ಮನೋರಂಜನೆ

ಸಿನಿ ಟ್ರೇಲರ್: ಊಹೆಗೆ ಸಿಗುತ್ತಿಲ್ಲ ಗರುಡವೇಗ

Pinterest LinkedIn Tumblr

ಪೃಥ್ವಿರಾಜ್‌


ಟಾಲಿವುಡ್‌ನ ಆ್ಯಂಗ್ರಿ ಯಂಗ್‌ಮನ್ ಡಾ.ರಾಜಶೇಖರ ವರ್ಷದ ನಂತರ ಮತ್ತೆ ಬಣ್ಣ ಹಚ್ಚಿದ್ದಾರೆ. ಅವರ ಕೆರಿಯರ್‌ನ ಭಾರಿ ಬಜೆಟ್‌ ಚಿತ್ರ ‘ಪಿಎಸ್‌ವಿ ಗರುಡವೇಗ 126.8 ಎಂ’. ಕನ್ನಡಿಗ ಕಿಶೋರ್ ಸಹ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.

ಯುಟ್ಯೂಬ್‌ಗೆ ಅಪ್‌ಲೋಡ್ ಆಗಿರುವ ಟ್ರೇಲರ್‌ಗಳನ್ನು ನೋಡಿದಾಗ ಇದು ಆಕ್ಷನ್, ಥ್ರಿಲ್ಲರ್‌ ಚಿತ್ರ ಎನ್ನುವುದಕ್ಕೆ ಹಲವು ಸಾಕ್ಷ್ಯಗಳು ಸಿಗುತ್ತವೆ. ತಂತ್ರಜ್ಞಾನದ ಬಳಕೆ ಮತ್ತು ಸಿನಿಮಾಟೊಗ್ರಾಫಿಯ ಚಾಕಚಕ್ಯತೆ ಬೆರಗುಗೊಳಿಸುತ್ತದೆ. ರಷ್ಯಾದ ಸ್ಟಂಟ್‌ಮಾಸ್ಟರ್ ಡೇವಿಡ್‌ ಖುಬು, ಥಾಯ್ಲೆಂಡ್‌ನ ಸ್ಟಂಟ್‌ಮನ್ ನುಂಗ್‌ ಮತ್ತು ಸಾಹಸ ನಿರ್ದೇಶಕ ಸಂತೋಷ್‌ ಅವರು ಸಾಹಸ ದೃಶ್ಯಗಳನ್ನು ಅದ್ಭುತವಾಗಿ ಸಂಯೋಜಿಸಿದ್ದಾರೆ.

ಜಾರ್ಜಿಯಾ, ಬ್ಯಾಂಕಾಕ್‌, ಮಲೇಷ್ಯಾ, ಪಟ್ಟಾಯ, ಸಿಂಗಪುರ, ಮುಂಬೈನಲ್ಲಿ ಸೆರೆಹಿಡಿದಿರುವ ಸಾಹಸ ದೃಶ್ಯಗಳು, ಚೇಸಿಂಗ್ ದೃಶ್ಯಗಳು ಅಭಿಮಾನಿಗಳಿಗೆ ಖುಷಿ ಕೊಟ್ಟಿವೆ.

‘ಅವರ ಕಮ್ಯುನಿಕೇಷನ್ ಸಿಸ್ಟಂ ಹೈಟೆಕ್‌ ಆಗಿದೆ. ಲೇಟಸ್ಟ್‌ ಟೆಕ್ನಾಲಜಿಯ ವೆಪನ್ಸ್‌ ಬಳಸುತ್ತಿದ್ದಾರೆ. ಏನೋ ನಡೆಯುತ್ತೆ’ ಎಂಬುದು ರಾಜಶೇಖರ್‌ ಹೇಳುವ ಪಂಚಿಂಗ್ ಡೈಲಾಗ್. ಇಡೀ ಚಿತ್ರದ ಕೇಂದ್ರ ಯಾವುದು ಎಂಬುದಕ್ಕೂ ಇಲ್ಲಿಯೇ ಸುಳಿವು ಸಿಗುತ್ತದೆ.

ಗುಪ್ತಚರ ವಿಭಾಗದ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಜಶೇಖರ ಅವರಿಗೆ ಡೈಲಾಗ್‌ ಕಿಂಗ್ ಸಾಯಿಕುಮಾರ್‌ ದನಿ ನೀಡಿದ್ದಾರೆ. ತಮಿಳು ನಟಿ ಪೂಜಾ ಚಿತ್ರದ ನಾಯಕಿ. ನಾಸಿರ್, ಶ್ರದ್ಧಾ ಕಪೂರ್, ಸನ್ನಿ ಲಿಯೋನ್ ಮತ್ತು ಹಾಸ್ಯನಟ ಅಲಿ ತಾರಾಗಣದಲ್ಲಿ ಇದ್ದಾರೆ. ನ.3ಕ್ಕೆ ಚಿತ್ರ ಬಿಡುಗಡೆಯಾಗಲಿದೆ.

Comments are closed.