
ನಟ ನಿಖಿಲ್ಕುಮಾರ್ಗೆ ಇಂದು (ಜ.22) ಜನ್ಮದಿನದ ಸಂಭ್ರಮ. ಆದರೆ, ಪ್ರತಿವರ್ಷಕ್ಕಿಂತ ಈ ಬಾರಿ ಅವರ ಬರ್ತ್ಡೇ ಸಂಭ್ರಮ ಕೊಂಚ ಡಿಫರೆಂಟ್ ಆಗಿರಲಿದೆ. ಕಾರಣ, ಈ ವರ್ಷ ಅವರ ಎರಡು ಸಿನಿಮಾಗಳು ತೆರೆಗೆ ಬರಲಿವೆ. ನಿಖಿಲ್, ಅಭಿಮನ್ಯು ಪಾತ್ರ ಮಾಡಿರುವ ‘ಮುನಿರತ್ನ ಕುರುಕ್ಷೇತ್ರ’ ಚಿತ್ರ ಮಾರ್ಚ್ನಲ್ಲಿ ರಿಲೀಸ್ ಆಗಲಿದೆ. ಇನ್ನು, ‘ಸೀತಾರಾಮ ಕಲ್ಯಾಣ’ ಚಿತ್ರದ ಶೂಟಿಂಗ್ ಬಿರುಸಿನಿಂದ ನಡೆಯುತ್ತಿದ್ದು, 2018ರಲ್ಲೇ ಆ ಚಿತ್ರವೂ ರಿಲೀಸ್ ಆಗುವುದು ಖಚಿತ. ಇದರ ಜತೆಗೆ ಬರ್ತ್ಡೇ ಸಂಭ್ರಮವನ್ನು ಅಭಿಮಾನಿಗಳ ಜತೆ ಆಚರಿಸಲು ನಿಖಿಲ್ ಮುಂದಾಗಿದ್ದಾರೆ.
ಬಿಡದಿಯಲ್ಲಿರುವ ಅವರ ತೋಟದಲ್ಲಿ ಸುಮಾರು 20 ಸಾವಿರ ಜನ ಅಭಿಮಾನಿಗಳಿಗೆ ಬಾಳೆ ಎಲೆ ಊಟಕ್ಕೆ ವ್ಯವಸ್ಥೆ ಮಾಡಿದ್ದಾರಂತೆ. ‘ಈ ಸಲ ಜನ್ಮದಿನವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಲಾಗಿದೆ. ಅಭಿಮಾನಿಗಳ ಜತೆ ನಿಖಿಲ್ ಬೆರೆಯಲಿದ್ದಾರೆ. ಅಲ್ಲದೆ, ಕುಮಾರಸ್ವಾಮಿ ಅವರ ಹೆಸರನ್ನು ಹಚ್ಚೆ ಹಾಕಿಸಿಕೊಂಡಿರುವ ಸುಮಾರು 700ಕ್ಕೂ ಅಧಿಕ ಜನರನ್ನು ನೇರವಾಗಿ ಭೇಟಿಯಾಗಿ, ಅವರಿಗೆ ಸನ್ಮಾನ ಮಾಡಲಿದ್ದಾರೆ. ಕುಮಾರಸ್ವಾಮಿ ಅವರ ಮೇಲೆ ಇಟ್ಟಿರುವ ಈ ಅಭಿಮಾನಕ್ಕೆ ಕೃತಜ್ಞತೆ ಹೇಳಲಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ ‘ಸೀತಾರಾಮ ಕಲ್ಯಾಣ’ ಚಿತ್ರ ಕಾರ್ಯಕಾರಿ ನಿರ್ವಪಕ ಸುನೀಲ್ ಗೌಡ. ಇನ್ನು, ‘ಸೀತಾರಾಮ ಕಲ್ಯಾಣ’ದ ಚಿತ್ರೀಕರಣ ಜ.19ರಿಂದ ದೇವನಹಳ್ಳಿಯಲ್ಲಿ ನಡೆಯುತ್ತಿದೆ. ಬಿಡದಿಯಲ್ಲಿ ಪ್ಯಾಲೇಸ್ ಮಾದರಿಯ ಸೆಟ್ ಹಾಕಿ, ಅಲ್ಲಿಯೂ ಚಿತ್ರೀಕರಣ ಮಾಡುವ ಪ್ಲಾ್ಯನ್ ಚಿತ್ರತಂಡದ್ದು. ‘ರಾಜಕುಮಾರ’ ನಂತರ ಕಾಲಿವುಡ್ ನಟ ಶರತ್ಕುಮಾರ್ ‘ಸೀತಾರಾಮ ಕಲ್ಯಾಣ’ದ ಮೂಲಕ ಮತ್ತೊಮ್ಮೆ ಕನ್ನಡಕ್ಕೆ ಎಂಟ್ರಿಯಾಗಿದ್ದಾರೆ. ಚಿತ್ರದಲ್ಲಿ ನಿಖಿಲ್ ತಂದೆ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ತೆಲುಗಿನ ಖಳ ನಟ ಆದಿತ್ಯ ಮೆನನ್ ಕೂಡ ಚಿತ್ರತಂಡ ಸೇರಿಕೊಂಡಿದ್ದಾರೆ. ಇನ್ನುಳಿದಂತೆ, ಸಾಧು ಕೋಕಿಲ, ಚಿಕ್ಕಣ್ಣ, ಸುಧಾರಾಣಿ ಮುಂತಾದವರು ‘ಸೀತಾರಾಮ ಕಲ್ಯಾಣ’ದಲ್ಲಿದ್ದಾರೆ. ನಟಿ ಪ್ರಿಯಾಂಕಾ ಉಪೇಂದ್ರ ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಅವರೊಂದಿಗೆ ಮಾತುಕತೆ ನಡೆಯುತ್ತಿದ್ದು, ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ‘ಬಹಳಷ್ಟು ದೊಡ್ಡ ದೊಡ್ಡ ಕಲಾವಿದರು ನಮ್ಮ ಚಿತ್ರದಲ್ಲಿದ್ದಾರೆ. ‘ಚಂದ್ರಚಕೋರಿ’, ‘ಸೂರ್ಯವಂಶ’ ಮಾದರಿಯಲ್ಲಿ ಪಕ್ಕಾ ಕೌಟುಂಬಿಕ ಕಥೆಯುಳ್ಳ ಸಿನಿಮಾ ಇದಾಗಿರಲಿದೆ. ಜತೆಗೆ ಭರ್ಜರಿ ಆಕ್ಷನ್ ಕೂಡ ಚಿತ್ರ ದಲ್ಲಿರಲಿದೆ. ಅದ್ದೂರಿಯಾಗಿಯೇ ಈ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ’ ಎಂದು ಮಾಹಿತಿ ಒದಗಿಸುತ್ತಾರೆ ಸುನೀಲ್.
Comments are closed.