ಮನೋರಂಜನೆ

ಮದುವೆಯ ನಂತರ ಪ್ರಿಯಾಮಣಿ ಮೊದಲ ಸಿನಿಮಾ

Pinterest LinkedIn Tumblr


ಗಾಂಧಿನಗರಕ್ಕೆ ಎಂದಿನಂತೆ ಮತ್ತೂಂದು ಹೊಸಬರ ತಂಡದ ಆಗಮನವಾಗಿದೆ. ಹೊಸಬರೆಲ್ಲ ಸೇರಿ “ನನ್ನ ಪ್ರಕಾರ’ ಎಂಬ ಸಿನಿಮಾಗೆ ಕೈ ಹಾಕಿದ್ದಾರೆ. ಈ ಚಿತ್ರದ ಮೂಲಕ ವಿನಯ್‌ ಬಾಲಾಜಿ ನಿರ್ದೇಶಕರಾಗುತ್ತಿದ್ದಾರೆ. ವಿಶೇಷವೆಂದರೆ, ಮದುವೆಯ ನಂತರ ಪ್ರಿಯಾಮಣಿ ನಟಿಸುತ್ತಿರುವ ಮೊದಲ ಚಿತ್ರ ಇದು. ಪ್ರಿಯಾಮಣಿ ಅಲ್ಲದೆ, ಕಿಶೋರ್‌, ಮಯೂರಿ ಮತ್ತು “ಕಾಲ್‌ಕೇಜಿ ಪ್ರೀತಿ’ ಚಿತ್ರದ ನಾಯಕ ನಿಹಾನ್‌ ಇಲ್ಲಿ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನಿರಂಜನ್‌ ದೇಶಪಾಂಡೆ ಇಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ. ಇನ್ನು, ಜಿ.ವಿ.ಕೆ. ಕಂಬೈನ್ಸ್‌ ಮೂಲಕ “ನನ್ನ ಪ್ರಕಾರ’ ಸಿನಿಮಾ ತಯಾರಾಗುತ್ತಿದೆ. ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಇದೊಂದು ಕ್ರೈಮ್‌ ಥ್ರಿಲ್ಲರ್‌ ಕಥೆ ಎನ್ನುವ ನಿರ್ದೇಶಕ ವಿನಯ್‌ ಬಾಲಾಜಿ, ಕಥೆ-ಚಿತ್ರಕಥೆ ಜತೆಗೆ ಸಂಭಾಷಣೆಯನ್ನೂ ಬರೆದಿದ್ದಾರೆ. ಸಂಭಾಷಣೆಯಲ್ಲಿ ಚಂದನ್‌ ಸಾಥ್‌ ಕೊಟ್ಟಿದ್ದಾರೆ. ವಿನಯ್‌ಗೆ ಸಿನಿಮಾ ಹೊಸದಾಗಿದ್ದರೂ, ಚಿತ್ರರಂಗ ಹೊಸದಲ್ಲ.

ಈ ಹಿಂದೆ ಒಂದಷ್ಟು ಕಿರುಚಿತ್ರ ನಿರ್ದೇಶಿಸಿದ್ದಾರೆ. “ಕ್ಯಾಮೆರಾ’ ಹಾಗು “ಮನಿ’ ಎಂಬ ಶಾರ್ಟ್‌ಫಿಲ್ಮ್ ನಿರ್ದೇಶಿಸಿರುವ ವಿನಯ್‌, ಒಂದು ನಿಮಿಷದೊಳಗಿರುವ “ಮನಿ’ ಕಿರುಚಿತ್ರಕ್ಕೆ ಮುಂಬೈ ಚಿತ್ರೋತ್ಸವದಲ್ಲಿ ಪ್ರಶಸ್ತಿ ಸಿಕ್ಕಿದೆ. ಮಾತುಗಳಿಲ್ಲದೆ, ಒಂದು ನಿಮಿಷದಲ್ಲಿ ಕಥೆ ಹೇಳಬೇಕಿದ್ದರಿಂದ ಹೊಸ ಕಾನ್ಸೆಪ್ಟ್ನಲ್ಲಿ “ಮನಿ’ ಎಂಬ ಕಿರುಚಿತ್ರ ಮಾಡಿದ್ದರು ವಿನಯ್‌. ಅದಾದ ಬಳಿಕ ಇನ್ನೊಂದು ಕಿರುಚಿತ್ರ ಮಾಡಲು ಹೊರಟಾಗ, “ನನ್ನ ಪ್ರಕಾರ’ ಚಿತ್ರದ ಕಥೆ ಸಿಕ್ಕಿದೆ.

ಅದನ್ನು ಸಿನಿಮಾ ಮಾಡಬೇಕು ಅಂತ ನಿರ್ಧರಿಸಿದಾಗ, ನಿರ್ಮಾಪಕರಿಗಾಗಿ ಬರೋಬ್ಬರಿ ಮೂರು ವರ್ಷ ಅಲೆದಾಡಿದ್ದಾರೆ. ಕೊನೆಗೆ “ನನ್ನ ಪ್ರಕಾರ’ ಚಿತ್ರದ ಕುರಿತು ಒಂದು ತುಣುಕನ್ನು ಚಿತ್ರೀಕರಿಸಿಕೊಂಡು ಕೆಲವರಿಗೆ ತೋರಿಸಿದಾಗ, ಸಿನಿಮಾ ಮಾಡೋಕೆ ಐವರು ಮುಂದಾಗಿದ್ದಾರೆ. ಅವರೆಲ್ಲರೂ ಸೇರಿ ಈಗ ಜಿ.ವಿ.ಕೆ. ಬ್ಯಾನರ್‌ ಮೂಲಕ ಚಿತ್ರ ನಿರ್ಮಿಸುತ್ತಿದ್ದಾರೆ. ನಿರ್ದೇಶಕ ವಿನಯ್‌ ಬಾಲಾಜಿ ವಿಷ್ಯುಯಲ್‌ ಎಫೆಕ್ಟ್ಸ್ ಆರ್ಟಿಸ್ಟ್‌ ಕೂಡ ಹೌದು. ಮೂರು ವರ್ಷ ಆ ಬಗ್ಗೆ ತಿಳಿದು ಕೆಲಸ ಮಾಡಿದ್ದಾರೆ.

ಸಂಕಲನ ಬಗ್ಗೆಯೂ ತಿಳಿದುಕೊಂಡಿದ್ದಾರೆ. ಚಿತ್ರಕ್ಕೆ ಮನೋಹರ್‌ ಜೋಶಿ ಛಾಯಾಗ್ರಾಹಕರು. “ಹುಲಿರಾಯ’ ಚಿತ್ರಕ್ಕೆ ಸಂಗೀತ ನೀಡಿದ್ದ ಅರ್ಜುನ್‌ ರಾಮು ಇಲ್ಲಿ ನಾಲ್ಕು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಕಿರಣ್‌ ಕಾವೇರಪ್ಪ, ಜಯಂತ್‌ ಕಾಯ್ಕಿಣಿ ಇತರರು ಗೀತೆ ಬರೆಯಲಿದ್ದಾರೆ. ನವೆಂಬರ್‌ 6 ರಂದು ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ನೆರವೇರಲಿದೆ. ಬಹುತೇಕ ಬೆಂಗಳೂರಲ್ಲಿ ಚಿತ್ರೀಕರಣಗೊಳ್ಳುವ ಈ ಚಿತ್ರವನ್ನು ಮೂರು ಹಂತದಲ್ಲಿ ಚಿತ್ರೀಕರಿಸಲು ನಿರ್ಧರಿಸಿದ್ದಾರೆ ನಿರ್ದೇಶಕರು.

-ಉದಯವಾಣಿ

Comments are closed.