ಮನೋರಂಜನೆ

“ಅತಿರಥ’ ಚಿತ್ರ ಪ್ರದರ್ಶನಕ್ಕೆ ಹಿಂದೂ ಸಂಘಟನೆಗಳ ಅಡ್ಡಿ

Pinterest LinkedIn Tumblr


“ಆ ದಿನಗಳು’ ಚೇತನ್‌ ನಟಿಸಿರುವ “ಅತಿರಥ’ ಚಿತ್ರಕ್ಕೆ ಈಗ ಧರ್ಮ ವಿವಾದ ಅಂಟಿಕೊಂಡಿದೆ. ಅದು ಹಿಂದೂ ಧರ್ಮ. ಹೌದು, ಚೇತನ್‌ ನಟಿಸಿರುವ “ಅತಿರಥ’ ಚಿತ್ರ ಶುಕ್ರವಾರ ತೆರೆಕಂಡಿದೆ. ಈಗ ಆ ಚಿತ್ರವನ್ನು ಪ್ರದರ್ಶನ ಮಾಡಬಾರದೆಂದು ಕೆಲ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಅದಕ್ಕೆ ಕಾರಣ ಚೇತನ್‌ ಹಿಂದೂ ವಿರೋಧಿ ಎಂಬುದು ಸಂಘಟನೆಗಳು ಕೊಡುತ್ತಿರುವ ಕಾರಣ.

ನಟ ಚೇತನ್‌ ಹಿಂದೂ ವಿರೋಧಿಯಾಗಿದ್ದು, ಹಿಂದೂ ಧರ್ಮದ, ಸ್ವಾಮೀಜಿಗಳ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ. ಹಾಗಾಗಿ, ಅವರ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕೊಡಬಾರದು ಎಂದು ಕೆಲ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ತಮ್ಮ ಸಿನಿಮಾಕ್ಕೆ ಧರ್ಮ ತಳುಕು ಹಾಕಿಕೊಂಡು ಸಿನಿಮಾಕ್ಕೆ ಧಕ್ಕೆ ತರುವ ಹಾಗೂ ತಮ್ಮನ್ನು ಹಿಂದೂ ವಿರೋಧಿ ಎಂದು ಬಿಂಬಿಸುವ ಬಗ್ಗೆ ಚೇತನ್‌ ಮಾತನಾಡಿದ್ದಾರೆ.

“ನಾನು ಹಿಂದೂ ಧರ್ಮದ ವಿರೋಧಿಯಲ್ಲ. ಹಿಂದೂ ಧರ್ಮದ ಬಹುಮುಖ್ಯತೆಯ ಬಗ್ಗೆ ನನಗೆ ಅಪಾರ ಗೌರವವಿದೆ. ಶಾಲಾ ದಿನಗಳಲ್ಲಿ ರಾಮಾಯಣ, ಮಹಾಭಾರತ ಪಾತ್ರಗಳ ಬಗ್ಗೆ ತಿಳಿದುಕೊಂಡು ಅದನ್ನು ಏಕಪಾತ್ರ ಅಭಿನಯ ಮಾಡಿ ತೋರಿಸಿದ್ದೇವೆ. ಹಿಂದೂ ಧರ್ಮದ ವೈವಿಧ್ಯತೆ, ಸಾಮರಸ್ಯ ನನಗೆ ಇಷ್ಟ. ಆದರೆ, ಹಿಂದುತ್ವದ ಹೆಸರಿನಲ್ಲಿ ನಡೆಸುತ್ತಿರುವ ಹಿಂಸೆಯ, ದಬ್ಟಾಳಿಕೆಯ ವಿರೋಧಿ ನಾನು.

ಅದು ಕೇವಲ ಹಿಂದೂ ಧರ್ಮವಲ್ಲ, ಇಸ್ಲಾಂ ಆಗಲೀ ಯಾವುದೇ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಯನ್ನು ನಾನು ವಿರೋಧಿಸುತ್ತೇನೆ. ಇದು ಸಂವಿಧಾನ ವಿರೋಧಿ ಚಟುವಟಿಕೆ. ಹಿಂಸೆ ಭಾರತದ ಕಲ್ಪನೆಗೆ ವಿರುದ್ಧವಾದುದು. ನಾನು ಹಿಂಸೆಯನ್ನು ವಿರೋಧಿಸುತ್ತಲೇ ಬಂದವನು. ಸಮಾನತೆ, ಸೌಹಾರ್ದತೆಯ ಕನಸು ಕಂಡವನು. ಇತ್ತೀಚೆಗೆ ಚಾಮರಾಜ ನಗರದಲ್ಲಿ ಕೆಲ ಸಂಘಟನೆ ಸಿನಿಮಾದ ಪ್ರದರ್ಶನಕ್ಕೆ ಅಡ್ಡಿಪಡಿಸಿದೆ.

ಹಿಂದುತ್ವದ ಹೆಸರಿನಲ್ಲಿ ಗೂಂಡಾಗಿರಿ ಮಾಡಲು ಹೊರಟಿದೆ. ನನ್ನ ವಿಚಾರಧಾರೆಗಳ ಬಗ್ಗೆ ಸಮಸ್ಯೆ ಇದ್ದರೆ ಆ ಬಗ್ಗೆ ಚರ್ಚೆ ಮಾಡುವ ಅವಕಾಶ ಈ ಸಂವಿಧಾನದಲ್ಲಿ ಇದೆ. ಅದು ಬಿಟ್ಟು ಓಡ್ತಾ ಇರೋ ಸಿನಿಮಾಕ್ಕೆ ಅಡ್ಡಿಪಡಿಸಿ ನಿರ್ಮಾಪಕರಿಗೆ ತೊಂದರೆ ಕೊಡೋದು ಸರಿಯಲ್ಲ. ಇದನ್ನು ನಾನು ಖಂಡಿಸುತ್ತೇನೆ. ಆ ಸಂಘಟನೆಗೆ ಸಂಬಂಧಿಸಿದ ಪಕ್ಷ ಕೂಡಾ ಆ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಮುಂದೇನು ಮಾಡಬೇಕೆಂದು ಚರ್ಚಿಸುತ್ತೇವೆ’ ಎನ್ನುತ್ತಾರೆ ಚೇತನ್‌.

-ಉದಯವಾಣಿ

Comments are closed.