ಮನೋರಂಜನೆ

ಬಿಡುಗಡೆಗೆ ಸಿದ್ಧವಾಗಿರುವ ‘ಪ್ರೀತಿ–ಪ್ರೇಮ ಬರೀ ಪುಸ್ತಕದ ಬದನೆಕಾಯಿ’

Pinterest LinkedIn Tumblr


‘ಪ್ರೀತಿ–ಪ್ರೇಮ ಬರೀ ಪುಸ್ತಕದ ಬದನೆಕಾಯಿ’ – ಅರೆ, ಇದು ಉಪೇಂದ್ರ ನಿರ್ದೇಶನದ ‘ಎ’ ಚಿತ್ರದ ಜನಪ್ರಿಯ ಡೈಲಾಗ್ ಅಲ್ಲವೇ? ಎಂದು ಹುಬ್ಬೇರಿಸಬೇಡಿ. ಈ ಸಾಲುಗಳು ಸದ್ಯದಲ್ಲೇ ತೆರೆ ಕಾಣಲಿರುವ ಹೊಸ ಚಿತ್ರದ ಶೀರ್ಷಿಕೆ.

‘ಪ್ರೀತಿ ಪ್ರೇಮ’ ಶೀರ್ಷಿಕೆಯಾದರೆ, ‘ಬರೀ ಪುಸ್ತಕದ ಬದನೆಕಾಯಿ’ ಅಡಿಬರಹ. ಸದ್ದಿಲ್ಲದೆ ಸೆಟ್ಟೇರಿರುವ ಚಿತ್ರವೀಗ ಬಿಡುಗಡೆಯ ಹಂತಕ್ಕೆ ಬಂದಿದೆ. ತಮ್ಮ ಸಿನಿಮಾದ ಆಡಿಯೊ ಸಿ.ಡಿ. ಬಿಡುಗಡೆಗೆ ಜತೆಗೆ, ಸಿನಿಮಾ ಸಂಭ್ರಮವನ್ನು ಹಂಚಿಕೊಳ್ಳಲು ಚಿತ್ರತಂಡ ಮಾಧ್ಯಮದವರ ಮುಂದೆ ಹಾಜರಾಗಿತ್ತು.

ತಮ್ಮ ಚಿತ್ರ ಅಲ್ಲಿಂದ ಇಲ್ಲಿಂದ ಸ್ಫೂರ್ತಿ ಪಡೆದಿದ್ದು, ನೈಜ ಘಟನೆಯ ಸುತ್ತ ಹೆಣೆದಿದ್ದು ಎಂದು ಕೆಲವು ನಿರ್ದೇಶಕರು ಹೇಳಿಕೊಳ್ಳುತ್ತಾರೆ. ಕಡೆಗೆ, ಪ್ರಶ್ನೆಗಳ ಸುರಿಮಳೆ ಬಿದ್ದಾಗ, ಕೊಂಕಣ ಸುತ್ತಿ ಮೈಲಾರಕ್ಕೆ ಬಂದು ಕಡೆಗೆ, ನಮ್ಮದು ರಿಮೇಕ್ ಚಿತ್ರ ಎಂದು ನಿಜ ಒಪ್ಪಿಕೊಳ್ಳುತ್ತಾರೆ. ಆದರೆ, ಈ ಚಿತ್ರತಂಡ ಕೊಂಕಣ ಸುತ್ತದೆ ತಮ್ಮ ಚಿತ್ರ ತೆಲುಗಿನ ‘ಈ ರೋಜುಲು’ ಚಿತ್ರದ ರಿಮೇಕ್ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿತು.

ಧಾರಾವಾಹಿಗಳ ಜೊತೆಗೆ, ಹಲವು ನಿರ್ದೇಶಕರೊಂದಿಗೆ ಸಹ ನಿರ್ದೇಶಕರವಾಗಿ ಪಳಗಿರುವ ಕಾಶಿ ಇದೇ ಮೊದಲ ಬಾರಿಗೆ ನಿರ್ದೇಶಕನ ಜವಾಬ್ದಾರಿ ನಿರ್ವಹಿಸಿದ್ದಾರೆ. ‘ಕಾಮಿಡಿ ಬೆರೆತ ಪ್ರೇಮಕಥೆಯ ಚಿತ್ರವಿದು. ಮೂಲಕಥೆಯನ್ನು ಕನ್ನಡಕ್ಕೆ ತಕ್ಕಂತೆ ಒಗ್ಗಿಸಲಾಗಿದೆ. ಮನೆಮಂದಿಯೆಲ್ಲಾ ಕುಳಿತು ವೀಕ್ಷಿಸಬಹುದು’ ಎಂದಷ್ಟೇ ಹೇಳಿದ ಕಾಶಿ, ‘ನನ್ನ ಬೆನ್ನಿಗೆ ನಿಂತು, ಸುಂದರವಾಗಿ ದೃಶ್ಯಗಳನ್ನು ಸೆರೆಹಿಡಿದು ಚಿತ್ರಕ್ಕೆ ಅದ್ದೂರಿಯ ಚೌಕಟ್ಟು ಕೊಟ್ಟವರು ಕ್ಯಾಮೆರಾಮನ್ ರವಿಕುಮಾರ್’ ಎಂದು ಕೃತಜ್ಞತೆ ಸಲ್ಲಿಸಿದರು.

ಚಿತ್ರದ ನಾಯಕ ಮತ್ತು ನಿರ್ಮಾಪಕ ಶ್ರೀಕೃಷ್ಣ ಚೈತನ್ಯ. ಆಂಧ್ರಪ್ರದೇಶದ ವಿಜಯವಾಡದವರಾದ ಕೃಷ್ಣ, ಕನ್ನಡದಲ್ಲಿ ತಮ್ಮ ಮೊದಲ ಚಿತ್ರವನ್ನು ನಿರ್ಮಿಸಿಸುವ ಜೊತೆಗೆ ನಾಯಕನಾಗಿಯೂ ಪದಾರ್ಪಣೆ ಮಾಡಿದ್ದಾರೆ.

‘ಲವ್ ಎಂದರೆ, ಇಂದಿನವರಿಗೆ ಕೇವಲ ಸೆಕ್ಸ್ ಅಥವಾ ಟೈಮ್‌ ಪಾಸ್ ಆಗಿದೆ. ಈಗಿನ ಕಾಲದ ಪ್ರೀತಿಯ ಮೇಲೆ ಬೆಳಕು ಚೆಲ್ಲುತ್ತಲೇ ಒಂದೊಳ್ಳೆ ಸಂದೇಶ ಕೊಡುವ ಚಿತ್ರ ನಮ್ಮದು’ ಎಂದು ಕಥೆಯ ಎಳೆಯನ್ನು ಕೃಷ್ಣ ಬಿಟ್ಟುಕೊಟ್ಟರು. ಎಂಜಿನಿಯರಿಂಗ್ ಓದಿರುವ ಕೃಷ್ಣ, ತೆಲುಗಿನ ಮೇರುನಟರ ಅಭಿನಯ ಗುರು ಸತ್ಯಾನಂದ ಅವರ ಗರಡಿಯಲ್ಲಿ ನಟನೆಯನ್ನು ಕಲಿತಿದ್ದಾರೆ.

‘ಭಾಷೆಯ ಎಲ್ಲೇ ಮೀರಿ ಹೊಸಬರನ್ನು ಪ್ರೋತ್ಸಾಹಿಸುವ ಪ್ರೇಕ್ಷಕರು ಯಾರಾದರೂ ಇದ್ದರೆ, ಅದು ಕನ್ನಡಿಗರು ಮಾತ್ರ. ಹಾಗಾಗಿ, ನನ್ನ ಮೊದಲ ಚಿತ್ರವನ್ನು ಇಲ್ಲೇ ಮಾಡಿದ್ದೇನೆ’ ಎನ್ನುವ ಕೃಷ್ಣ, ಕನ್ನಡಿಗರು ನನ್ನ ಕೈಬಿಡುವುದಿಲ್ಲ ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಕೊಡಗಿನ ಬೆಡಗಿ ನಿಧಿ ಕುಶಾಲಪ್ಪ ಚಿತ್ರದ ನಾಯಕಿ. ಕಾಲೇಜು ಹುಡುಗಿಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ನಿಧಿ ಸ್ನೇಹಿತೆಯಾಗಿ ಸ್ವಾತಿ ನಟಿಸಿದ್ದಾರೆ. ‘ಬ್ಯೂಟಿಫುಲ್ ಮನಸುಗಳು’ ಖ್ಯಾತಿಯ ಭರತ್ ಬಿ.ಜೆ. ಚಿತ್ರಕ್ಕೆ ಸಂಗೀತ ನೀಡಿದ್ದು, ಐದೂ ಹಾಡುಗಳನ್ನು ಸಾಯಿ ಸರ್ವೇಶ್ ಬರೆದಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದು, ವೇಗಾ ಮ್ಯೂಸಿಕ್ ಹೊರತಂದಿರುವ ‘ಪ್ರೀತಿ ಪ್ರೇಮ’ದ ಆಡಿಯೊ ಸಿ.ಡಿ.ಗಳನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರವನ್ನು ಇದೇ 17ರಂದು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.

Comments are closed.