ಕರ್ನಾಟಕ

ನಕಲಿ ಅಂಕಪಟ್ಟಿ: 600 ವಿದ್ಯಾರ್ಥಿಗಳ ಪದವಿ ಪ್ರವೇಶ ರದ್ದು

Pinterest LinkedIn Tumblr

ಬಳ್ಳಾರಿ (ಫೆ.10): ನಕಲಿ ಅಂಕಪಟ್ಟಿ ನೀಡಿ ಪದವಿಗೆ ನೋಂದಣಿಯಾಗಿದ್ದ 600 ವಿದ್ಯಾರ್ಥಿಗಳ ಪ್ರವೇಶವನ್ನು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ರದ್ದು ಪಡಿಸಿದೆ. ಈ ಮೂಲಕ ನಕಲಿ ಅಂಕಪಟ್ಟಿ ದಂಧೆಗೆ ಕಡಿವಾಣ ಹಾಕಲು ವಿವಿ ಮುಂದಾಗಿದೆ.
ವಿಎಸ್ ಕೆ ವಿವಿ ಕುಲಪತಿ ನಿರ್ದೇಶನದ ಮೇರೆಗೆ ಕುಲಸಚಿವರು ಅಧಿಸೂಚನೆ ಹೊರಡಿಸಿದ್ದು, ಕಳೆದೆರಡು ಶೈಕ್ಷಣಿಕ ವರ್ಷದ 600 ವಿದ್ಯಾರ್ಥಿಗಳ ಪ್ರವೇಶಾತಿ ರದ್ದು ಪಡಿಸಲಾಗಿದೆ. ಈ ಹಿಂದೆ ನಕಲಿ ಅಂಕಪಟ್ಟಿ ಸಲ್ಲಿಕೆ ಹಿನ್ನೆಲೆಯಲ್ಲಿ ಪದವಿಗೆ ನೋಂದಣಿಯಾಗಿದ್ದ 278 ವಿದ್ಯಾರ್ಥಿಗಳ ಪ್ರವೇಶಾತಿಯನ್ನು ವಿವಿ ರದ್ದುಪಡಿಸಿತ್ತು. ಅಲ್ಲದೆ ಕಳೆದ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಅಂಕಪಟ್ಟಿ ಪರಿಶೀಲನೆಗೆ ಸಮಿತಿ ರಚಿಸಲಾಗಿತ್ತು. ಸಮಿತಿಯ ವರದಿಯಲ್ಲಿ ಮಾನ್ಯತೆಯಿಲ್ಲದೆ ಅಂಕಪಟ್ಟಿ ನೀಡಿರುವುದು ಕಂಡು ಬಂದ ಕಾರಣ ಒಟ್ಟು 600 ವಿದ್ಯಾರ್ಥಿಗಳ ಪ್ರವೇಶ ರದ್ದುಪಡಿಸಲಾಗಿದೆ. ಅಲ್ಲದೆ ವಿವಿ ವ್ಯಾಪ್ತಿಗೊಳಪಡುವ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯ ಕಾಲೇಜುಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಕೂಡಲೇ ತಮ್ಮ ಕಾಲೇಜಿನಲ್ಲಿ ಪದವಿಗೆ ನೋಂದಣಿಯಾಗಿರುವ ವಿದ್ಯಾರ್ಥಿಗಳ ದ್ವಿತೀಯ ಪಿಯುಸಿ ಅಂಕಪಟ್ಟಿ, ಪ್ರಮಾಣಪತ್ರ ಪರಿಶೀಲಿಸಬೇಕು. ಒಂದು ವೇಳೆ ಮಾನ್ಯತೆಯಿಲ್ಲದೆ ಅಂಕಪಟ್ಟಿ ಕಂಡುಬಂದರೆ ಪ್ರವೇಶಾತಿ ರದ್ದುಪಡಿಸಬೇಕು. ನಿರ್ಲಕ್ಷ್ಯ ವಹಿಸಿದ್ರೆ ಆಯಾ ಕಾಲೇಜಿನ ಪ್ರಾಂಶುಪಾಲರೇ ನೇರ ಹೊಣೆ ಅಂತ ವಿವಿ ಕುಲಸಚಿವರು ಸೂಚಿಸಿದ್ದಾರೆ. ವಿವಿಯ ಈ ಕಠಿಣ ಕ್ರಮದಿಂದ ನಕಲಿ ಅಂಕಪಟ್ಟಿ ನೀಡಿದ್ದ ವಿದ್ಯಾರ್ಥಿಗಳ ಭವಿಷ್ಯದ ಆತಂಕ ಶುರುವಾಗಿದೆ.

Comments are closed.