
ದಾವೋಸ್: ಬಾಲಿವುಡ್ ನಟ ಶಾರುಖ್ ಖಾನ್ ಇಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಸಮಾರಂಭದಲ್ಲಿ ತಮ್ಮ ಇಬ್ಬರು ತಾಯಂದಿರಿಗೆ ಗೌರವ ಸೂಚಿಸುವ ಮೂಲಕ ಕುತೂಹಲಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ.
ಶಾರುಖ್ ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ವಿಶ್ವ ಆರ್ಥಿಕ ವೇದಿಕೆಯಲ್ಲಿ ಅವರಿಗೆ ಕ್ರಿಸ್ಟಲ್ ಅವಾರ್ಡ್ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ತಮ್ಮೆಲ್ಲಾ ಸಾಧನೆಗೆ ತಮ್ಮ ಇಬ್ಬರು ತಾಯಂದಿರೇ ಕಾರಣ ಎಂದು ತಿಳಿಸಿದರು.
ನಾನು ಯಾವಾಗಲೂ ನನಗೆ ಇಬ್ಬರು ತಾಯಂದಿರಿದ್ದಾರೆ ಎಂದು ಹೇಳುತ್ತೇನೆ. ದೆಹಲಿ ನನಗೆ ಜನ್ಮ ನೀಡಿದ ತಾಯಿಯಾದರೆ, ಮುಂಬೈ ನಾನು ಬೆಳೆಯಲು ಬೆನ್ನೆಲುಬಾಗಿ ನಿಂತ ತಾಯಿ ಎಂದು ಶಾರುಖ್ ಎರಡೂ ನಗರಗಳು ತಮ್ಮ ಬೆಳವಣಿಗೆಯಲ್ಲಿ ನೀಡಿದ ಕಾಣಿಕೆಯನ್ನು ನೆನೆದರು.
ಮುಂಬೈಗೆ ಆಗಮಿಸಿ ಯಾರಾದರೊಬ್ಬರು ಯಶಸ್ವಿಯ ಉತ್ತುಂಗಕ್ಕೆ ಏರಬಹುದು ಎಂಬುದಕ್ಕೆ ನಾನು ಜೀವಂತ ಉದಾಹರಣೆ. ನಾನು ಮುಂಬೈಗೆ ಆಗಮಿಸಿ ನನ್ನ ಕನಸುಗಳನ್ನು ನನಸು ಮಾಡಿಕೊಂಡೆ ಎಂದು ಶಾರುಖ್ ತಮ್ಮ ಸಿನಿ ಪಯಣವನ್ನು ಮೆಲುಕು ಹಾಕಿದರು.
ಡಿಜಿಟಲ್ ಪರಿಸರ
ಭಾರತ ಸರ್ಕಾರದ ಹೊಸ ನೀತಿಗಳು ದೇಶದಲ್ಲಿ ಡಿಜಿಟಲ್ ಪರಿಸರವನ್ನು ಸೃಷ್ಟಿಸುತ್ತವೆ. ಇದು ಯುವ ಭಾರತಕ್ಕೆ ಪೂರಕವಾಗಿರುತ್ತದೆ. ಇದರಿಂದಾಗಿ ನಮ್ಮ ದೇಶ ತಾಂತ್ರಿಕವಾಗಿ ಅಭಿವೃದ್ಧಿಯಾಗಿ ಲಕ್ಷಾಂತರ ಯುವಜನರು ಲಾಭ ಪಡೆಯಲಿದ್ದಾರೆ ಎಂದು ಶಾರುಖ್ ತಿಳಿಸಿದರು.
Comments are closed.