ಕರ್ನಾಟಕ

ಮಾಜಿ ಲೋಕಾಯುಕ್ತ ಭಾಸ್ಕರ್‌ರಾವ್‌ಗೆ ಷರತ್ತುಬದ್ಧ ಜಾಮೀನು

Pinterest LinkedIn Tumblr


ಬೆಂಗಳೂರು, ಜ. ೨೮- ಭ್ರಷ್ಟಾಚಾರ ನಿಯಂತ್ರಣಕ್ಕೆಂದೇ ತಲೆ ಎತ್ತಿದ್ದ ಲೋಕಾಯುಕ್ತ ಸಂಸ್ಥೆಯನ್ನು ಭ್ರಷ್ಟಾಚಾರದ ಕೂಪವನ್ನಾಗಿ ಮಾಡಿದ ಆರೋಪದಿಂದಾಗಿ ವ್ಯಾಪಕ ಟೀಕೆಗೊಳಗಾಗಿದ್ದ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಇಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಭ್ರಷ್ಟಾಚಾರ ಪ್ರಕರಣ ಸಂಬಂಧ ಇಂದು ಭಾಸ್ಕರ್ ರಾವ್ ಅವರಿಗೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಡಿ.ಟಿ. ದೇವೇಂದ್ರನ್ ಜಾಮೀನು ನೀಡಿದ್ದಾರೆ. 1 ಲಕ್ಷ ರೂ. ಬಾಂಡ್ ಹಾಗೂ ಇಬ್ಬರ ಖಾತ್ರಿ ಪಡೆದು ಜಾಮೀನು ನೀಡಲಾಗಿದೆ. ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದಾಗಲೀ ಅಥವಾ ಸಾಕ್ಷ್ಯ ನಾಶಮಾಡುವ ಪ್ರಯತ್ನ ಮಾಡಬಾರದು ಎಂದು ವಿಶೇಷ ನ್ಯಾಯಾಲಯ ಷರತ್ತು ವಿಧಿಸಿದೆ. ಪ್ರಕರಣ ಕುರಿತ ವಿಚಾರಣೆಯನ್ನು ಫೆ. 16ಕ್ಕೆ ಮುಂದೂಡಲಾಗಿದೆ.
ಮೇಲ್ನೋಟಕ್ಕೆ ಭಾಸ್ಕರ್ ರಾವ್ ಅವರ ವಿರುದ್ಧದ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅವರ ಇಳಿವಯಸ್ಸನ್ನು ಪರಿಗಣಿಸಿ ನ್ಯಾಯಾಲಯ ಜಾಮೀನು ನೀಡಿದೆ. ವೈಯಕ್ತಿಕ ಕಾರಣಗಳಿಗಾಗಿ ಭಾಸ್ಕರ್ ರಾವ್ ನ್ಯಾಯಾಲಯಕ್ಕೆ ಹಾಜರಾಗಿಲ್ಲ ಎಂದು ಅವರ ಪರ ವಕೀಲರು ತಿಳಿಸಿದ್ದಾರೆ.
ತಮ್ಮ ವಿರುದ್ಧ ವಿಶೇಷ ತನಿಖಾದಳ ಸಲ್ಲಿಸಿದ್ದ ಆರೋಪಪಟ್ಟಿಯನ್ನು ರದ್ದುಪಡಿಸಬೇಕೆಂದು ನಿವೃತ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಹೈಕೋರ್ಟ್ ಮೊರೆ ಹೋಗಿದ್ದರು. ಈ ಕುರಿತ ಅರ್ಜಿಯನ್ನು ವಜಾಗೊಳಿಸಿದ್ದ ಹೈಕೋರ್ಟ್, ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲೇ ವಿಚಾರಣೆ ನ‌ಡೆಸುವಂತೆ ಸೂಚಿಸಿತ್ತು.
ಭಾಸ್ಕರ್ ರಾವ್ ಲೋಕಾಯುಕ್ತರಾಗಿದ್ದ ಸಂದರ್ಭದಲ್ಲಿ ಅವರ ಅಧಿಕಾರವನ್ನು ಬಳಸಿಕೊಂಡು ಅವರ ಪುತ್ರ ಅಶ್ವಿನ್ ರಾವ್, ಭ್ರಷ್ಟಾಚಾರ ಎಸಗಿದ್ದಾರೆ. ಇದಕ್ಕೆ ಭಾಸ್ಕರ್‌ರಾವ್ ಅವರ ಕುಮ್ಮಕ್ಕು ಇತ್ತು ಎಂದು ವಿಶೇಷ ತನಿಖಾದಳ ಆರೋಪಪಟ್ಟಿ ಸಲ್ಲಿಸಿತ್ತು. ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾದಳ ಅಶ್ವಿನ್ ರಾವ್ ಮತ್ತಿತರರನ್ನು ಬಂಧಿಸಿತ್ತು.
ಇದಾದ ಬಳಿಕ ಲೋಕಾಯುಕ್ತ ವಿಶೇಷ ನ್ಯಾಯಾಲಯ ಭಾಸ್ಕರ್ ರಾವ್ ಅವರಿಗೂ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು. ಅನಾರೋಗ್ಯದ ಕಾರಣ ನೀ‌ಡಿ ಹಲವಾರು ಬಾರಿ ನ್ಯಾಯಾಲಯಕ್ಕೆ ಹಾಜರಾಗುವುದನ್ನು ತಪ್ಪಿಸಿಕೊಂಡಿದ್ದ ಭಾಸ್ಕರ್ ರಾವ್, ನ್ಯಾಯಾಲಯದ ಒತ್ತಡಕ್ಕೆ ಮಣಿದು ಒಮ್ಮೆ ನ್ಯಾಯಾಲಯದ ಮುಂದೆ ಹಾಜರಾಗಿದ್ದರು.
ಭ್ರಷ್ಟಾಚಾರ ಆರೋಪ ಕೇಳಿ ಬಂದ ನಂತರ ಭಾಸ್ಕರ್ ರಾವ್ ತಮ್ಮ ಅಧಿಕಾರಕ್ಕೆ ಅಂಟಿಕೊಂಡಿದ್ದ ಸಂದರ್ಭದಲ್ಲಿ ಅವರ ರಾಜೀನಾಮೆಗೆ ಒತ್ತಾಯಿಸಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಸೇರಿದಂತೆ ಹಲವಾರು ಮಂದಿ ಭಾಸ್ಕರ್ ರಾವ್ ಧೋರಣೆ ಖಂಡಿಸಿ ಪ್ರತಿಭಟನೆ ನ‌‌ಡೆಸಿದ್ದರು.
ಪ್ರತಿಭಟನೆಗಳು ತಾರಕಕ್ಕೇರಿದ ಸಂದರ್ಭದಲ್ಲಿ ಅನಿವಾರ್ಯವಾಗಿ ಭಾಸ್ಕರ್ ರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Comments are closed.