುಪಡುವ ಮಟ್ಟಕ್ಕೆ ಶ್ರೀದೇವಿಯವರು ರಾರಾಜಿಸುತ್ತಾ ಹೋದರು.
ಅವರ ಸಿನಿ ಕೆರಿಯರ್‌ನಲ್ಲಿ ನಿಮಗೆ ಯಾವ ಪಾತ್ರ ಸಿಗೋದಿಲ್ಲ ಹೇಳಿ, ಪುಟ್ಟ ಮಗುವಿನಿಂದ ಆರಂಭವಾದ ಪಯಣದಲ್ಲಿ ಜೀವನದ ವಿವಿಧ ಮಜಲುಗಳಲ್ಲಿ ಬರುವ ಎಲ್ಲಾ ಅವತಾರಗಳನ್ನು ಶ್ರೀದೇವಿ ತೆರೆಮೇಲೆ ಮಾಡಿ ತೋರಿಸಿದ್ದಾರೆ. ಮಗುವಾಗಿ, ಪ್ರೇಮಿಯಾಗಿ, ಪತ್ನಿಯಾಗಿ, ಮುಗ್ಧಳಾಗಿ, ಹಠಮಾರಿ ಹೆಣ್ಣಾಗಿ, ನ್ಯಾಯಕ್ಕಾಗಿ ಹೋರಾಡುವ ಛಲದ ಹೆಣ್ಣಾಗಿ, ಕುಟುಂಬವನ್ನು ಕಾಪಾಡುವ ಗಟ್ಟಿಗಿತ್ತಿಯಾಗಿ,
ಹೋರಾಟದಲ್ಲಿ ನಾಯಕನಿಗೆ ಬೆನ್ನೆಲುಬಾಗಿ ನಿಲ್ಲುವ ಧೈರ್ಯವಂತಳಾಗಿ, ಮಧ್ಯಮ ವರ್ಗದವಳಾಗಿ, ಅವಮಾನನ್ನು ಮೆಟ್ಟಿ ಸಾಧನೆ ಮಾಡುವ ಸಾಧಕಿಯಾಗಿ, ಮುದ್ದಿನ ತಾಯಿಯಾಗಿ …. ಹೀಗೆ ಎಲ್ಲಾ ಬಗೆಯ ಅವತಾರಗಳನ್ನು ಸಮಗ್ರವಾಗಿ ನಿರ್ವಹಿಸಿರುವ ಪರಿಪೂರ್ಣ ನಟಿ ಶ್ರೀದೇವಿ. ಶ್ರೀದೇವಿ ನಟಿಸಿರುವ ಸಿನಿಮಾಗಳ ಪಟ್ಟಿಯನ್ನು ನೀವು ಸೂಕ್ಷ್ಮವಾಗಿ ಕಣ್ಣಾಡಿಸಿದರೆ ಅವರ ಕೆರಿಯರ್ ಎಷ್ಟು ಅದ್ಭುತವಾಗಿತ್ತು ಎಂಬುದು ನಿಮಗೆ ಗೊತ್ತಾಗುತ್ತದೆ.
ಕಲಾವಿದೆಯಾಗಿ ಒಂದು ವೃತ್ತವನ್ನು ಪೂರ್ಣಗೊಳಿಸಿದ ನಟಿ. ಶ್ರೀದೇವಿ ಮಾಡದ ಪಾತ್ರ ಯಾವುದಾದರೂ ಇದೆಯಾ ಎಂದು ಲೆಕ್ಕ ಹಾಕಿದರೆ ಉತ್ತರ ಸಿಗುವುದು ಕಷ್ಟ. ಆ ಮಟ್ಟಿನ ಒಂದು ಅದ್ಭುತವಾದ ಹಾಗೂ ಸಮಗ್ರ ಕೆರಿಯರ್ ಹೊಂದಿದ್ದ ನಟಿ ಶ್ರೀದೇವಿ. ಶ್ರೀದೇವಿಯವರನ್ನು ಯಾವುದೇ ಒಂದು ಚಿತ್ರರಂಗದಲ್ಲಿ ಗುರುತಿಸೋದು ಕಷ್ಟ. ತಮಿಳು, ತೆಲುಗು, ಹಿಂದಿ, ಕನ್ನಡ, ಮಲಯಾಳಂ … ಹೀಗೆ ಎಲ್ಲಾ ಭಾಷೆಗಳಲ್ಲಿ ಸಿನಿಮಾ ಮಾಡುತ್ತಾ, ಪ್ಯಾನ್ ಇಂಡಿಯಾ ನಟಿಯಾದವರು ಶ್ರೀದೇವಿ.
ಯಾವುದೇ ಒಂದು ಭಾಷೆ, ಪ್ರಾಂತ್ಯಕ್ಕೆ ಸೀಮಿತವಾಗದೇ ತನ್ನ ಕೆರಿಯರ್ ಅನ್ನು ವಿಸ್ತರಿಸುತ್ತಾ ಹೋಗಿದ್ದೇ ಅವರ ಜನಪ್ರಿಯತೆಗೆ ಕಾರಣವಾಯಿತು. ಡಾ.ರಾಜಕುಮಾರ್ ಸೇರಿದಂತೆ ಭಾರತೀಯ ಚಿತ್ರರಂಗದ ಖ್ಯಾತ ನಾಯಕರುಗಳ ಜತೆಗೆ ತೆರೆಯನ್ನು ಹಂಚಿಕೊಂಡಿದ್ದು ಇವರ ವಿಶೇಷತೆಗಳಲ್ಲೊಂದು. ಪ್ರತಿ ಭಾಷೆಯ ಸ್ಟಾರ್ ನಟರು ಕೂಡಾ ತಮ್ಮ ಚಿತ್ರದಲ್ಲಿ ಶ್ರೀದೇವಿ ನಾಯಕಿಯಾಗಿದ್ದರೆ ಚೆಂದ ಹಾಗೂ ಅವರ ಕಾಲ್‌ಶೀಟ್‌ಗಾಗಿ ಕಾಯುವ ಮಟ್ಟಕ್ಕೆ ಬೆಳೆದ ಖ್ಯಾತಿಯನ್ನು ಶ್ರೀದೇವಿ ಹೊಂದಿದ್ದರು ಎಂಬುದು ಹೆಮ್ಮೆ.
ಕನ್ನಡದ 6 ಚಿತ್ರಗಳಲ್ಲಿ ಶ್ರೀದೇವಿ ನಟನೆ: ಭಾರತೀಯ ಚಿತ್ರರಂಗದಲ್ಲೇ “ಅತಿಲೋಕ ಸುಂದರಿ’ ಎನಿಸಿಕೊಂಡಿದ್ದ ನಟಿ ಶ್ರೀದೇವಿ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗು ಮಲಯಾಳಂ ಭಾಷೆಯಲ್ಲಿ 260 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಶ್ರೀದೇವಿ ಕನ್ನಡದಲ್ಲೂ ಕಾಣಿಸಿಕೊಂಡಿದ್ದರು ಎಂಬುದು ವಿಶೇಷ. 1974ಮತ್ತು 1979ರ ಅವಧಿಯಲ್ಲೇ ಕನ್ನಡದ ಆರು ಚಿತ್ರಗಳಲ್ಲಿ ನಟಿಸಿದ್ದರು.
ಡಾ.ರಾಜಕುಮಾರ್ ಅಭಿನಯದ “ಭಕ್ತಕುಂಬಾರ’ ಚಿತ್ರದಲ್ಲಿ ಶ್ರೀದೇವಿ ಸಂತ ನಾಮದೇವನ ಸಹೋದರಿ ಮುಕ್ತಾಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆಗ ಶ್ರೀದೇವಿ ನಟನೆ ನೋಡಿದ್ದ ಹಿರಿಯ ಕಲಾವಿದೆ ಲೀಲಾವತಿ ಬೆನ್ನುತಟ್ಟಿದ್ದರು. ಇದಲ್ಲದೆ, 1974 ರ ಆಸುಪಾಸಿನಲ್ಲಿ “ಬಾಲ ಭಾರತ’, “ಸಂಪೂರ್ಣ ರಾಮಾಯಣ’, “ಯಶೋಧಾ ಕೃಷ್ಣ’ ಚಿತ್ರಗಳಲ್ಲಿ ನಟಿಸಿದ್ದರು.
1975 ರಲ್ಲಿ “ಹೆಣ್ಣು ಸಂಸಾರದ ಕಣ್ಣು’ ಚಿತ್ರದಲ್ಲೂ ಶ್ರೀದೇವಿ ಕಾಣಿಸಿಕೊಂಡಿದ್ದರು. ಆ ಬಳಿಕ 1979ರಲ್ಲಿ “ಪ್ರಿಯಾ’ ಎಂಬ ಚಿತ್ರದಲ್ಲೂ ನಾಯಕಿಯಾಗಿದ್ದರು. ಆ ಚಿತ್ರದಲ್ಲಿ ಅಂಬರೀಶ್ ಹಾಗು ರಜನಿಕಾಂತ್ ನಾಯಕರು. ಚಿತ್ರದ “ಡಾರ್ಲಿಂಗ್ ಡಾರ್ಲಿಂಗ್’ ಹಾಡು ಸೂಪರ್ ಹಿಟ್ ಆಗಿತ್ತು. ಇನ್ನೊಂದು ವಿಶೇಷವೆಂದರೆ, ಶ್ರೀದೇವಿ ಅವರು ಡಾ.ರಾಜಕುಮಾರ್ ಅಭಿನಯಿಸಿದ್ದ “ಅನುರಾಗ ಅರಳಿತು’ ಚಿತ್ರದ ರಿಮೇಕ್ ಚಿತ್ರದಲ್ಲೂ ನಟಿಸಿದ್ದರು.
“ಅನುರಾಗ ಅರಳಿತು’ ಚಿತ್ರ ಹಿಂದಿಯಲ್ಲಿ “ಲಾಡ್ಲಾ’ ಹೆಸರಲ್ಲಿ ನಿರ್ಮಾಣಗೊಂಡಿತ್ತು. 90ರ ದಶಕದಲ್ಲಿ ಬಿಡುಗಡೆಯಾದ ಆ ಚಿತ್ರ ಬಾಲಿವುಡ್‌ನ ಬಾಕ್ಸಾಫೀಸ್ ಹಿಟ್ ಆಗಿತ್ತು. ಅನಿಲ್‌ಕಪೂರ್ ಮತ್ತು ಶ್ರೀದೇವಿ ಚಿತ್ರದಲ್ಲಿ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಬಾಲಿವುಡ್‌ಗೆ ಕಾಲಿಟ್ಟಿದ್ದ ಶ್ರೀದೇವಿ ಅವರಿಗೆ ಮೊದಲು ಸ್ಟಾರ್‌ಪಟ್ಟ ತಂದುಕೊಟ್ಟ ಚಿತ್ರ “ಜಾಗ್ ಉತಾ ಇನ್ ಸಾನ್’. ಇದು 1984 ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಶ್ರೀದೇವಿ ಅವರು ನರ್ತಕಿ ಪಾತ್ರ ಮಾಡಿದ್ದರು.
ಅಪರೂಪದ ಸಾಧಕಿ: ದಕ್ಷಿಣ ಭಾರತದಿಂದ ಬಾಲಿವುಡ್‌ಗೆ ಪ್ರವೇಶ ಪಡೆದು ಸ್ಟಾರ್‌ಗಳಾದ ವೈಜಯಂತಿ ಮಾಲಾ, ರೇಖಾ, ಹೇಮಾಮಾಲಿನಿ ಮಾದರಿಯಲ್ಲೇ ಬಾಲಿವುಡ್‌ಗೆ ಕಾಲಿಟ್ಟ ಶ್ರೀದೇವಿ, ಅವರೆಲ್ಲರನ್ನೂ ಮೀರಿಸಿ ಸೂಪರ್ ಸ್ಟಾರ್ ಪಟ್ಟ ಪಡೆದವರು.
80ರ ದಶಕದಲ್ಲಿ ತೆರೆಕಂಡ ಹಿಮ್ಮತ್ ವಾಲಾ, ನಿಗಾಹೆ, ಚಾಲ್‌ಬಾಝ್, ಲಮ್ಹೆ , ಮಿಸ್ಟರ್ ಇಂಡಿಯಾ ಮುಂತಾದ ಚಿತ್ರಗಳು ಶ್ರೀದೇವಿಗೆ ಬಾಲಿವುಡ್‌ನ “ಲೇಡಿ ಸೂಪರ್ ಸ್ಟಾರ್’ ಆಗಿ ರೂಪಿಸಿದವು. ಅವರ ಹೆಸರಿನಿಂದಲೇ ಚಿತ್ರ ಓಡುತ್ತಿದ್ದವು. 80, 90ರ ದಶಕದಲ್ಲಿ ಹಿಂದಿ ಚಿತ್ರರಂಗದ ಸ್ಟಾರ್‌ಗಳಾಗಿದ್ದ ಜೀತೇಂದ್ರ, ಅಮಿತಾಭ್ ಬಚ್ಚನ್, ಧರ್ಮೇಂದ್ರ ಮುಂತಾದ ಕಲಾವಿದರ ಚಿತ್ರಗಳಿಗೆ ಪೈಪೋಟಿ ನೀಡುವಂತಾದವು ಶ್ರೀದೇವಿ ಅಭಿನಯದ ಚಿತ್ರಗಳು.
ಪುತ್ರಿ ಜಾಹ್ನವಿಗೆ ಅಮ್ಮನ ಕೊನೇ ಸಲಹೆಯಿದು: ಬಾಲಿವುಡ್‌ನ ಮೋಹಕ ನಟಿ ಶ್ರೀದೇವಿಯ ಅಕಾಲಿಕ ನಿಧನವು ಇಡೀ ಸಿನಿ ರಂಗ, ಜಗತ್ತಿನಾದ್ಯಂತದ ಅಭಿಮಾನಿಗಳಿಗೆ ತುಂಬಲಾರದ ನಷ್ಟ ಉಂಟುಮಾಡಿರುವುದು ಒಂದು ಕಡೆಯಾದರೆ, ಕೊನೆಯ ದಿನಗಳಲ್ಲಿ ಅಮ್ಮನ ಜತೆ ಇರಲಾ ಗಲಿಲ್ಲ ಎಂಬ ದುಃಖ ಪುತ್ರಿ ಜಾಹ್ನವಿಯನ್ನು ಆವರಿಸಿದೆ. ಅಷ್ಟೇ ಅಲ್ಲ, ಈಗಷ್ಟೇ ಬಾಲಿವುಡ್ ಪ್ರವೇಶಿ ಸಿರುವ ಜಾಹ್ನವಿಯ ಚೊಚ್ಚಲ ಚಿತ್ರ “ಧಡಕ್’ ಬಿಡುಗಡೆಯಾಗುವುದಕ್ಕೆ ಇನ್ನು 5 ತಿಂಗಳಷ್ಟೇ ಬಾಕಿಯಿತ್ತು.
ಪತಿ ಬೋನಿ ಕಪೂರ್ ಹಾಗೂ ಪುತ್ರಿ ಕಪೂರ್ ಜತೆ ಶ್ರೀದೇವಿ ಅವರು ದುಬೈಗೆ ಹೊರಟಾಗ, ಮಗಳು ಜಾಹ್ನವಿ ಚಿತ್ರೀಕರಣವಿದ್ದ ಕಾರಣ ಮುಂಬೈನಲ್ಲೇ ಉಳಿದಿದ್ದರು. ಹೀಗಾಗಿ, ಕೊನೆಯ ಕ್ಷಣದಲ್ಲಿ ಅಮ್ಮನ ಜತೆ ಕಳೆಯುವ ಅವಕಾ ಶವನ್ನು ಜಾಹ್ನವಿ ಕಳೆದು ಕೊಂಡರು. ಆದರೆ, ಇಹಲೋಕ ತ್ಯಜಿಸುವ ಮುನ್ನ ಶ್ರೀದೇವಿ ಅವರು ತಮ್ಮ ಮಗಳಿಗೆ ಸಲಹೆ ನೀಡಲು ಮರೆತಿಲ್ಲ.
ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಮಗಳಿಗೊಂದು ಸಲಹೆ ರೂಪದ ಸಂದೇಶ ರವಾನಿಸಿದ್ದ ಶ್ರೀದೇವಿ, “ಬಾಲಿವುಡ್‌ಗೆ ಎಂಟ್ರಿ ಕೊಡಲು ನಿರ್ಧರಿಸಿದ ಬಳಿಕ ನೀನು ಎಲ್ಲವನ್ನೂ ಎದುರಿಸಬೇಕು, ಎಲ್ಲ ಒತ್ತಡಗಳನ್ನೂ ನಿಭಾಯಿಸಬೇಕಾಗುತ್ತದೆ. ನೀನು ಅದಕ್ಕೆ ಸಿದ್ಧವಾಗಿರಬೇಕು. ನನಗೆ ಒಮ್ಮೊಮ್ಮೆ ಭಯ ಶುರುವಾಗುತ್ತದೆ. ಆದರೆ, ನಿನ್ನ ಗುರಿ ಹಾಗೂ ಸಂತೋಷ ನನಗೆ ಮುಖ್ಯ. ನನ್ನ ಅಮ್ಮ ನನಗೆ ಹೇಗೆ ಬೆಂಬಲ ಕೊಟ್ಟರೋ, ಅಂತೆಯೇ ನಾನೂ ಯಾವತ್ತೂ ನಿನ್ನ ಬೆನ್ನಿಗೆ ನಿಲ್ಲುತ್ತೇನೆ. ನಾನು ಹೇಳುವುದಿಷ್ಟೆ- ಸರಿಯಾದದ್ದನ್ನು ಮಾಡು. ಶೇ.100ರಷ್ಟು ಪರಿಶ್ರಮವು ಯಾವತ್ತೂ ಒಳ್ಳೆಯ ಫಲವನ್ನೇ ನೀಡುತ್ತದೆ,’
ಶ್ರೀದೇವಿ, ವಿಷ್ಣು ಚಿತ್ರ ಮಾಡಬೇಕಿತ್ತು: ದ್ವಾರಕೀಶ್: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ನಾನು ಕನ್ನಡದಲ್ಲಿ ವಿಷ್ಣುವರ್ಧನ್ ಮತ್ತು ಶ್ರೀದೇವಿ ಅವರ ಅಭಿನಯದ ಚಿತ್ರವೊಂದನ್ನು ನಿರ್ದೇಶನ ಮಾಡಬೇಕಿತ್ತು. ಅವರಿಬ್ಬರಿಗೊಂದು ಕಥೆಯನ್ನೂ ಹೆಣೆದಿದ್ದೆ. ಆದರೆ, ಅದು ಸಾಧ್ಯವಾಗಲೇ ಇಲ್ಲ. ನಾನು “ಆಪ್ತಮಿತ್ರ’ ಬಳಿಕ ವಿಷ್ಣುವರ್ಧನ್ ಮತ್ತು ಶ್ರೀದೇವಿ ಅವರಿಗೆ ಸಿನಿಮಾವೊಂದನ್ನು ನಿರ್ದೇಶಿಸಬೇಕು ಅಂದುಕೊಂಡಿದ್ದೆ. ಅವರಿಗಾಗಿ ನಾನು “ಆಲದ ಮರ’ ಎಂಬ ಕಥೆಯನ್ನೂ ಮಾಡಿಟ್ಟುಕೊಂಡಿದ್ದೆ.
ಆದರೆ, ವಿಷ್ಣು ನಮ್ಮನ್ನು ಬಿಟ್ಟು ಹೋದ. ಆ “ಆಲದ ಮರ’ ಕಥೆ ಅಲ್ಲಿಗೇ ನಿಂತು ಹೋಯ್ತು… ಹೀಗೆಂದು ಹೇಳಿ ದ ವರು ಹಿರಿಯ ನಿರ್ಮಾ ಪಕ ಮತ್ತು ನಿರ್ದೇ ಶಕ ದ್ವಾರ ಕೀಶ್. ಶ್ರೀದೇವಿ ಸಾವಿನ ಬಗ್ಗೆ ಮಾತ ನಾ ಡಿದ ಅವ ರು, ಆಕೆ ನನ್ನ ಕುಟುಂಬದ ಸದಸ್ಯೆ ಇದ್ದಂತೆ. ಅಷ್ಟರಮಟ್ಟಿಗೆ ನಮ್ಮ ಕುಟುಂಬದ ಜತೆ ಬಾಂಧವ್ಯವಿತ್ತು. ಕನ್ನಡದಲ್ಲಿ ನಾನು “ನೀ ಬರೆದ ಕಾದಂಬರಿ’ ಚಿತ್ರ ನಿರ್ದೇಶಿಸಿ, ಗೆಲುವು ಕಂಡಾಗ, ಸ್ವತಃ ರಜನಿಕಾಂತ್ ಅವರು ತಮಿಳಿನಲ್ಲಿ ರಿಮೇಕ್ ಮಾಡಿ ಎಂದು ಒತ್ತಾಯಿಸಿದ್ದರು.
ಅವರ ಮಾತಿನಂತೆ ನಾನೇ ತಮಿಳಿನಲ್ಲಿ “ನಾನ್ ಅದಿಮೈ ಇಳೈ’ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸಿದ್ದೆ. ಆ ಚಿತ್ರದಲ್ಲಿ ಶ್ರೀದೇವಿ ನಾಯಕಿಯಾಗಿದ್ದರು. ನಾನು ಕಂಡ ಅದ್ಭುತ ನಟಿಯರಲ್ಲಿ ಶ್ರೀದೇವಿ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಶ್ರೀದೇವಿಗೆ ಎಂಥದ್ದೇ ಪಾತ್ರ ಕೊಟ್ಟರೂ, ನಿಭಾಯಿಸುವ ಜಾಣ್ಮೆ ಇತ್ತು. ನಾನು 1965 ರಲ್ಲಿ “ಮಮತೆಯ ಬಂಧನ’ ಚಿತ್ರ ಮಾಡಿದಾಗ, ಶ್ರೀದೇವಿ ಅವರ ತಾಯಿ, ಆ ಚಿತ್ರದಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ದುಡಿದಿದ್ದರು.
ಶ್ರೀದೇವಿ ಅಷ್ಟು ಎತ್ತರಕ್ಕೆ ಬೆಳೆದಿದ್ದರೂ, ನಮ್ಮ ಸಂಪರ್ಕ ಇಟ್ಟುಕೊಂಡಿದ್ದರು. ಇತ್ತೀಚೆಗೆ ಒಂದು ಪಾರ್ಟಿಗೆ ಹೋಗಿದ್ದಾಗಲೂ ಭೇಟಿ ಮಾಡಿ, ಹಳೆಯ ನೆನಪುಗಳನ್ನೆಲ್ಲಾ ಮೆಲುಕು ಹಾಕಿದ್ದೆವು. ಅವಕಾಶ ಸಿಕ್ಕರೆ, ಒಂದು ಸಿನಿಮಾ ಮಾಡೋಣ ಅಂತಾನೂ ಮಾತಾಡಿಕೊಂಡಿದ್ದೆವು. ಆದರೆ, ಅದು ಸಾಧ್ಯವೇ ಆಗಲಿಲ್ಲ. ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿಯಾದರೂ, ಶ್ರೀದೇವಿ ಎಂದೂ ಅಹಂ ತೋರಲಿಲ್ಲ ಎಂದರು.
ಗಾಯನದಲ್ಲೂ ದಾಖಲೆ: ನಟನೆಯಲ್ಲಿ ಸೈ ಎನಿಸಿಕೊಂಡಿದ್ದ ಶ್ರೀದೇವಿ, ತಮ್ಮದೇ ಒಂದು ಚಿತ್ರದಲ್ಲಿ ಹಾಡೊಂದನ್ನೂ ಹಾಡಿ ದಾಖಲೆ ನಿರ್ಮಿಸಿದ್ದಾರೆ. ಚಾಂದಿನಿ ಚಿತ್ರದ ಟೈಟಲ್ ಸಾಂಗ್‌ನಲ್ಲಿ, ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ತಾವೇ ಹಾಡು ಹಾಡಿದ್ದರು. ಹಿನ್ನೆಲೆ ಗಾಯನದ ಪರಂಪರೆ ಆರಂಭವಾದ ನಂತರ, ನಾಯಕರು ತಮ್ಮ ಪಾತ್ರಗಳಿಗೆ ಹಾಡು ಹಾಡಿದ್ದಾರೆ. ಆದರೆ, ನಾಯಕಿಯರಿಗೆ ಇಂಥ ಅವಕಾಶ ಸಿಕ್ಕಿರಲಿಲ್ಲ.
ಉತ್ತುಂಗದಲ್ಲಿದ್ದಾಗಲೇ ಮರೆ: ಸಾಮಾನ್ಯವಾಗಿ, ನಾಯಕಿಯರು ತಮ್ಮ ಡಿಮ್ಯಾಂಡ್ ಕಡಿಮೆಯಾದ ನಂತರ ಮದುವೆ ಮತ್ತಿತರ ವಿಚಾರಗಳಿಗೆ ಗಮನ ಕೊಡುತ್ತಾರೆ. ಆದರೆ, ಸೂಪರ್ ಸ್ಟಾರ್ ಆಗಿದ್ದಾಗಲೇ ಮದುವೆಯಾಗಿ ಚಿತ್ರರಂಗದಿಂದ ಮರೆಯಾದ ಕೆಲವೇ ಕೆಲವು ನಟಿಯರಲ್ಲಿ ಶ್ರೀದೇವಿ ಕೂಡಾ ಒಬ್ಬರು. ನಿರ್ಮಾಪಕ ಬೋನಿ ಕಪೂರ್ ಅವರನ್ನು ಮದುವೆಯಾದಾಗ ಅವರಿನ್ನೂ ಬೇಡಿಕೆಯ ನಟಿಯಾಗಿದ್ದರು.
ಅಪ್ಪ, ಮಗನಿಗೂ ನಾಯಕಿ: ಒಂದೇ ಕುಟುಂಬದ ಎರಡು ತಲೆಮಾರುಗಳ ಹೀರೋಗಳಿಗೆ ನಾಯಕಿಯಾದ ಹೆಗ್ಗಳಿಕೆ ಶ್ರೀದೇವಿಯದ್ದು. ತೆಲುಗಿನ ಅಕ್ಕಿನೇನಿ ನಾಗೇಶ್ವರ್ ರಾವ್ ಜತೆ, “ಮುದ್ದುಲ ಮೊಗುಡು’ ಸೇರಿ 5 ಚಿತ್ರಗಳಲ್ಲಿ ನಾಯಕಿಯಾಗಿದ್ದ ಅವರು, ನಾಗೇಶ್ವರ ರಾವ್ ಪುತ್ರ ಅಕ್ಕಿನೇನಿ ನಾಗಾರ್ಜುನ ಜತೆಗೆ, ಖುದಾ ಗವಾ, ಗೋವಿಂದಾ ಗೋವಿಂದಾ ಸೇರಿ 5 ಚಿತ್ರಗಳಲ್ಲಿ ನಾಯಕಿಯಾಗಿದ್ದರು.
4 ಪೀಳಿಗೆಗೆ ಹೀರೋಯಿನ್!: ತೆಲುಗಿನ ಲೆಜೆಂಡರಿ ನಟರಾದ ಎನ್‌ಟಿ ರಾಮರಾವ್, ನಾಗೇಶ್ವರ ರಾವ್ ನಂತರದ ಪೀಳಿಗೆಯ ಜಿತೇಂದ್ರ, ವಿನೋದ್ ಖನ್ನಾ, ಅಮಿತಾಭ್ ಬಚ್ಚನ್, ತೆಲುಗಿನ ಕೃಷ್ಣ . ಆನಂತರ, ರಜನಿಕಾಂತ್, ಕಮಲ್ ಹಾಸನ್, ರಿಷಿ ಕಪೂರ್, ಅನಿಲ್ ಕಪೂರ್, ತೆಲುಗಿನ ಚಿರಂಜೀವಿ. ತದನಂತರ ಅಕ್ಕಿನೇನಿ ನಾಗಾರ್ಜುನ, ವಿಕ್ಟರಿ ವೆಂಕಟೇಶ್ ಹಾಗೂ ಶಾರೂಖ್ ಖಾನ್ ಅವರಿಗೆ ನಾಯಕಿಯಾದವರು.
ಕೊನೆ ಚಿತ್ರ “ಝೀರೋ’: ಪಂಚಭಾಷೆಗಳಲ್ಲಿ ನಟಿಸಿ, ಮಿಂಚಿ ಮರೆಯಾಗಿರುವ ಅಭಿಜಾತ ಕಲಾವಿದೆ ಶ್ರೀದೇವಿ ಕೊನೆಯ ಬಾರಿಗೆ ಅಭಿನಯಿಸಿದ ಚಿತ್ರ “ಝೀರೋ’. ಆನಂದ್ ಎಲ್. ರೈ ಅವರ ಈ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ನಟ ಶಾರುಖ್‌ಖಾನ್, ನಟಿ ಕತ್ರಿನಾ ಕೈಫ್ ಮತ್ತು ಅನುಷ್ಕಾ ಶರ್ಮ ಅಭಿನಯಿಸಿರುವ ಈ ಚಿತ್ರದಲ್ಲಿ ಶ್ರೀದೇವಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಶ್ರೀದೇವಿ ಅವರ ಪಾತ್ರದ ಭಾಗವನ್ನು 2017ರ ಅಕ್ಟೋಬರ್‌ನಲ್ಲೇ ಚಿತ್ರೀಕರಿಸಲಾಗಿದೆ. ಪಾರ್ಟಿಯೊಂದರ ಸನ್ನಿವೇಶದಲ್ಲಿ ಅಲಿಯಾ ಭಟ್ ಮತ್ತು ಕರಿಷ್ಮಾ ಕಪೂರ್ ಅವರೊಂದಿಗೆ ಶ್ರೀದೇವಿ ಕಾಣಿಸಿಕೊಂಡಿರುವ ಬಗೆಗಿನ ಪೋಸ್ಟ್ ಅನ್ನು ನಟ ಶಾರುಖ್ ಕಳೆದ ವರ್ಷ ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದರು.
ಚರ್ಚೆಗೆ ಗ್ರಾಸವಾದ ಬಿಗ್‌ಬಿ ಟ್ವೀಟ್: ಭಾನುವಾರ ಬೆಳಕು ಹರಿಯುವ ಹೊತ್ತಿಗೆ ಶ್ರೀದೇವಿ ನಿಧನದ ಸುದ್ದಿ ಹೊರಬೀಳುವ ಕೆಲವೇ ಗಂಟೆಗಳ ಮುನ್ನ ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಅವರು ಮಾಡಿದ ಟ್ವೀಟ್‌ವೊಂದು ಎಲ್ಲರ ಅಚ್ಚರಿಗೆ ಕಾರಣವಾಯಿತು. ಬೆಳ್ಳಂಬೆಳಗ್ಗೆ ಟ್ವೀಟ್ ಮಾಡಿದ್ದ ಬಿಗ್ ಬಿ, “ಏಕೆಂದು ತಿಳಿಯುತ್ತಿಲ್ಲ, ಒಂದು ವಿಚಿತ್ರವಾದ ಭಯ ನನ್ನನ್ನು ಆವರಿಸುತ್ತಿದೆ” ಎಂದಿದ್ದರು.
ಈ ಟ್ವೀಟ್ ಬಗ್ಗೆ ನಂತರದಲ್ಲಿ ಬಹಳಷ್ಟು ಚರ್ಚೆ ನಡೆಯಿತಲ್ಲದೆ, ಅಮಿತಾಭ್ ಅವರಿಗೆ ನಟಿಯ ನಿಧನದ ಕುರಿತು ಮುನ್ಸೂಚನೆ ದೊರೆತಿತ್ತೇ, ಬಿಗ್ ಬಿಗೆ ವಿಶೇಷವಾದ “ಸಿಕ್ಸ್ತ್ ಸೆನ್ಸ್’ ಇದೆಯೇ ಎಂಬ ಬಗ್ಗೆ ಅನುಮಾನವೂ ವ್ಯಕ್ತವಾಯಿತು. 80ರ ದಶಕದಲ್ಲಿ ಶ್ರೀದೇವಿ ಅವರನ್ನು “ಮಹಿಳಾ ಅಮಿತಾಭ್ ಬಚ್ಚನ್’ ಎಂದು ಕರೆಯುತ್ತಿದ್ದುದನ್ನೂ ಕೆಲವರು ಸ್ಮರಿಸಿಕೊಂಡರು.
ಕಾಂಗ್ರೆಸ್ ಟ್ವೀಟ್ ವಿರುದ್ಧ ಆಕ್ರೋಶ: ನಟಿ ಶ್ರೀದೇವಿ ನಿಧನದ ನಂತರ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸಂತಾಪ ಸೂಚಿಸಿ ಹಾಕಲಾದ ಟ್ವೀಟ್‌ವೊಂದು ಸಾಮಾಜಿಕ ಜಾಲತಾಣಿಗರ ಆಕ್ರೋಶಕ್ಕೆ ಕಾರಣವಾಯಿತು. ನಿಧನ ಸುದ್ದಿಯ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಕಾಂಗ್ರೆಸ್, “ಶ್ರೀದೇವಿ ಅವರ ಅಗಲಿಕೆ ಬಹಳ ನೋವುಂಟುಮಾಡಿದೆ. ಅವರೊಬ್ಬ ಅದ್ಭುತ ನಟಿ.
ಅವರ ಪ್ರೀತಿಪಾತ್ರರಿಗೆ ಸಾಂತ್ವನ ಹೇಳಬಯಸುತ್ತೇವೆ. ಶ್ರೀದೇವಿ ಅವರಿಗೆ 2013ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದು ಯುಪಿಎ ಸರ್ಕಾರ’ ಎಂದು ಬರೆದಿತ್ತು. ಈ ಟ್ವೀಟ್ ಅಪ್‌ಲೋಡ್ ಆಗುತ್ತಲೇ, ನಟಿಯ ಸಾವಿನಲ್ಲೂ ರಾಜಕೀಯವನ್ನು ಎಳೆದುತಂದಿದ್ದಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವೀಟ್‌ನ ಕೊನೆಯ ಸಾಲಿಗೆ ಆಕ್ಷೇಪ ವ್ಯಕ್ತಪಡಿಸಿ ಹಲವರು ಹರಿಹಾಯ್ದ ಬಳಿಕ, ಎಚ್ಚೆತ್ತುಕೊಂಡ ಕಾಂಗ್ರೆಸ್ ಆ ಟ್ವೀಟ್ ಅನ್ನು ಡಿಲೀಟ್ ಮಾಡಿದೆ.
ಪ್ರಮುಖ ಪ್ರಶಸ್ತಿಗಳು
-ನಾಗರಿಕ ಪ್ರಶಸ್ತಿ
-2013- ಪದ್ಮಶ್ರೀ
-ತಮಿಳುನಾಡಿನ ರಾಜ್ಯ ಸರ್ಕಾರದ ಶ್ರೇಷ್ಠ ನಟಿ ಪ್ರಶಸ್ತಿ
-1981- ಮೂಂಡ್ರಮ್ ಪಿರೈ
-ಫಿಲ್ಮ್ಫೇರ್
-ಶ್ರೇಷ್ಠ ನಟಿ ಪ್ರಶಸ್ತಿ – 5
-1977 16 ವಯತ್ತಿನಿಲೆ (ತಮಿಳು)
-1982 ಮೀಂಡು ಕೊನಿಕಾ (ತಮಿಳು)
-1991 ಕ್ಷಣ ಕ್ಷಣಂ (ತೆಲುಗು)
-1990 ಚಾಲ್ ಬಾಝ್ (ಹಿಂದಿ)
-1992 ಲಮ್ಹೆ (ಹಿಂದಿ)
ಟಾಪ್ 10 ಸಿನಿಮಾಗಳು
* ಹಿಮ್ಮತ್‌ವಾಲ
* ಮುಂಡ್ರಾಮ್ ಪಿರೈ
* ಚಾಲ್‌ಬಾಜ್
* ಮಿಸ್ಟರ್ ಇಂಡಿಯಾ
* ನಗಿನಾ
* ಲಮ್ಹೆ
* ಕುದಾಗವಾ
* ಜಾಗ್ ಉತಾ ಇನ್ ಸಾನ್
* ಮಾಮ್
* ಝೀರೋ
ಶ್ರೀದೇವಿ ನಿಧನ ದುಃಖ ತಂದಿದೆ. ಅವರ ಸದ್ಮಾ, ಲಮೆØ, ಇಂಗ್ಲೀಷ್ ವಿಂಗ್ಲಿಷ್ ಚಿತ್ರಗಳ ಅಭಿನಯ ಇತರ ನಟಿಯರಿಗೆ ಸ್ಫೂರ್ತಿದಾಯಕ.
-ರಾಮನಾಥ್ ಕೋವಿಂದ್, ರಾಷ್ಟ್ರಪತಿ
ಶ್ರೀದೇವಿ ನಿಧನ ಬೇಸರ ತಂದಿತು. ಅಭಿನಯ ಚಾತುರ್ಯದಿಂದ ಹಲವಾರು ಪಾತ್ರಗಳನ್ನು ಚಿರಸ್ಮರಣೀಯವಾಗಿಸಿದವರು ಅವರು.
-ನರೇಂದ್ರ ಮೋದಿ, ಪ್ರಧಾನಿ
ಅವರು ಇಡೀ ಭಾರತೀಯ ಚಿತ್ರರಂಗದ ಕಣ್ಮಣಿಯಾಗಿದ್ದರು. ನಾನೂ ಅವರ ಅಭಿಮಾನಿ. ಅವರ ನಿಧನಕ್ಕೆ ನನ್ನ ಸಂತಾಪವಿದೆ.
-ಎಲ್.ಕೆ. ಅಡ್ವಾಣಿ, ಬಿಜೆಪಿ ಧುರೀಣ
ಶ್ರೀದೇವಿ ನಿಧನ ಆಘಾತ ತಂದಿದೆ. ಎಲ್ಲಾ ಪಾತ್ರಗಳಿಗೂ ಹೊಂದಿಕೊಳ್ಳುತ್ತಿದ್ದರು. ಅವರ ಕುಟುಂಬಕ್ಕೆ ನನ್ನ ಸಾಂತ್ವನ ಸಲ್ಲುತ್ತದೆ.
-ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
ಶ್ರೀದೇವಿ ಜನ್ಮಜಾತ ಕಲಾವಿದೆ. ಇತ್ತೀಚೆಗಷ್ಟೇ ಭೇಟಿಯಾಗಿದ್ದೆ. ಆಗ ಆತ್ಮೀಯವಾಗಿ ಅಪ್ಪಿದ್ದರು. ಆ ಆತ್ಮೀಯತೆಗೆ ನಾನು ಆಭಾರಿ.
-ಕಮಲ್ ಹಾಸನ್, ನಟ
ಆಕೆ ನನಗೆ 40 ವರ್ಷಗಳ ಸ್ನೇಹಿತೆ. ಇತ್ತೀಚೆಗೆ, ಚೆನ್ನೈಗೆ ಬಂದಿದ್ದಾಗ, ನಮ್ಮ ಕುಟುಂಬದೊಂದಿಗೆ ಊಟ ಸವಿದಿದ್ದರು.
-ರಜನೀಕಾಂತ್, ನಟ
ಶ್ರೀದೇವಿ ಅಕಾಲಿಕ ಮರಣ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಕಲೆಗಾಗಿ ತಮ್ಮ ಜೀವನ ಮುಡಿಪಾಗಿಟ್ಟವರು ಅವರು.
-ಚಿರಂಜೀವಿ, ನಟ
ಶ್ರೀದೇವಿ ಸಾವು ಖಾತ್ರಿಪಡಿಸಿಕೊಳ್ಳಲು ಅರ್ಧದಿನ ಬೇಕಾಯ್ತು. ಅಷ್ಟರ ಮಟ್ಟಿಗೆ ಆ ಸುದ್ದಿಯನ್ನು ನಂಬಲಾರದೇ ಹೋಗಿದ್ದೆ.
-ಅಕ್ಕಿನೇನಿ ನಾಗಾರ್ಜುನ, ನಟ
ಶ್ರೀದೇವಿಗೀಗ 54 ವರ್ಷ. 4 ವರ್ಷದಲ್ಲೇ ಬಣ್ಣ ಹಚ್ಚಿದ್ದ ಅವರು 50 ವರ್ಷಗಳವರೆಗೆ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ.
-ಎಸ್.ಎಸ್. ರಾಜಮೌಳಿ, ನಿರ್ದೇಶಕ
ಹಠಾತ್ತನೆ ನಿಂತ ಶ್ರೀದೇವಿ ಹೃದಯ, ಅವರನ್ನು ಕಿತ್ತುಕೊಂಡ ದೇವರು, ಸಾವಿನ ಸುದ್ದಿ ಓದಿದ ನನ್ನ ಜೀವನವನ್ನು° ದ್ವೇಷಿಸುತ್ತೇನೆ.
-ರಾಮ್ ಗೋಪಾಲ್ ವರ್ಮಾ, ನಿರ್ದೇಶಕ
ರಜನಿಕಾಂತ್ ಸೂಪರ್‌ಸ್ಟಾರ್, ಶ್ರೀದೇವಿ ಲೇಡಿ ಸೂಪರ್‌ಸ್ಟಾರ್ ಎನ್ನುತ್ತಿದ್ದೆ. ಅವರು ನಮ್ಮಿಂದ ದೂರವಾಗಿದ್ದು ನೋವಿನ ಸಂಗತಿ.
-ಭಗವಾನ್, ಹಿರಿಯ ನಿರ್ದೇಶಕ
ನನ್ನ ಕಣ್ಣಮುಂದೆ ಬೆಳೆದ ಹುಡುಗಿ ಶ್ರೀದೇವಿ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳೋದು ಕಷ್ಟವಾಗುತ್ತಿದೆ.
-ಬಿ.ಸರೋಜಾ ದೇವಿ, ಹಿರಿಯ ನಟಿ
ಸಾಕಷ್ಟು ತೂಕದ ಕಾಸ್ಟೂಮ್ಸ್ ಇದ್ದರೂ ಧರಿಸಿ, ಹಾಡಿಗೆ ಹೆಜ್ಜೆ ಹಾಕುತ್ತಿದ್ದರು. ಅನೇಕ ನಟಿಯರಿಗೆ ಸ್ಫೂರ್ತಿಯಾಗಿದ್ದರು.
-ಸಾ.ರಾ.ಗೋವಿಂದು, ಅಧ್ಯಕ್ಷರು, ಫಿಲ್ಮ್ ಚೇಂಬರ್
ಕಮಲ್ ಹಾಸನ್ ಹಾಗೂ ಶ್ರೀದೇವಿ ನಟನೆ ಯನ್ನು ನೋಡಿ ಖುಷಿಪಡುತ್ತಿದ್ದೆ. ದಕ್ಷಿಣ ಭಾರತದಿಂದ ಹೋಗಿ ನಂ.1 ನಟಿಯಾದವರು.
-ಶಿವರಾಜಕುಮಾರ್, ನಟ
“ಪುಲಿ’ ಚಿತ್ರದಲ್ಲಿ ಶ್ರೀದೇವಿಯವರ ಜೊತೆ ನಟಿಸುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಅದೃಷ್ಟ. ಅವರು ಸ್ಫೂರ್ತಿಯ ಚಿಲುಮೆ.
-ಸುದೀಪ್, ನಟ
-ಉದಯವಾಣಿ