ಮನೋರಂಜನೆ

ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡ ‘ಗ್ರೀಟಿಂಗ್ಸ್‌ ಫ್ರಮ್‌ ಫುಕುಶಿಮಾ’

Pinterest LinkedIn Tumblr


ಧ್ವಂಸಗೊಂಡ ಮನೆಯ ಅವಶೇಷಗಳ ನಡುವೆ ಕುಳಿತು ಸೆಟೊಮಿ ತನ್ನ ಎದುರಿನ ಮೇರಿಗೆ ಮೆಲ್ಲಗೇ ಹೇಳುತ್ತಾಳೆ. ಹೊರಗೆ ಜೋರಾಗಿ ಗಾಳಿ ಬೀಸುತ್ತಿದೆ. ಸೆಟೊಮಿ ಅಸ್ಪಷ್ಟ ಇಂಗ್ಲಿಷಿನ ಮೆಲ್ಲನೆಯ ಧ್ವನಿಯಲ್ಲಿ ಛಕ್ಕನೇ ಯಾವುದೋ ದರ್ಶನದ ಮಿಂಚು ಮಿಂಚಿ ಹೋದಂತೆ ಮೇರಿ ಬಟ್ಟಲಿಗಂಟಿದ್ದ ತುಟಿ ಎತ್ತಿ ‘ಏನು…?’ ಎಂದು ಪ್ರಶ್ನಿಸುತ್ತಾಳೆ. ಸೆಟೊಮಿಯದು ಮತ್ತದೇ ನಿರ್ಲಿಪ್ತ ತಣ್ಣನೆಯ ಧ್ವನಿ ‘There is no pain’.

‘ಗ್ರೀಟಿಂಗ್ಸ್‌ ಫ್ರಮ್‌ ಫುಕುಶಿಮಾ’ ಸಿನಿಮಾದಲ್ಲಿ ಬರುವ ಈ ದೃಶ್ಯ ಚಿತ್ರಮಂದಿರದಿಂದ ಹೊರಬಂದ ಮೇಲೂ ಮನಸಲ್ಲಿ ಗುಂಗಿ ಹುಳದಂತೆ ಕೊರೆಯುತ್ತಲೇ ಇರುತ್ತದೆ. ಹೀಗೆ ಸ್ಮೃತಿಕೋಶದಲ್ಲಿ ಅಚ್ಚೊತ್ತುವ, ಸಿನಿಮಾ ಮುಗಿದ ಮೇಲೂ ನಮ್ಮೊಳಗೆ ಬೆಳೆಯುತ್ತಲೇ ಇರುವ ಹಲವು ಬಿಂಬಗಳನ್ನು ಈ ಸಿನಿಮಾ ಉಳಿಸುತ್ತದೆ.

ಜರ್ಮನ್‌ ಭಾಷೆಯಲ್ಲಿ 2016ರಲ್ಲಿ ಬಿಡುಗಡೆಯಾದ ‘ಗ್ರೀಟಿಂಗ್ಸ್‌ ಫ್ರಮ್‌ ಫುಕುಶಿಮಾ’ ಸಿನಿಮಾವನ್ನು ನಿರ್ದೇಶಿಸಿದ್ದು ಡೋರಿಸ್‌ ಡೋರಿ. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಮೊದಲ ದಿನ ಪ್ರದರ್ಶಿತವಾದ ಈ ಸಿನಿಮಾ ಹಲವು ಕಾರಣಗಳಿಂದ ಗಮನ ಸೆಳೆಯುತ್ತದೆ.

ಮುರಿದು ಹೋದ ಮದುವೆಯಿಂದ ಭಗ್ನಗೊಂಡ ಕನಸುಗಳ ವೇದನೆಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಮೇರಿ ಎಂಬ ಜರ್ಮನಿ ಹುಡುಗಿ ಜಪಾನ್‌ಗೆ ಬರುತ್ತಾಳೆ. ತನ್ನ ನೋವನ್ನು ಮರೆಯಲು ಅವಳು ಒಂದು ಸಂಸ್ಥೆಯನ್ನು ಸೇರಿಕೊಳ್ಳುತ್ತಾಳೆ. 2011ರಲ್ಲಿ ಜಪಾನ್‌ನಲ್ಲಿ ಸಂಭವಿಸಿದ ಸುನಾಮಿ ಮತ್ತು ಫುಕುಶಿಮಾ ಅಣುಸ್ಥಾವರದಲ್ಲಿ ಅಣುಸೋರಿಕೆಯಿಂದ ನಿರಾಶ್ರಿತರಾದವರ ಬದುಕಿನಲ್ಲಿ ಖುಷಿ ಮೂಡಿಸಲು ಪ್ರಯತ್ನಿಸುವುದು ಆ ಸಂಸ್ಥೆಯ ಉದ್ದೇಶ.

ಆದರೆ ಬಹುಬೇಗನೇ ತನಗೆ ಈ ಕೆಲಸ ಒಗ್ಗದು ಎಂದು ಮೇರಿಗೆ ತಿಳಿದುಬಿಡುತ್ತದೆ. ಅಲ್ಲಿಂದ ವಾಪಸ್‌ ಬರಬೇಕು ಎಂದೂ ಒಮ್ಮೆ ಹೊರಡಲು ಯತ್ನಿಸುತ್ತಾಳೆ. ಆದರೆ ಈ ನಡುವೆಯೇ ಅವಳಿಗೆ ಪುಕೋಶಿಮಾದ ಕೊನೆಯ ವೇಶ್ಯೆ ಸೆಟೊಮಿಯ ಪರಿಚಯವಾಗುತ್ತದೆ. ನಿರಾಶ್ರಿತರ ಕ್ಯಾಂಪ್‌ನಿಂದ ಹೊರಟು ನಿಷೇಧಿತ ವಲಯದಲ್ಲಿರುವ ತನ್ನ ಮನೆಯ ಅವಶೇಷಗಳಲ್ಲಿಯೇ ಉಳಿಯಹೊರಟಿರುವ ಹೆಣ್ಣು ಅವಳು. ಅಲ್ಲಿ ಮನೆಯನ್ನು ಸರಿಪಡಿಸಿ ವಸತಿಗೆ ವ್ಯವಸ್ಥೆ ಕಲ್ಪಿಸುವುದಕ್ಕೆ ಮೇರಿ ನೆರವಾಗುತ್ತಾಳೆ.

ಮೇರಿ ಮತ್ತು ಸೆಟೊಮಿ ನಡುವಿನ ಹೆಸರಿಸಲಾಗದ ಸಂಬಂಧದ ಬಿಗಿತನದಲ್ಲಿಯೇ ಸಿನಿಮಾ ಹಲವು ಆಯಾಮಗಳಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಸೆಟೊಮಿಯ ಮೂಲಕ ನೆಲ ಕಳೆದುಕೊಂಡವರ, ಮನೆ ಕಳೆದುಕೊಂಡರ, ತನ್ನವರನ್ನೆಲ್ಲ ಕಳೆದುಕೊಂಡವರ ವಿಚ್ಛಿದ್ರಲೋಕ ಮೇರಿಗೆ ಪರಿಚಯವಾಗುತ್ತ ಹೋಗುತ್ತದೆ.

‘ಮನೆ ಸರಿಪಡಿಸಿಕೊಳ್ಳುವುದು’ ಎಂಬ ಪ್ರಕ್ರಿಯೆಯೇ ಈ ಸಿನಿಮಾದಲ್ಲಿ ಒಂದು ರೂಪಕವಾಗಿದೆ. ಸೆಟೊಮಿಗೆ ಅಲ್ಲಿನ ಮನೆಯೆಂಬುದು ತನ್ನೆಲ್ಲ ಪೂರ್ವಜರು, ತನ್ನ ಸಂಬಂಧಿಗಳು, ಗೆಳೆಯರು ಹೀಗೆ ಬದುಕಿಗೆ ಸಂಬಂಧಿಸಿದ ಪ್ರತಿಯೊಂದು ನೆನಪುಗಳನ್ನೂ ಮರುಸೃಷ್ಟಿಸಿಕೊಳ್ಳುವ ತಾಣವಾದರೆ, ಮೇರಿಗೆ ತನ್ನ ಜೀವನದ ಭೂತದಿಂದ ಬಿಡಿಸಿಕೊಳ್ಳುವ, ಬದುಕಿನ ಸೌಂದರ್ಯವನ್ನು ಹುಡುಕಿಕೊಳ್ಳುವ, ಆತ್ಮದ ಅರಿವನ್ನು ಬೆಳಗಿಕೊಳ್ಳುವ ಜಾಗ. ಸಿನಿಮಾವನ್ನು ನೋಡುವ ಪ್ರೇಕ್ಷಕನಿಗೆ, ಸಂಕಟಗಳೊಟ್ಟಿಗೇ ವಿಸ್ತರಿಸಿಕೊಳ್ಳುತ್ತ ಹೋಗುವ ಜೀವನದಲ್ಲಿ ಆ ಕ್ಷಣದ ಸೌಂದರ್ಯವನ್ನು ನೋಡುವ ಕಣ್ಣು ತೆರೆದುಕೊಳ್ಳಬೇಕಾದ ಕಾಣ್ಕೆಗೂ ಆ ಮನೆ ರೂಪಕವಾಗಿ ನಿಲ್ಲುತ್ತದೆ.

ನಿರ್ದೇಶಕರು ಭೂತ, ಕನಸು, ಅತೃಪ್ತ ಆತ್ಮಗಳ ಕನವರಿಕೆ, ವಾಸ್ತವ ಇವುಗಳನ್ನೆಲ್ಲ ಹೆಣೆದು ಸಂಯಮದಿಂದ ಸಿನಿಮಾ ಕಟ್ಟಿದ ರೀತಿಯೇ ತುಂಬ ಆಸಕ್ತಿಕರವಾದದ್ದು. ಒಂದೆಡೆ ಮನುಷ್ಯಕುಲವನ್ನು ದಂಗುಬಡಿಸಿದ ದುರಂತದ ಅವಶೇಷಗಳು, ಇನ್ನೊಂದೆಡೆ ಬದುಕಿನ ನಶ್ವರತೆಯನ್ನು ಅಣಕಿಸುವಂತೆ ಬೆಳೆದು ನಿಂತ ಬೃಹತ್‌ ಮಹಾನಗರಿಗಳು..

ಈ ಎರಡೂ ಅಂಚಿನ ನಡುವೆ ಹೋಯ್ದಾಡುವ ಭಾವತೀವ್ರ ಕಥನವನ್ನು ಕಾಣಿಸಲು ಛಾಯಾಗ್ರಾಹಕರು ಕಪ್ಪು–ಬಿಳುಪು ಆಯ್ದುಕೊಂಡಿದ್ದಾರೆ. ಅವರ ಈ ಆಯ್ಕೆ ಔಚಿತ್ಯಪೂರ್ಣವಾಗಿರುವುದಷ್ಟೇ ಅಲ್ಲ, ಇಡೀ ಸಿನಿಮಾಕ್ಕೊಂದು ಭಾವವಲಯವನ್ನು ನಿರ್ಮಿಸಿಕೊಡಲು ಸಶಕ್ತವಾಗಿದೆ. ಭಾವತೀವ್ರತೆಗೆ ಇಂಬುನೀಡುವಂತೆ ಹದವಾಗಿ ಒದಗಿಬಂದಿರುವ ಹಿನ್ನೆಲೆ ಸಂಗೀತವೂ ಈ ಸಿನಿಮಾದ ಪ್ರಬಲ ಪರಿಣಾಮಾತ್ಮಕ ಅಂಶ.

ಸ್ಮಶಾನಸದೃಶವಾದ ನೆಲದಲ್ಲಿ ಮತ್ತೆ ಗೆಜ್ಜೆ ಸದ್ದು ಮೂಡುವ, ಬದುಕು ಮತ್ತೆ ಹಿಂದಿನ ಜೀವಂತಿಕೆಯ ಲಯಕ್ಕೆ ಮರಳುವ ಆಶಾದಾಯಕ ಮುಕ್ತಾಯವೂ ‘ಫುಕುಶಿಮಾ’ ನೆನಪಿನಲ್ಲಿರುವಂತೇ ಮಾಡುತ್ತದೆ. ಈ ಸಿನಿಮಾದಲ್ಲಿ ಬೆಳಗಿನ ಹೊತ್ತು ಮೇರಿ ಮತ್ತು ಸೆಟೊಮಿ ಇಬ್ಬರೂ ಕೂತು ಬಿಸಿ ಪಾನೀಯವನ್ನು ಕುಡಿಯುವ ದೃಶ್ಯಗಳು ಇವೆ.

ಕುಳಿತುಕೊಳ್ಳುವ ರೀತಿ, ಸದ್ದು ಮಾಡದೇ ಬಟ್ಟಲಿನ ಮುಚ್ಚಳ ತೆಗೆಯುವ ಬಗೆ, ಅದನ್ನು ಹಿಡಿದುಕೊಳ್ಳಬೇಕಾದ ರೀತಿ, ಮೆಲ್ಲನೇ ಅದರ ಕಂಪನ್ನು ಮೂಸಿ, ಮೆಲ್ಲನೇ ಹನಿಹನಿಯಾಗಿ ಹೀರಿ ಧ್ಯಾನಿಸುವ ಬಗೆಯನ್ನು ಸೆಟೊಮಿ ಮೇರಿಗೆ ಹೇಳಿಕೊಡುತ್ತಾಳೆ. ನೆರಳು ಬೆಳಕಿನ ಅದ್ಭುತ ಸಂಯೋಜನೆ, ಸಣ್ಣಗೇ ಬೀಸುವ ಗಾಳಿ, ನೀರವತೆಯಲ್ಲಿ ಸೆಟೊಮಿ ಸಣ್ಣಗೆ ಹೇಳುವ ಮಾತು ‘ನೀನು ಮತ್ತು ಪಾನೀಯ ಅಷ್ಟೆ. ಮತ್ತೇನೂ ಇಲ್ಲ. ಅಷ್ಟೇ ಆಗಿ ಅನುಭವಿಸು’. ಇಲ್ಲಿ ಪಾನೀಯದ ಮೂಲಕ ಬದುಕನ್ನೂ ಧೇನಿಸುವುದು ಮೇರಿ ಮಾತ್ರವಲ್ಲ, ಪ್ರೇಕ್ಷಕನೂ… ಒಂದು ಸಿನಿಮಾದಿಂದ ಆತ್ಯಂತಿಕವಾಗಿ ನಿರೀಕ್ಷಿಸುವುದು ಇಷ್ಟನ್ನೇ ಅಲ್ಲವೇ?

ಮರುಪ್ರದರ್ಶನದ ವಿವರಗಳು
ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಬುಧವಾರ ಫೆ. 08ರಂದು ‘ಗ್ರೀಟಿಂಗ್ಸ್‌ ಫ್ರಮ್‌ ಫುಕುಶಿಮಾ’ ಸಿನಿಮಾ ಮರುಪ್ರದರ್ಶನಗೊಳ್ಳಲಿದೆ. ಆಸಕ್ತರು ಒರಾಯನ್‌ ಮಾಲ್‌ನ ಪರದೆ ನಂ. 9ರಲ್ಲಿ ಬೆಳಿಗ್ಗೆ 9.50ಕ್ಕೆ ಈ ಸಿನಿಮಾ ವೀಕ್ಷಿಸಬಹುದು.

***
ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಶುಕ್ರವಾರ (ಫೆ. 3) ಪ್ರದರ್ಶನಗೊಳ್ಳಲಿರುವ ಚಿತ್ರಗಳ ವಿವರ ಮತ್ತು ವೇಳಾಪಟ್ಟಿ : http://biffes.in/schedule-2017

Comments are closed.