ಮನೋರಂಜನೆ

‘ಗೌತಮೀಪುತ್ರ ಶಾತಕರ್ಣಿ’ ನನ್ನ ಜೀವನದ ಅನುಭವ ಬದಲಿಸಿದ ಸಿನಿಮಾ: ನಟಿ ಶ್ರೇಯಾ ಶರಣ್‌

Pinterest LinkedIn Tumblr


‘ಗೌತಮೀಪುತ್ರ ಶಾತಕರ್ಣಿ’ ಸಿನಿಮಾ ನನ್ನ ಜೀವನದ ಅನುಭವವನ್ನೇ ಬದಲಿಸಿದ ಸಿನಿಮಾ ಎಂದು ಟಾಲಿವುಡ್‌ ನಟಿ ಶ್ರೇಯಾ ಶರಣ್‌ ಹೇಳಿಕೊಂಡಿದ್ದಾರೆ. ಶಾತವಾಹನರ ದೊರೆ ಗೌತಮೀಪುತ್ರ ಶಾತಕರ್ಣಿಯ ಕುರಿತು ತಯಾರಾಗಿರುವ ಐತಿಹಾಸಿಕ ಚಿತ್ರದಲ್ಲಿ ಶ್ರೇಯಾ ಶಾತಕರ್ಣಿಯ ಪತ್ನಿ ರಾಣಿ ವಸಿಷ್ಟ ದೇವಿಯಾಗಿ ಅಭಿನಯಿಸಿದ್ದಾರೆ.

‘ನಾನು ಇತಿಹಾಸ ಪದವೀಧರೆಯಾಗಿದ್ದರೂ ದೊರೆ ಶಾತಕರ್ಣಿಯ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಆದರೆ, ನಿರ್ದೇಶಕ ಕೃಷ್‌ ಹೇಳಿದ ಸಿನಿಮಾ ಕಥೆಯನ್ನು ಕೇಳಿದಾಗ ನಾನು ಶಾತಕರ್ಣಿಯ ಸಾಧನೆಗಳನ್ನು ತಿಳಿದು ಮೂಕವಿಸ್ಮಿತಳಾದೆ. ಬರೀ ನಾನಷ್ಟೇ ಅಲ್ಲ, ಚಿತ್ರದ ನಾಯಕ ಬಾಲಕೃಷ್ಣ ಅವರು ಕೂಡಾ ಈ ಸಿನಿಮಾದೊಂದಿಗೆ ಬಹುಭಾವುಕವಾಗಿ ಬೆಸೆದುಕೊಂಡಿದ್ದಾರೆ’ ಎಂದು ಶ್ರೇಯಾ ಸಿನಿಮಾ ಕುರಿತು ತಮ್ಮ ಅನುಭವ ಹೇಳಿಕೊಂಡಿದ್ದಾರೆ.

‘ನಮ್ಮ ಸಂಸ್ಕೃತಿ ಮತ್ತು ಅದರ ಬೇರುಗಳ ಬಗ್ಗೆ ನಾವು ಹೆಮ್ಮೆ ಪಡದಿದ್ದಲ್ಲಿ, ಭವಿಷ್ಯದ ಬಗ್ಗೆ ನಾವು ಆಶಾವಾದಿಯಾಗಿರಲು ಸಾಧ್ಯವಿಲ್ಲ ಎನ್ನುವುದು ನನ್ನ ನಂಬಿಕೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

‘ಈ ಸಿನಿಮಾದ ಚಿತ್ರೀಕರಣಕ್ಕಾಗಿ ಬಹಳಷ್ಟು ಕಡೆ ಪ್ರಯಾಣಿಸಿದ್ದೇವೆ. ಆದರೆ, ಸಿನಿಮಾದ ನಾಯಕಿ ವಸಿಷ್ಟ ದೇವಿಯಾಗಿ ನಾನು ಈ ಚಿತ್ರದಲ್ಲಿ ಬಹಳಷ್ಟು ಕಲಿತಿದ್ದೇನೆ.ಅದರಲ್ಲೂ ಈ ಪಾತ್ರದ ಮೂಲಕ ನನ್ನ ಸಾಮರ್ಥ್ಯವವನ್ನು ಅರಿತುಕೊಂಡಿದ್ದೇನೆ. ಈಗ ನಾನು ಹಿಂದಿನ ಶ್ರೇಯಾ ಅಲ್ಲ. ಒಟ್ಟಾರೆ ಈ ಸಿನಿಮಾ ನನ್ನ ಜೀವನವನ್ನೇ ಬದಲಿಸಿದ ಸಿನಿಮಾ ಎನ್ನಬಹುದು’ ಎಂದು ಶ್ರೇಯಾ ವಿವರಿಸಿದ್ದಾರೆ.

Comments are closed.