ಮನೋರಂಜನೆ

ಸಿನೆಮಾದ ಹೆಸರು ಲೋ ಬಜೆಟ್!

Pinterest LinkedIn Tumblr


ನಿರ್ದೇಶಕನಾಗುವ ಕನಸು ಹೊತ್ತು ಗಾಂಧಿನಗರಕ್ಕೆ ಬರುವ ಹೊಸಬರಿಗೆ ಬರವಿಲ್ಲ. ಹೀಗೆ ಬಂದವರು ತಮ್ಮ ಕೈಗೆ ಸಿಕ್ಕ ನಿರ್ಮಾಕರಿಗೆ ಕಥೆ ಹೇಳಿದಾಗ, ‘ಚೆನ್ನಾಗಿದೆ, ಲೋ ಬಜೆಟ್‌ನಲ್ಲೇ ಸಿನಿಮಾ ಮಾಡೋಣ’ ಎಂದು ಹೇಳುವುದು ಸಾಮಾನ್ಯ. ಆರಂಭದಲ್ಲಿ ಹೊಸ ನಿರ್ದೇಶಕರು ಎದುರಿಸುವ ಇಂತಹ ಎಡರುತೊಡರುಗಳ ಎಳೆಯನ್ನಿಟ್ಟುಕೊಂಡು ತಯಾರಾಗುತ್ತಿರುವ ಚಿತ್ರ ‘ಲೋ ಬಜೆಟ್’.

ಮಂಜು ಹೆದ್ದೂರ್ ನಿರ್ದೇಶನದ ಚಿತ್ರಕ್ಕೀಗ ಮುಹೂರ್ತದ ಸಂಭ್ರಮ. ಕಿರುತೆರೆಯ ಧಾರಾವಾಹಿಗಳಿಗೆ ಕೆಲಸ ಮಾಡಿದ ಅನುಭವ ಇರುವ ಮಂಜು ಕಥೆ, ಚಿತ್ರಕಥೆ, ಸಾಹಿತ್ಯ ಬರೆದು ಮೊದಲ ಸಲ ಆ್ಯಕ್ಷನ್–ಕಟ್ ಹೇಳುತ್ತಿದ್ದಾರೆ. ಸಿನಿಮಾದೊಳಗೊಂದು ಸಿನಿಮಾ ಮಾಡುವ ಕಥೆಯನ್ನು ತಮ್ಮದೇ ಶೈಲಿಯಲ್ಲಿ ತೋರಿಸಲು ಅವರು ಮುಂದಾಗಿದ್ದಾರೆ.

‘ಸಿನಿಮಾ ಮಾಡಲು ಮುಂದಾಗುವ ನಿರ್ದೇಶಕನೊಬ್ಬ ಅನುಭವಿಸುವ ಪರಿಪಾಟಲು, ಸವಾಲು – ಇವೆಲ್ಲವನ್ನೂ ಹಾಸ್ಯ ಮತ್ತು ಸಸ್ಪೆನ್ಸ್ ಆಗಿ ತೋರಿಸಲು ಮುಂದಾಗಿದ್ದೇನೆ. ಜೊತೆಗೆ, ಕೆಲವು ಗಂಭೀರ ವಿಷಯವನ್ನೂ ಟಚ್ ಮಾಡಿದ್ದೇನೆ. ಇದಕ್ಕಿಂತ ಹೆಚ್ಚಾಗಿ ಹೇಳಿದರೆ, ಕಥೆಯ ಗುಟ್ಟು ರಟ್ಟಾಗುತ್ತದೆ’ ಎಂದು ಮಂಜು ನುಣುಚಿಕೊಂಡರು.

ಚಿತ್ರಕ್ಕೆ ಅಕ್ಷಯ್ ಮತ್ತು ಮನು ಹೆಗಡೆ ನಾಯಕರಾದರೆ, ಮುಂಬೈ ಮೂಲದ ಲೇಖಾ ನಾಯಕಿ. ಬಾಲಿವುಡ್‌ ಚಿತ್ರ ‘ಬಾಜಿರಾವ್ ಮಸ್ತಾನಿ’ಯಲ್ಲಿ ಖಳನಾಗಿ ಕಾಣಿಸಿಕೊಂಡಿದ್ದ ಸುಕು ರಾಣಾ ಚಿತ್ರದ ನೆಗೆಟಿವ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಅವರಿಗೆ ಸರ್ದಾರ್ ಸತ್ಯ ಸಾಥ್ ನೀಡುತ್ತಿದ್ದಾರೆ. ‘ತಿಥಿ’ಯ ತಮ್ಮಣ್ಣ ಕೂಡ ನಟಿಸಿದ್ದಾರೆ. ಕಾರ್ತಿಕ್ ಶರ್ಮ ಸಂಗೀತ ನಿರ್ದೇಶನ, ಹರ್ಷ ಮತ್ತು ಅನಂತಪದ್ಮನಾಭ ಸಂಭಾಷಣೆಯ ಹೊಣೆ ವಹಿಸಿಕೊಂಡಿದ್ದಾರೆ. ಅಜಿತ್ ಸುವರ್ಣ ಕ್ಯಾಮೆರಾ ಹಿಡಿದಿದ್ದಾರೆ.

ಕುಮಾರ್ ಎನ್. ಬಂಗೇರಾ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಮರಾಠಿ ನಂಟು ಹೊಂದಿರುವು ಅವರು, ಆ ಭಾಷೆಯಲ್ಲೂ ಚಿತ್ರವನ್ನು ನಿರ್ಮಿಸುತ್ತಿದ್ದು, ಮಂಜು ಅವರೇ ನಿರ್ದೇಶನ ಮಾಡಲಿದ್ದಾರೆ. ಬೆಂಗಳೂರು, ಮುಂಬೈ, ತೀರ್ಥಹಳ್ಳಿಯಲ್ಲಿ ಚಿತ್ರೀಕರಣ ನಡೆಸಲು ನಿರ್ದೇಶಕರು ಯೋಜನೆ ಹಾಕಿಕೊಂಡಿದ್ದಾರೆ.

Comments are closed.