ಮನೋರಂಜನೆ

‘ಕಾಬಿಲ್’ ಸಿನಿಮಾ ವಿಮರ್ಶೆ

Pinterest LinkedIn Tumblr


ಚಿತ್ರ: ಕಾಬಿಲ್
ಭಾಷೆ : ಹಿಂದಿ
ತಾರಾಗಣ: ಹೃತಿಕ್ ರೋಷನ್, ಯಾಮಿ ಗೌತಮ್, ರೋನಿತ್ ರಾಯ್, ರೋಹಿತ್ ರಾಯ್, ಉರ್ವಶಿ ರೌಟೆಲ್
ನಿರ್ದೇಶನ: ಸಂಜಯ್ ಗುಪ್ತಾ
ಸಂಗೀತ : ರಾಜೇಶ್ ರೋಷನ್
ಛಾಯಾಗ್ರಹಣ : ಸುದೀಪ್ ಚಟರ್ಜಿ,
ಸೌಂಡ್ : ರಸೂಲ್ ಪೂಕುಟ್ಟಿ
ನಿರ್ಮಾಣ: ರಾಕೇಶ್ ರೋಷನ್
ಮೆ ಹೂನಾ….! ನಾನಿದ್ದೇನೆ, ಉಸಿರುವವರೆಗೂ ನೀನೇ ನನ್ನ ಪ್ರಾಣ. ತನ್ನಂತೆಯೇ ಕಣ್ಣು ಕಾಣದ ಆ ಹುಡುಗಿಗೆ ಆತ ಹೇಳುವ ಆತ್ಮಸ್ಥೈರ್ಯದ ಮಾತದು.ಆ ಹೊತ್ತಿಗೆ ಇಬ್ಬರು ಮದುವೆ ಆಗಲು ನಿರ್ಧರಿಸುತ್ತಾರೆ. ತನ್ನೆದುರು ಕುಳಿತು ಮಾತನಾಡುವ ಹುಡುಗ ತನ್ನಂತೆ ಕುರುಡ ಎನ್ನುವುದಷ್ಟೇ ಆಕೆಗೆ ಗೊತ್ತು. ಆದರಾಚೆ ಆತನ ಹಿನ್ನೆಲೆಯೇನು, ಹೇಗಿದ್ದಾನೆ ಎನ್ನುವುದೊಂದು ಗೊತ್ತಿಲ್ಲ. ಮುಂದೇ ಹೇಗೆ…ಅನುಮಾನ, ಆತಂಕ ಆಕೆಯದ್ದು. ಆಕೆಯ ಬಗ್ಗೆ ಅತನಿಗೂ ಗೊತ್ತಿದದ್ದೂ ಕೂಡ ಅಷ್ಟೆ. ಆದರೂ ಆತ ಕೊಟ್ಟ ಭರವಸೆ ಅದೊಂದು ಮಾತ್ರ. ಅವರೇನೊ ಸಂದರವಾದ ಬದುಕಿನ ಕನಸು ಕಂಡರು ನಿಜ, ಕಣ್ಣಿದ್ದೂ ಜಗತ್ತನ್ನು ಕಂಡ ಜನ ಅವರಿಬ್ಬರನ್ನು ಸ್ವಚ್ಛಂದದಿಂದ ಬದುಕಲು ಬಿಡುತ್ತಾರಾ?
ಅವರಿಬ್ಬರು ಮದುವೆ ಆಗಿ ಸಂಭ್ರಮ ಅನುಭವಿಸಿದ್ದು ಒಂದೇ ದಿನ. ಅತಿಲೋಕ ಸುಂದರಿಯೇ ಆದ ಆ ಹುಡುಗಿ ಮೇಲೆ ಕಾಮುಕರ ವಕ್ರ ದೃಷ್ಟಿ ಬೀಳುತ್ತದೆ. ಕೈ ಹಿಡಿದವ ಕೆಲಸಕ್ಕೆ ಹೋದಾಗ ಆಕೆಯ ಮೇಲೆ ಕಾಮುಕರ ದಾಳಿ ನಡೆಯುತ್ತದೆ. ಭವಿಷ್ಯದ ಬದುಕಿನತ್ತ ಆಕಾಶದಷ್ಟು ಕನಸು ಕಟ್ಟಿಕೊಂಡವಳ ಮೇಲೆ ಅತ್ಯಾಚಾರ ನಡೆಯುತ್ತದೆ. ದೂರು ಸಲ್ಲಿಸಲು ಹೋದರೆ, ಸಾಕ್ಷಿಗಳೇ ಇಲ್ಲವೆಂದು ಅವಮಾನಿಸಲಾಗುತ್ತದೆ. ಕಾಮುಕರಿಗೆ ವ್ಯವಸ್ಥೆಯ ಅಭಯ ಹಸ್ತ ಸಿಗುತ್ತದೆ. ಆಕೆಯ ಮೇಲೆ ಮರುದಿನವೂ ಅತ್ಯಾಚಾರ ಮನನೊಂದ ಹುಡುಗಿಗೆ ಹೊಳೆದಿದ್ದು ಆತ್ಮಹತ್ಯೆ. ಆದರೆ, ತನ್ನಂತೆಯೇ ಇದ್ದ ಆಕೆಯೊಂದಿಗೆ ಸುಂದರವಾಗಿ ಬದುಕಲು ಬಯಸಲು ಹುಡುಗನಿಗೆ ಉಳಿದಿದ್ದು ನೋವು, ದುಃಖ, ಆಕ್ರೋಶ ಮಾತ್ರ.
ಹೃತಿಕ್ ರೋಷನ್, ಯಾಮಿ ಗೌತಮ್ ಅಭಿನಯದ ‘ಕಾಬಿಲ್’ನ ದೃಶ್ಯವನ್ನು ಕಣ್ತುಂಬಿಕೊಳ್ಳುವಾಗ ಕೆಟ್ಟ ವ್ಯವಸ್ಥೆಯ ವಿರುದ್ಧ ರಕ್ತ ಕುದಿಯುತ್ತದೆ. ಕಥಾ ನಾಯಕ ರೋಹನ್ ಭಟ್ನಾಗರ್‌ನ ಸ್ಥಿತಿ ಅಗಾಧ ದುಃಖ ತರಿಸುತ್ತದೆ. ಸ್ವರ್ಗವೇ ನಾಚುವಂತಿದ್ದ ಸುಂದರಿ ಸುಪ್ರಿಯಾ ಶರ್ಮಾಳ ದುರಂತ ನೋಡಿ ಕರುಳು ಕಿವುಚಿದಂತಾಗುತ್ತದೆ. ಕತೆಯ ಮುಂದಿನದ್ದು ಏನು ಎನ್ನುವುದಕ್ಕೂ ಮೂಲಕ ಕಾಬಿಲ್ ಕುಳಿತವರಲ್ಲಿ ಮತ್ತೆ ಮತ್ತೆ ಕಾಡಿಸುತ್ತಾ ಹೋಗುತ್ತದೆ. ಕತೆಯ ಇನ್ನೊಂದು ಘಟ್ಟ ತೆರೆದುಕೊಳ್ಳುವ ಮುನ್ನ ಪ್ರೇಕ್ಷಕ ಗೊತ್ತಿಲ್ಲದೆ ಮನಸ್ಸಿನೊಳಗೆ ಅಂಧರಾದ ರೋಹನ್ ಭಟ್ನಾಗರ್ ಹಾಗೂ ಸುಪ್ರಿಯಾ ಭಟ್ನಾಗರ್ ದಂಪತಿಯನ್ನು ಗಾಢವಾಗಿ ಇಳಿಸಿಕೊಂಡು ಬಿಡುತ್ತಾನೆ. ಅಸಹಾಯಕ ಹೆಣ್ಣು ಮಗಳು ಸಂಸಾರದ ಸುಖ ಕಾಣುವಾಗಲೇ ಕಾಮುಕರ ಕೈಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದು ಮನಕಲುತ್ತಾ ಹೋಗುತ್ತದೆ. ಸೇಡು ತೀರಿಸಿಕೊಳ್ಳುವ ರೋಹನ್ ಆವೇಶಕ್ಕೆ ಪ್ರೇಕ್ಷಕನದ್ದು ಬೆಂಬಲ ಸಿಗುತ್ತದೆ. ಆ ಮೂಲಕ ಕತೆಯ ಮುಂದಿನ ಭಾಗ ರೋಚಕತೆ ಹುಟ್ಟಿಸುತ್ತದೆ.
ಕತೆಯ ಮುಂದಿನ ಭಾಗ ಏನೇ ಇರಲಿ, ಅಂಧರನ್ನು ಅಸಹಾಯಕರು ಎಂದೇ ಜಗತ್ತು ಭಾವಿಸಿಕೊಂಡಿದೆ. ಆದರೆ, ಅವರ ಅಂತರ್ಯದ ಒಳನೋಟ ಜಗತ್ತನ್ನು ಇನ್ನೊಂದು ದೃಷ್ಟಿಯಲ್ಲಿ ತೋರಿಸುತ್ತಾ ಹೋಗುತ್ತದೆ. ಬದುಕಿನ ಬಗ್ಗೆ ಭಟ್ನಾಗರ್ ದಂಪತಿಯಲ್ಲಿ ಕಾಣುವ ಸುಂದರ ಸ್ವಪ್ನಗಳು, ತಾವೇ ದುಡಿದು ಬದುಕುವ ಆತ್ಮಸ್ಥೈರ್ಯ, ಆತ್ಮ ವಿಶ್ವಾಸ, ಕಣ್ಣಿದ್ದವರು ಕಾಣದ ಜಗತ್ತನ್ನು ಅವರು ನೋಡುವ ಪರಿ ನಮ್ಮ ನಡುವಿನ ಅಷ್ಟು ಅಂಧರಿಗೆ ಆತ್ಮಸ್ಥೈರ್ಯ ತುಂಬುವ ಚಿತ್ರಣವೇ ಹೌದು. ಅಂಥದೊಂದು ಸಂದೇಶಕ್ಕೆ ಜೀವ ತುಂಬಲು ನಿರ್ದೇಶಕ ಸಂಜಯ್ ಗುಪ್ತಾ, ಸಾಕಷ್ಟು ಶ್ರಮ ಹಾಕಿದ್ದಾರೆ. ಅದೆಲ್ಲವೂ ಅಲ್ಲಿ ಕಣ್ಣಿಗೆ ರಾಚುತ್ತದೆ. ಮುಂದೆ ಕೂಡ ಅದನ್ನು ಕಾಣಿಸಿಕೊಳ್ಳುತ್ತದೆ. ಈ ಕತೆ ಹೊಸದಲ್ಲ. ಹಾಲಿವುಡ್‌ನ ಈ ಹಿಂದೆ ಬಂದ ‘ಬ್ಲೈಂಡ್ ಫ್ಯೂರಿ’ ಚಿತ್ರದ ಸ್ಪೂರ್ತಿಯಿಂದ ಬಂದ ಚಿತ್ರವಿದು. ಇಲ್ಲಿನ ಸಂದರ್ಭ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಅದಕ್ಕೆ ಮನರಂಜನೆಯ ಸ್ಪರ್ಶ ನೀಡಿದ್ದಾರೆ ಸಂಜಯ್ ಗುಪ್ತಾ. ಹಾಗಂತ ಅದ್ಭುತ ಎನ್ನಲಾಗದು.
ಕತೆ ಮತ್ತು ಅವರ ನಿರೂಪಣೆ ಇದಾದರೆ, ಕಲಾವಿದರ ಅಭಿನಯ ನಿಜಕ್ಕೂ ಅದ್ಭುತ. ಕಥಾ ನಾಯಕ ರೋಹನ್ ಭಟ್ನಾಗರ್ ಪಾತ್ರದಲ್ಲಿ ಹೃತಿಕ್ ರೋಷನ್ ನಟನೆ ವಂಡರ್‌ಫುಲ್. ಇದುವರೆಗಿನ ಅವರ ಸಿನಿ ಜರ್ನಿಯಲ್ಲಿ ಅತ್ಯುತ್ತಮ ನಟನೆ ಎಂದು ಒಪ್ಪಿಕೊಳ್ಳಲು ಅಡ್ಡಿಯಿಲ್ಲ. ಸಾಹಸ, ನೃತ್ಯದ ಸನ್ನಿವೇಶಗಳಲ್ಲಂತೂ ಹೃದಯಕ್ಕೆ ನಾಟುವಂತಿದೆ ಅವರ ಅಭಿನಯ. ಹೃತಿಕ್ ಮುಂದೆ ಯಾಮಿ ಗೌತಮ್ ಅಭಿನಯ ಜಾಳಾಗಿದೆ. ಆಕೆಯ ಸೌಂದರ್ಯ ಮಾತ್ರ ಸಿನಿರಸಿಕರ ಕಣ್ಣು ಕುಕ್ಕುವಂತೆ ತೋರಿಸಲಾಗಿದೆ. ಕಾರ್ಪೊರೇಟರ್ ಮಾಧವ್‌ರಾವ್ ಸೆಲ್ಲರ್ ಪಾತ್ರದಲ್ಲಿ ರೋನಿತ್ ರಾಯ್, ಅಮಿತ್ ಪಾತ್ರದಲ್ಲಿ ರೋಹಿತ್ ರಾಯ್ ಗಮನ ಸೆಳೆಯುತ್ತಾರೆ. ಕ್ಲಬ್ ನೃತ್ಯದಲ್ಲಿ ಉರ್ವಶಿ ರೌಟೆಲ್ ನೃತ್ಯಪಡ್ಡೆಗಳಿಗೆ ಮಾತ್ರ ಇಷ್ಟ. ಕಲಾವಿದರ ನಟನೆಯ ಹಾಗೆ ಈ ಚಿತ್ರ ಹೆಚ್ಚು ಆಕರ್ಷಣೆ ಹುಟ್ಟಿಸುವುದು ತಂತ್ರಜ್ಞರ ಕೆಲಸದಲ್ಲಿ. ಟೈಟಲ್ ಸಾಂಗ್ ಮೂಲಕ ಪ್ರೇಕ್ಷಕರಲ್ಲಿ ಸಂಚಲನ ಹುಟ್ಟಿಸುತ್ತಾರೆ ಸಂಗೀತ ನಿರ್ದೇಶಕ ರಾಜೇಶ್ ರೋಷನ್. ಉಳಿದ ಹಾಡುಗಳು ಅಷ್ಟಕಷ್ಟೆ. ಸುದೀಪ್ ಚಟರ್ಜಿ ಛಾಯಾಗ್ರಹಣ, ರಸೂಲ್ ಪೂಕುಟ್ಟಿ ಸೌಂಡ್ ಕೂಡ ಚಿತ್ರಕ್ಕೆ ಮೆರಗು ನೀಡಿವೆ.ಅದ್ಭುತವೇ ಎನ್ನಲಾಗದಿದ್ದರೂ ಒಮ್ಮೆ ನೋಡಿ ಬಂದಿದ್ದು ಒಂದಷ್ಟು ದಿನ ಕಾಡಿಸುವ ಗುಣವಂತೂ ಈ ಚಿತ್ರಕ್ಕಿದೆ. ಆ ಮಟ್ಟಿಗೆ ಕಣ್ಣಿಲ್ಲದವರ ಬದುಕನ್ನು ಕಣ್ಣಿದ್ದವರೇ ನೋಡಬೇಕಿದೆ.

Comments are closed.