ಸಾಮಾನ್ಯವಾಗಿ ಹೀರೋಯಿನ್ ಆಗಿ ಮಿಂಚಿದವರು ಮದುವೆಯಾಗಿ ಬ್ರೇಕ್ ತಗೊಂಡು ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೆ ಅವರಿಗೆ ಸಿಗೋದು ಅತ್ತಿಗೆ, ತಾಯಿ ಪಾತ್ರಗಳು. ಬಹುತೇಕ ನಾಯಕಿಯರು ಕೂಡ ಆ ಪಾತ್ರಗಳಿಗೆ ಮಾನಸಿಕವಾಗಿ ಸಿದ್ಧರಾಗಿದ್ದುಕೊಂಡೇ ಚಿತ್ರರಂಗಕ್ಕೆ ಬರುತ್ತಾರೆ. ಈ ವಿಷಯದಲ್ಲಿ ಇಶಾ ಕೊಪ್ಪಿಕರ್ ಮಾತ್ರ ಅದೃಷ್ಟವಂತೆ ಎನ್ನಬೇಕು. ಏಕೆಂದರೆ, ಇಶಾ ಕೊಪ್ಪಿಕರ್‌ಗೆ ಇವತ್ತಿಗೂ ಒಳ್ಳೆಯ ಪಾತ್ರಗಳು ಸಿಗುತ್ತಿವೆ. ಅದು ಅತ್ತಿಗೆ, ತಾಯಿ ಪಾತ್ರಗಳಿಂದ ಹೊರತಾದ ಪಾತ್ರಗಳು. ಅಷ್ಟಕ್ಕೂ ಯಾವ ಇಶಾ ಕೊಪ್ಪಿಕರ್ ಎಂದರೆ, ವಿಷ್ಣುವರ್ಧನ್ ಅವರ ಸೂರ್ಯ ವಂಶ, ರವಿಚಂದ್ರನ್ ಅವರ ಓ ನನ್ನ ನಲ್ಲೆ ಚಿತ್ರಗಳನ್ನು ತೋರಿಸಬೇಕು. ಆ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದ ಇಶಾ ಕೊಪ್ಪಿಕರ್, ಇವತ್ತಿಗೂ ಬಿಝಿಯಾಗಿದ್ದಾರೆ ಮತ್ತು ಅತ್ತಿಗೆ, ತಾಯಿ ಪಾತ್ರಗಳಿಂದ ಹೊರತಾಗಿದ್ದಾರೆ.
ಇಶಾ ಕೊಪ್ಪಿಕರ್ ವಿಷಯ ಈಗ ಯಾಕೆ ಎಂದು ಕೇಳಿದರೆ ಕವಚ ದ ಬಗ್ಗೆ. ಇದು ಶಿವರಾಜಕುಮಾರ್ ಅವರ ಹೊಸ ಚಿತ್ರ. ಮಲಯಾಳದಲ್ಲಿ ಸೂಪರ್ ಹಿಟ್ ಆಗಿರುವ ಒಪ್ಪಂ ಚಿತ್ರವನ್ನು ಕನ್ನಡಕ್ಕೆ ರೀಮೇಕ್ ಮಾಡುತ್ತಿದ್ದು, ಕವಚ ಎಂದು ಹೆಸರಿಡಲಾಗಿದೆ. ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಇಶಾ ಕೊಪ್ಪೀಕರ್ ನಟಿಸುತ್ತಿದ್ದಾರೆ. ಅದು ಚಿತ್ರದ ಪ್ರಮುಖ ಪಾತ್ರವಾದ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರ. ಈ ಮೂಲಕ ಗ್ಯಾಪ್‌ನ ನಂತರ ಬಂದ ಇಶಾಗೆ ಒಳ್ಳೆಯ ಪಾತ್ರವೇ ಸಿಕ್ಕಿದೆ. ಮದುವೆಯಾಗಿ ಹೋದ ನಂತರ ಇಶಾ ಮತ್ತೆ ಕನ್ನಡ ಚಿತ್ರದಲ್ಲಿ ನಟಿಸಿದ್ದು ಲೂಟಿ. ಈ ಚಿತ್ರದಲ್ಲಿ ಇಶಾ ನಟಿಸುತ್ತಿದ್ದಾರೆಂದು ಸುದ್ದಿಯಾಯಿತೇ ಹೊರತು, ಆ ನಂತರ ಏನಾಯಿತು ಎಂದು ಗೊತ್ತಾಗಲಿಲ್ಲ. ಇಲ್ಲಿವರೆಗೆ ಆ ಚಿತ್ರ ಬಿಡುಗಡೆಯಾಗಿಲ್ಲ. ಹೀಗಿರುವಾಗಲೇ ಇಶಾ, ಶಿವರಾಜಕುಮಾರ್ ಚಿತ್ರದಲ್ಲಿ ನಟಿಸಲು ಬಂದಿದ್ದಾರೆ. ಇಶಾ ಈ ಚಿತ್ರ ಒಪ್ಪಿಕೊಳ್ಳಲು ಕಾರಣ, ಪಾತ್ರವಂತೆ. “ಒಳ್ಳೆಯ ಪಾತ್ರ ಇಲ್ಲಿದೆ. ಜೊತೆಗೆ ಶಿವರಾಜಕುಮಾರ್ ಅವರ ಸಿನೆಮಾ. ಹಾಗಾಗಿ, ಒಪ್ಪಿಕೊಂಡೆ’ ಎನ್ನುವುದು ಇಶಾ ಮಾತು. ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಸತತ 20 ದಿನಗಳ ಕಾಲ ನಡೆಯಲಿದೆ. ಇಲ್ಲಿ ಇಶಾ ಕೂಡಾ ಭಾಗವಹಿಸಲಿದ್ದಾರೆ.
ತಮಿಳು, ತೆಲುಗು, ಮಲಯಾಳ ಚಿತ್ರಗಳಲ್ಲೂ ನಟಿಸಿರುವ ಇಶಾ ಅತಿ ಹೆಚ್ಚು ಸಿನೆಮಾಗಳನ್ನು ಮಾಡಿದ್ದು ಹಿಂದಿಯಲ್ಲಿ. ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತ, ಯಾವುದೇ ಒಂದು ಪಾತ್ರಕ್ಕೆ ಅಂಟಿಕೊಳ್ಳದೇ ಬಿಝಿಯಾಗುತ್ತ ಹೋಗುತ್ತಿರುವ ಇಶಾ ಮುಂದೆ ಯಾವ ಕನ್ನಡ ಸಿನೆಮಾ ಒಪ್ಪಿಕೊಳ್ಳುತ್ತಾರೋ ಕಾದು
ನೋಡಬೇಕು.
-ಉದಯವಾಣಿ