ಮುಂಬೈ: ರಾಷ್ಟ್ರಗೀತೆ ಬಗ್ಗೆ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೆ ಈಗಾಗಲೆ ನಟರಾದ ಕಮಲ್ ಹಾಸನ್, ಅರವಿಂದ ಸ್ವಾಮಿ, ರಜನಿಕಾಂತ್, ಸನ್ನಿ ಲಿಯೋನ್ ಸೇರಿದಂತೆ ಇನ್ನಿತರರು ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಬಾಲಿವುಡ್ ಖ್ಯಾತ ನಾಯಕ ಸೋನು ನಿಗಮ್ ಹೊಸ ಸೇರ್ಪಡೆ ಎನ್ನಬಹುದು.
ಪಾಕಿಸ್ತಾನದಲ್ಲಿ ರಾಷ್ಟ್ರಗೀತೆ ಮೊಳಗುತ್ತಿದ್ದಾಗ ಪಾಕಿಸ್ತಾನಿಯರು ಗೌರವಪೂರ್ವಕವಾಗಿ ಎದ್ದುನಿಲ್ಲುತ್ತಾರೆ. ಆ ಸಮಯದಲ್ಲಿ ನಾನಿದ್ದರೂ ಅದೇ ರೀತಿ ಮಾಡುತ್ತೇನೆ’ ಎಂದಿದ್ದಾರೆ. ಈ ಬಗ್ಗೆ ಸೋನು ಮಾಧ್ಯಮಗಳ ಜತೆ ಮಾತನಾಡುತ್ತಾ, ‘ಪಾಕಿಸ್ತಾನದ ರಾಷ್ಟ್ರಗೀತೆ ಪ್ರಸಾರವಾಗುವಾಗ ನಾನು ಸಹ ಎದ್ದುನಿಲ್ಲುತ್ತೇನೆ. ಕೇವಲ ಸಿನಿಮಾ ಥಿಯೇಟರ್‌ನಲ್ಲೇ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಬೇಕೆಂದು ಕೆಲವರು ಅಭಿಪ್ರಾಯಪಡುತ್ತಿದ್ದಾರೆ. ಇನ್ನೂ ಕೆಲವರು ಈ ನಿರ್ಧಾರಕ್ಕೆ ತಮ್ಮ ಬೆಂಬಲ ಸೂಚಿಸುತ್ತಿಲ್ಲ. ರಾಷ್ಟ್ರಗೀತೆ ಸಾಕಷ್ಟು ಮೌಲ್ಯವುಳ್ಳದ್ದು. ನನಗೆ ತಿಳಿದ ಮಟ್ಟಿಗೆ ಥಿಯೇಟರ್‌ಗಳು, ರೆಸ್ಟೋರೆಂಟ್‍ನಂತಹ ಪ್ರದೇಶಗಳಲ್ಲಿ ನಮ್ಮ ಅಮೂಲ್ಯವಾದ ರಾಷ್ಟ್ರಗೀತೆ ಪ್ರಸಾರ ಮಾಡಬಾರದು..’
‘ನಮ್ಮ ತಂದೆತಾಯಿ ಬಗ್ಗೆ ನನಗೆ ಸಾಕಷ್ಟು ಗೌರವ. ಅವರಿಗೆ ಕೆಲವು ಪ್ರದೇಶಗಳಲ್ಲಿ ಗೌರವ ಸಿಗಲ್ಲ ಎಂದು ತಿಳಿದಾಗ ಅವರನ್ನು ಆ ಪ್ರದೇಶಗಳಿಗೆ ನಾನ್ಯಾಕೆ ಕರೆದೊಯ್ಯುಬೇಕು? ಎಲ್ಲಿಗೆ ಹೋದರೂ ಅವರಿಗೆ ಗೌರವ ಸಿಗುವಂತಿರಬೇಕು. ಅದೇ ರೀತಿ ಎಲ್ಲಿ ರಾಷ್ಟ್ರಗೀತೆಗೆ ಗೌರವ ಸಿಗಲ್ಲವೋ ಅಂತಹ ಪ್ರದೇಶಗಳಲ್ಲಿ ಪ್ರಸಾರ ಮಾಡಬಾರದು. ಒಂದು ವೇಳೆ ಪ್ರಸಾರವಾದರೆ ನಾವು ಎದ್ದುನಿಲ್ಲಬೇಕು. ಈ ವಿಚಾರದಲ್ಲಿ ಅಹಂ ಕೆಲಸಕ್ಕೆ ಬರಲ್ಲ. ನಾನಾದರೆ ನಮ್ಮ ದೇಶವಷ್ಟೆ ಅಲ್ಲ ಯಾವುದೇ ದೇಶದ ರಾಷ್ಟ್ರಗೀತೆ ಪ್ರಸಾರವಾದರೂ ಎದ್ದು ನಿಲ್ಲುತ್ತೇನೆ’ಎಂದಿದ್ದಾರೆ.
ಈ ಹಿಂದೆ ಸೋನು ನಿಗಮ್ ಆಜಾನ್ (ಮುಸ್ಲಿಂರ ನಮಾಜ್) ಕಾರಣದಿಂದ ತನಗೆ ಸಾಕಷ್ಟು ಕಿರಿಕಿರಿಯಾಗುತ್ತಿದೆ. ಜನರ ಮೇಲೆ ಧಾರ್ಮಿಕ ಒತ್ತಡ ಹೇರುವುದು ಸರಿಯಲ್ಲ ಎಂಬ ಹೇಳಿಕೆ ನೀಡಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರು ಸೋನು. ಇದೀಗೆ ಅವರು ರಾಷ್ಟ್ರಗೀತೆ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಿ ಇನ್ನಷ್ಟು ಚರ್ಚೆಗೆ ಕಾರಣರಾಗಿದ್ದಾರೆ.