ಮನೋರಂಜನೆ

ಬೆಂಗಳೂರು: ತ್ರಿವೇಣಿ ಚಿತ್ರಮಂದಿರಕ್ಕೆ ಮರುಜೀವ

Pinterest LinkedIn Tumblr


ಬೆಂಗಳೂರು: ಸಿಲಿಕಾನ್‌ ಸಿಟಿಯ ಹೃದಯ ಭಾಗದಲ್ಲಿರುವ ತ್ರಿವೇಣಿ ಚಿತ್ರ​ಮಂದಿರಕ್ಕೆ ಮರು ಜೀವ ಬಂದಿದೆ. ಒಂದೂವರೆ ವರ್ಷದ ಹಿಂದೆ ಇದ್ದಕ್ಕಿದ್ದಂತೆ ಪ್ರದರ್ಶನ ಸ್ಥಗಿತ​ಗೊಳಿ​ಸಿದ್ದ ತ್ರಿವೇಣಿ ಚಿತ್ರಮಂದಿರ ಕೊನೆ​ಗೂ ಸಿನಿಮಾ ಪ್ರದರ್ಶನಕ್ಕೆ ಸಜ್ಜಾಗಿದೆ.
ಹಳೇ ಚಿತ್ರಮಂದಿರಕ್ಕೆ ಹೊಸ ರೂಪ ಕೊಟ್ಟು ನವೀಕರಣ ಮಾಡಿರುವ ತ್ರಿವೇಣಿಗೆ ಭಾನುವಾರ ಪೂಜೆ ನಡೆಯ​ಲಿದ್ದು, ಮೊದಲ ಪ್ರದರ್ಶನ​ವಾಗಿ ಡಾ.ರಾಜ್‌’ಕುಮಾರ್‌ ಅಭಿನಯದ ‘ಬಬ್ರು​ವಾಹನ’ ಸಿನಿಮಾ ಪ್ರದರ್ಶನಗೊಳ್ಳಲಿದೆ. ಭಾನುವಾರದಿಂದ ಬುಧ​ವಾರದವರೆ​ಗೂ ವರನಟ ಡಾ.ರಾಜ್‌’ಕುಮಾರ್‌ ಸಿನಿಮಾ ಪ್ರದರ್ಶನವಾಗಲಿದ್ದು, ಬುಧವಾರದಿಂದ ಬೇರೆ ಭಾಷೆಯ ಚಿತ್ರಗಳು ಪ್ರದರ್ಶನ​ವಾಗಲಿವೆ. ಆ ಮೂಲಕ ಅಧಿಕೃತವಾಗಿ ತ್ರಿ​ವೇಣಿ ಚಿತ್ರಮಂದಿರಕ್ಕೆ ಚಾಲನೆ ಸಿಗಲಿದೆ.
‘2ಕೆ ರಿಸೊಲ್ಯೂಷನ್’ ಪರದೆ ಹೊಂದಿರುವ ಈ ಚಿತ್ರಮಂದಿರದಲ್ಲಿ ಹೃತಿಕ್‌ ರೋಷನ್‌ ಹಾಗೂ ಯಾಮಿ ಗೌತಮ್‌ ಜೋಡಿಯಾಗಿ ನಟಿಸಿರುವ ‘ಕಾಬಿಲ್‌’ ಸಿನಿಮಾ ತೆರೆ ಕಾಣುತ್ತಿದ್ದು, ಈ ಚಿತ್ರದ ನಂತರ ತ್ರಿವೇಣಿಯಲ್ಲಿ ಬೇರೆ ಭಾಷೆಯ ಸಿನಿಮಾಗಳೇ ಪ್ರಮುಖವಾಗಿ ಪ್ರದರ್ಶನಗೊಳ್ಳಲಿವೆ. ಚಿತ್ರಮಂದಿರಗಳೇ ಕಡಿಮೆ ಆಗುತ್ತಿರುವ ಹೊತ್ತಿನಲ್ಲಿ ಪ್ರದರ್ಶನ ಸ್ಥಗಿತಗೊಳಿಸಿದ್ದ ಚಿತ್ರಮಂದಿರವೊಂದು ಮತ್ತೆ ಪ್ರದರ್ಶನಕ್ಕೆ ಸಜ್ಜಾಗಿರುವುದು ಸಿನಿಪ್ರಿಯರಲ್ಲಿ ಸಂತಸ ಮೂಡಿಸಿದೆ. ಜತೆಗೆ ಚಿತ್ರರಂಗಕ್ಕೆ ಮತ್ತೊಂದು ಚಿತ್ರಮಂದಿರ ದಕ್ಕಿದಂತೆ ಆಗಿದೆ.

Comments are closed.