ಮನೋರಂಜನೆ

ತಮ್ಮ ಸಿನೆಮಾ ಅಮರಾವತಿ ಕುರಿತು ನಿರ್ದೇಶಕ ಬಿ.ಎಂ. ಗಿರಿರಾಜ್

Pinterest LinkedIn Tumblr


‘ಭಯ ಆಗುತ್ತಿದೆ’.

‘ಅಮರಾವತಿ’ ಕುರಿತು ನಿರ್ದೇಶಕ ಬಿ.ಎಂ. ಗಿರಿರಾಜ್ ಮಾತಿಗಿಳಿದಾಗ ಮೊದಲು ವ್ಯಕ್ತಪಡಿಸಿದ್ದು – ನಿರ್ದೇಶಕನೊಬ್ಬನಿಗೆ ಅಚ್ಚರಿ ಮೂಡಿಸುವಂತಹ ಪ್ರತಿಕ್ರಿಯೆ ದೊರೆತಾಗ ಉಂಟಾಗುವ ನಿರೀಕ್ಷೆಗಳ ಭಾರ ಹೊರುವ ಸಹಜ ತಳಮಳವನ್ನು.

‘ಅಮರಾವತಿ’ ಚಿತ್ರದ ಟ್ರೇಲರ್ ನೋಡಿದವರು ಮೆಚ್ಚಿಕೊಳ್ಳುತ್ತಿದ್ದಾರೆ. ಇದುವರೆಗಿನ ಸಿನಿಮಾಗಳ ಟ್ರೇಲರ್‌ಗಳು ನಾಯಕನ ವೈಭವೀಕರಣ ಅಥವಾ ತಾಂತ್ರಿಕ ಪ್ರಯೋಗಗಳ ಕಾರಣ ಗಮನ ಸೆಳೆಯುತ್ತಿದ್ದವು. ಆದರೆ, ಅಪರೂಪಕ್ಕೆ ಚಿತ್ರದ ವಸ್ತುವೂ ಚರ್ಚೆಗೆ ಒಳಗಾಗುತ್ತಿದೆ. ಗಿರಿರಾಜ್, ‘ಅಮರಾವತಿ’ಯಲ್ಲಿ ಹೇಳ ಹೊರಟಿರುವುದು ನಮ್ಮೆದುರಿಗೆ ಕಾಣುವ, ಅಷ್ಟೇ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕಾರ್ಮಿಕ ಸಮುದಾಯವೊಂದರ ಕಥೆಯನ್ನು.
‘ನನ್ನ ವೃತ್ತಿ ಬದುಕಿನ ಸಿನಿಮಾಗಳಲ್ಲಿ ಟ್ರೇಲರ್ ವೀಕ್ಷಣೆ ಐದಾರು ಸಾವಿರ ದಾಟಿರಲಿಲ್ಲ. ಈ ಟ್ರೇಲರ್ ಇಷ್ಟೆಲ್ಲಾ ವೀಕ್ಷಣೆಗೆ ಒಳಗಾಗಿರುವುದು ಹೀಗೂ ಆಗುತ್ತದಾ ಎಂಬ ಅಚ್ಚರಿ, ವಿಚಿತ್ರ ಖುಷಿ–ತಳಮಳದ ಅನುಭವ ಹುಟ್ಟಿಸಿದೆ’ ಎನ್ನುತ್ತಾರೆ ಅವರು.

‘ಅಮರಾವತಿ’ ಗಿರಿರಾಜ್ ಅವರ ಬದುಕಿನ ಮೂಸೆಯಿಂದಲೇ ಒಡಮೂಡಿದ ಕಥೆ. ಅತಿ ಸಮೀಪದಿಂದ ಪೌರ ಕಾರ್ಮಿಕರ ಬದುಕನ್ನು ಕಂಡವರು ಅವರು. ಕಾರ್ಮಿಕರ ಹಕ್ಕುಗಳಿಗಾಗಿ ನೂರಾರು ಹೋರಾಟ, ಪ್ರತಿಭಟನೆಗಳನ್ನು ನಡೆಸಿದವರು. ‘ಆಗ ನಾವು ಯಾರೆಂದು ಯಾರಿಗೂ ಗೊತ್ತಿರಲಿಲ್ಲ. ಹತ್ತಿರದಿಂದ ನೋಡಿ, ನಾವೂ ಅನುಭವಿಸಿದ ನೋವು ಇರುತ್ತದೆಯಲ್ಲ, ಅದರ ಕಥೆಯನ್ನು ಹೇಳಬೇಕೆನಿಸುತ್ತದೆ. ಈ ಕಾರ್ಮಿಕರ ಕುರಿತು ಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾಗಿವೆ. ಆದರೆ ಟಿ.ವಿ. ವಾಹಿನಿಗಳು ಅಥವಾ ಸಿನಿಮಾಗಳು ಅವರ ಸಂಕಷ್ಟಗಳನ್ನು ಪರಿಗಣಿಸಿಲ್ಲ. ಕನ್ನಡದ ಸಿನಿಮಾಗಳಲ್ಲಂತೂ ಇವರ ಬದುಕು ಬಂದಿಲ್ಲ. ಭಾರತದ ಕಾರ್ಮಿಕ ವ್ಯವಸ್ಥೆ ಬಗ್ಗೆ ಮೂರು ಸರಣಿ ಸಿನಿಮಾ ಮಾಡೋಣ ಎಂದು ಹೊರಟಿದ್ದೆ. ಆದರೆ, ಮೊದಲ ಚಿತ್ರವೇ ಸಾಕಷ್ಟು ಹೈರಾಣಾಗಿಸಿತು’.

‘ಯಾವುದೇ ಕೃಷಿ ಭೂಮಿಯಲ್ಲಿ ಕೃಷಿ ಕಾರ್ಮಿಕರ ಲಭ್ಯತೆ ಬಹು ಮುಖ್ಯ. ಇಂದು ಅವರಿಲ್ಲದೆ ಇಡೀ ಕೃಷಿ ವ್ಯವಸ್ಥೆ ಹದಗೆಡುತ್ತಿದೆ. ಹಾಗೆಯೇ ಪೌರ ಕಾರ್ಮಿಕರಿಲ್ಲದೆ ನಗರದ ಭವ್ಯತೆ ಉಳಿಯಲಾರದು. ಪೌರ ಕಾರ್ಮಿಕರು 2012ರಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪಟ್ಟು ಹಿಡಿದು ಮೂರು ದಿನ ಕಸ ತೆಗೆದಿರಲಿಲ್ಲ. ಇಡೀ ಬೆಂಗಳೂರು ಕಸದಿಂದ ತುಂಬಿತ್ತು. ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಂದು ಮಾಡಿದ ಪ್ರತಿಭಟನೆಯ ಪರಿಣಾಮ ಇಂದಿನವರೆಗೂ ಇದೆ. ಮೂರು ದಿನ ಕೆಲಸ ಮಾಡದೆಯೇ ಇರುವುದರಿಂದ ಉದ್ಭವಿಸಿದ ತೊಂದರೆ, ನಾಲ್ಕೈದು ವರ್ಷವಾದರೂ ಬಗೆಹರಿದಿಲ್ಲ ಎಂದರೆ ಅವರ ಕೆಲಸ ಮತ್ತು ಕಾರ್ಮಿಕ ಶಕ್ತಿಯ ಬೆಲೆ ಏನು ಎಂದು ಗೊತ್ತಾಗುತ್ತದೆ. ಅವರ ಬಗ್ಗೆ ಯಾರೂ ಕಾಳಜಿ ಮಾಡುವುದಿಲ್ಲ. ಅವರನ್ನು ಕೀಳಾಗಿ ನೋಡುವ ಮಧ್ಯಮವರ್ಗದ ಹಿಪೊಕ್ರಸಿ ಇವೆಲ್ಲವೂ ಕಾಡಿ, ಮಾಡುವುದಾದರೆ ಇಂತಹ ಸಿನಿಮಾ ಮಾಡೋಣ ಎಂದು ಮಾಡಿದ್ದು. ಅವುಗಳ ಹೋರಾಟದ ಭಾಗವಾಗಿ ಮತ್ತು ಕಲಾವಿದರಾಗಿ ನಮ್ಮ ಕಣ್ಣಿನಿಂದ ನೋಡೋಣ ಎಂದೆನಿಸಿತು’ ಎಂದು ಅವರು ಸಿನಿಮಾ ಸಾಹಸಕ್ಕೆ ಕೈ ಹಾಕಿದ ಕಾರಣ ವಿವರಿಸುತ್ತಾರೆ.

‘ಆರಂಭದಿಂದಲೂ ತುಂಬಾ ಭಯ ಇತ್ತು. ಸಿನಿಮಾ ಆರಂಭದಿಂದ ತೆರೆ ಕಾಣಿಸುವವರೆಗೂ ಹೇಗೆ ಸಾಗುತ್ತದೆ, ಹೇಗೆ ಸ್ವೀಕರಿಸುತ್ತಾರೆ ಎಂದು. ಒಳ್ಳೆಯ ಸಿನಿಮಾ, ವಸ್ತು ಎಂಬುದು ಜನರ ಮನಸಿನಲ್ಲಿ ಇದೆ. ಅದರ ಪರಿಣಾಮವೇ ಟ್ರೇಲರ್‌ಗೆ ಇಷ್ಟು ಮೆಚ್ಚುಗೆ ಸಿಕ್ಕಿದೆ.

ಇದು ಕಣ್ಣೆದುರೇ ಕಂಡ, ಕೇಳಿದ ಹತ್ತಾರು ನೈಜ ಘಟನೆಗಳು ಸಿನಿಮಾ ಪ್ರಸ್ತುತಿ. ‘ಅಮರಾವತಿ’ಯಲ್ಲಿ ಕಾಣುವ ಸಿನಿಮಾ ಅಂಶವೆಂದರೆ ಪ್ರೆಸೆಂಟೇಷನ್ ಅಷ್ಟೇ. ನಿರಂತರ ಪತ್ರಿಕೆ ಓದುವವರಿಗಂತೂ ಇದರಲ್ಲಿನ ವಾಸ್ತವ ಯಾವುದು, ಕಲ್ಪನೆ ಯಾವುದು ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಹೊಡೆದಾಟದ ಸನ್ನಿವೇಶದಂತಹ ಕೆಲವೆಡೆ ಮಾತ್ರ ಸಿನಿಮೀಯ ಅಂಶಗಳಿವೆ. ಅದನ್ನು ಹೊರತುಪಡಿಸಿದರೆ, ಅಕ್ಕಪಕ್ಕದಲ್ಲಿ ಇರುವವರು ನೋವು ತೋಡಿಕೊಂಡಾಗ ಸಾಕ್ಷಿಗಳಾಗಿ ಇದ್ದೆವಲ್ಲ, ಅವುಗಳೇ ಸಿನಿಮಾದಲ್ಲಿವೆ’ ಎಂದು ವಾಸ್ತವದ ನೆಲೆಗಟ್ಟಿನ ಮೇಲೆಯೇ ಸಿನಿಮಾ ಕಟ್ಟಿರುವ ಸೂಚನೆ ನೀಡುತ್ತಾರೆ.

‘ಎಲ್ಲ ಬಗೆಯ ಪೌರಕಾರ್ಮಿಕರನ್ನೂ ಒಂದು ಸಿನಿಮಾದ ತೆಕ್ಕೆಯೊಳಗೆ ವಿಸ್ತಾರವಾಗಿ ತೆರೆದಿಡಲು ಆಗುವುದಿಲ್ಲ. ಒಂದೊಂದು ವರ್ಗದ ಮೇಲೂ ಹತ್ತು ಸಿನಿಮಾ ಮಾಡಬಹುದು. ಅಷ್ಟು ವಸ್ತುಗಳಿವೆ. ಇಲ್ಲಿ ಎಲ್ಲ ಸಂಗತಿಗಳನ್ನೂ ಸ್ವಲ್ಪ ಸ್ವಲ್ಪ ತೆಗೆದುಕೊಂಡಿದ್ದೇವೆ. ಎಲ್ಲವನ್ನೂ ಹೇಳುವ ಪ್ರಯತ್ನ ಮಾಡಿದ್ದೇವೆ. ಒಂದು ಪೌರ ಕಾರ್ಮಿಕ ಕುಟುಂಬ, ಅವರಿಂದ ಸಮಾಜದ ಮೇಲೆ ಮತ್ತು ಸಮಾಜದಿಂದ ಅವರ ಮೇಲಾಗುವ ಪರಿಣಾಮ, ಅದಕ್ಕೆ ನಮ್ಮ ಹೊಣೆಗಾರಿಕೆಯನ್ನು ವಿವರಿಸುತ್ತದೆ’ ಎಂದು ‘ಅಮರಾವತಿ’ಯ ಕಥನಭಿತ್ತಿಯ ಕುರಿತು ಹೇಳುತ್ತಾರೆ.

ಶೌಚ ಗುಂಡಿಯನ್ನು ಶುದ್ಧಗೊಳಿಸುವ ಕಾರ್ಮಿಕನ ಪಾತ್ರದಲ್ಲಿ ನಟಿಸಿರುವ ಅಚ್ಯುತಕುಮಾರ್ ಅವರ ಅಭಿನಯ ಬದ್ಧತೆ ಮತ್ತು ಪ್ರಬುದ್ಧತೆ ಗಿರಿರಾಜ್‌ ಅವರನ್ನು ಬೆರಗುಗೊಳಿಸಿದೆ. ‘ಒಬ್ಬ ನಟ ತಮ್ಮನ್ನು ಯಾವಾಗ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುತ್ತಾನೋ ಆಗ ಇಂತಹ ಪಾತ್ರ ಸೃಷ್ಟಿಗೆ ಅರ್ಥ ಸಾಧ್ಯವಾಗುತ್ತದೆ’ ಎಂದು ಅವರು ಪ್ರಶಂಸಿಸುತ್ತಾರೆ.

‘ಅಮರಾವತಿ ನನ್ನ ವೃತ್ತಿ ಬದುಕಿನ ಅತಿ ಪ್ರಾಮಾಣಿಕ ಸಿನಿಮಾ. ತುಂಬಾ ನಂಬಿಕೊಂಡು ಈ ಸಿನಿಮಾ ಮಾಡಿದ್ದೇನೆ. ಅದರ ಹಿಂದಿನ ಕಾಳಜಿಯೂ ತೀವ್ರವಾಗಿದೆ’ ಎನ್ನುತ್ತಾರೆ ಗಿರಿರಾಜ್‌.

ಸೈದ್ಧಾಂತಿಕ ಸಂಘರ್ಷ ಮತ್ತು ವ್ಯವಸ್ಥೆಯೆಡೆಗಿನ ಆಕ್ರೋಶ ಗಿರಿರಾಜ್‌ರ ‘ಜಟ್ಟ’ ಚಿತ್ರದಲ್ಲಿ ವ್ಯಕ್ತವಾಗಿತ್ತು. ಇಲ್ಲಿಯೂ ಆ ಸಿಟ್ಟಿದೆ. ಆದರೆ ಅದಕ್ಕೆ ತಾಳ್ಮೆಯೂ ಬೆರೆತಿದೆ. ಸಮಸ್ಯೆಗಳಿಗೆ ಪರಿಹಾರ ನೀಡುವ ಮಾರ್ಗವನ್ನೂ ಅವರು ತೋರಿಸಿದ್ದಾರೆ. ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಸಾಧ್ಯ. ಆದರೆ ಯಾವ ವೆಚ್ಚಕ್ಕೆ ಎನ್ನುವುದು ಎಂಬುದು ಪ್ರಶ್ನೆಯಾಗುತ್ತದೆ. ಹೋರಾಟದ ಹಂತಗಳಲ್ಲಿ ಕಾರ್ಮಿಕರೂ ಇವರೂ ಗೆದ್ದಿದ್ದಾರೆ. ಆ ಗೆಲುವಿನ ಹಂತಗಳನ್ನು ಇಲ್ಲಿ ತೋರಿಸಿದ್ದಾರೆ.
ಈಗಾಗಲೇ ಸಿನಿಮಾ ಪೂರ್ಣಗೊಳಿಸಿರುವ ಗಿರಿರಾಜ್‌ ಅವರಿಗೆ ‘ಯುಟ್ಯೂಬ್‌’ನಲ್ಲಿ ಸಿಗುವ ಟ್ರೆಂಡಿಂಗ್‌ ಚಿತ್ರಮಂದಿರಕ್ಕೂ ಸಿಗಬಹುದೇ ಎಂಬ ಆಸೆಯಿದೆ. ಈ ಸಿನಿಮಾ ಗೆದ್ದರೆ ಈ ಮಾದರಿಯ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಲು ಇನ್ನಷ್ಟು ಜನ ಮುಂದೆ ಬರಬಹುದು ಎಂಬ ಸದುದ್ದೇಶವೂ ಅವರಿಗಿದೆ. ‘ನೋಡಿ ಮಾಡಿ ಪೆಟ್ಟು ತಿಂದ. ಬೇಕಾಗಿತ್ತಾ ಇವೆಲ್ಲ’ ಎಂದು ಆಡಿಕೊಳ್ಳುವಂತೇ ಆಗಬಹುದೇ ಎಂಬ ಭಯವೂ ಅವರನ್ನು ಕಾಡುತ್ತಿದೆ.

‘ವಲಸೆ ಕಾರ್ಮಿಕರ ಬಗ್ಗೆಯೂ ಒಂದು ಸಿನಿಮಾ ಮಾಡಬೇಕು. ಅಲ್ಲಿ ಉಪದೇಶ ಇರಬಾರದು. ಎಂಟರ್‌ಟೈನ್‌ಮೆಂಟ್‌ ಕೂಡ ಇರಬೇಕು. ಹಾಗೆಂದರೆ ಮನರಂಜನೆ ಅಲ್ಲ. ಥ್ರಿಲ್‌ ಅಥವಾ ಎಚ್ಚರಗೊಳಿಸುವ ಭಾವ ಇರುತ್ತದೆಯಲ್ಲ, ಅದು. ಸಂಪೂರ್ಣ ಗ್ರ್ಯಾಂಡ್‌ ಆಗಿರಬೇಕು ಎನ್ನುವುದನ್ನು ಮನಸಿನಲ್ಲಿ ಇಟ್ಟುಕೊಂಡೇ ಈ ಸಿನಿಮಾ ಮಾಡಿರುವುದು ಎಂದು ಹೇಳುತ್ತಾರೆ.

Comments are closed.