ಮನೋರಂಜನೆ

ಗೌತಮಿಪುತ್ರ ಶಾತಕರ್ಣಿ (ತೆಲುಗು) ಚಿತ್ರ ವಿಮರ್ಶೆ

Pinterest LinkedIn Tumblr


ಚಿತ್ರ: ಗೌತಮಿಪುತ್ರ ಶಾತಕರ್ಣಿ (ತೆಲುಗು)
ನಿರ್ಮಾಣ: ವೈ. ರಾಜೀವ್ ರೆಡ್ಡಿ, ಜಗರ್ಲಾಮುಡಿ ಸಾಯಿಬಾಬು, ಬಿಬೊ ಶ್ರೀನಿವಾಸ್
ನಿರ್ದೇಶನ: ಕ್ರಿಷ್
ತಾರಾಗಣ: ನಂದಮೂರಿ ಬಾಲಕೃಷ್ಣ, ಶ್ರಿಯಾ ಶರಣ್, ಹೇಮಾಮಾಲಿನಿ, ಕಬೀರ್ ಬೇಡಿ, ಶಿವರಾಜ್‌ಕುಮಾರ್

ಐತಿಹಾಸಿಕ ಹಾಗೂ ಪೌರಾಣಿಕ ಚಿತ್ರ ತಯಾರಿಯ ಸಾಹಸಕ್ಕೆ ತೆಲುಗು ಚಿತ್ರರಂಗ ಆಗೀಗ ಕೈಹಾಕುತ್ತಲೇ ಇದೆ. ಅಲ್ಲಿ ಈ ಪ್ರಭೇದಕ್ಕೆ ಸೇರಿದ ಬಹುತೇಕ ಸಿನಿಮಾಗಳು ಯಶಸ್ವಿಯಾಗಿರುವ ಮಾದರಿ ಇದೆ. ನಂದಮೂರಿ ಬಾಲಕೃಷ್ಣ ಅವರ ನೂರನೇ ಚಿತ್ರವಾಗಿ ‘ಗೌತಮಿಪುತ್ರ ಶಾತಕರ್ಣಿ’ಯನ್ನು ಐವತ್ತಾರು ವಯಸ್ಸಿನ ನಟನ ಚಿತ್ರಪ್ರೀತಿಯ ಕಿಡಿಯಾಗಿ ನೋಡಬೇಕು. ಐತಿಹಾಸಿಕ ಚಿತ್ರಗಳಿಗೆ ಒದಗಬಹುದಾದ ರೋಮಾಂಚನಗಳಿಲ್ಲಿ ದುರ್ಬಲವಾಗಲು ಅವರ ವಯಸ್ಸೂ ಕಾರಣವಿರಬಹುದು.

ಶಾತವಾಹನ ದೊರೆ ಶಾತಕರ್ಣಿಯ ಮಾತೃಪ್ರೇಮ ಹಾಗೂ ಅದಕ್ಕೆ ತಳಕು ಹಾಕಿಕೊಂಡ ಯುದ್ಧದ ಹಸಿವಿನ ಕಥಾನಕವಿದು. ಅನುಕೂಲಕ್ಕೆಂದು ಚಿತ್ರಕಥೆಯನ್ನು ನಿರ್ದೇಶಕರು ವಿಂಗಡಿಸಿಕೊಂಡಿದ್ದಾರೆ. ಸಾಹಸ ದೃಶ್ಯಗಳು, ಹಾಡುಗಳು, ತುಸುವೇ ರೊಮ್ಯಾನ್ಸ್‌, ಮಹತ್ವದ ಸನ್ನಿವೇಶಗಳಲ್ಲಿ ವೀರಾವೇಶದ ಸಂಭಾಷಣೆಗಳು… ಹೀಗೆ ಜನಪ್ರಿಯ ಧಾಟಿಯ ಚಿತ್ರಗಳಿಗೆ ಇರಬೇಕೆಂದು ನಂಬಿದ ಎಲ್ಲವನ್ನೂ ನಿರ್ದೇಶಕ ಕ್ರಿಷ್ ದುಡಿಸಿಕೊಂಡಿದ್ದಾರೆ. ಅವೆಲ್ಲವುಗಳಲ್ಲಿ ತುಸು ದಣಿದಂಥ ದೇಹದ ಬಾಲಕೃಷ್ಣ ಇರುವುದನ್ನು ಮಿತಿ ಎಂದು ಒಪ್ಪಿಕೊಂಡೇ ಚಿತ್ರವನ್ನು ನೋಡಬೇಕು.

ಇಂಥ ಚಿತ್ರಗಳನ್ನು ಮಾಡುವಾಗ ದೊಡ್ಡ ಮಟ್ಟದ ಸಿದ್ಧತೆ ಬೇಕಾಗುತ್ತದೆ. ಬಜೆಟ್ ಕೂಡ ದೊಡ್ಡದೇ. ಈ ವಿಷಯದಲ್ಲಿ ನಿರ್ದೇಶಕರು ರಾಜಿಯಾಗಿಲ್ಲ. ಆದರೆ, ಯುದ್ಧದ ಸನ್ನಿವೇಶಗಳು ತೀವ್ರವಾಗಿಲ್ಲ. ಅದ್ದೂರಿತನ ಹಾಗೂ ತಾಂತ್ರಿಕ ಕೌಶಲದಿಂದ ಮಾತ್ರ ಯುದ್ಧದ ಭಾವಸಮುದ್ರ ತೋರಿಸುವುದು ಅಸಾಧ್ಯ ಎನ್ನುವುದಕ್ಕೆ ಈ ಸಿನಿಮಾ ಉದಾಹರಣೆ.

ಐತಿಹಾಸಿಕ ಚಿತ್ರಗಳ ಜೀವಾಳ ಸಂಭಾಷಣೆ. ಸಾಯಿ ಮಾಧವ ಬುರ್ರಾ ಬರೆದಿರುವ ಸಂಭಾಷಣೆಯಲ್ಲಿ ವೀರಾವೇಶಕ್ಕೆ ಒಂದಿಷ್ಟು ಅಂಕಗಳನ್ನೇನೋ ನೀಡಬಹುದು. ಅವನ್ನು ಬಾಲಕೃಷ್ಣ ಇನ್ನೂ ಹಸನಾಗಿ ಹೇಳಬೇಕಿತ್ತು. ಕ್ಯಾಮೆರಾ ಚಲನೆಯಿಂದಲೇ ದೃಶ್ಯದಲ್ಲಿನ ಸಾರಸಂಚಯ ಸಾಧ್ಯ ಎಂದು ನಂಬಿ, ಅದಕ್ಕಾಗಿಯೇ ಜ್ಞಾನಶೇಖರ್ ವಿ.ಎಸ್. ಒದ್ದಾಡಿರುವುದಕ್ಕೆ ದಂಡಿಯಾಗಿ ಉದಾಹರಣೆಗಳು ಸಿಗುತ್ತವೆ. ಸ್ಥಿರವಾಗಿ ಭಾವಗಳನ್ನು ಹಿಡಿದಿರುವುದಕ್ಕಿಂತ ಹೆಚ್ಚಾಗಿ ‘ಝೂಮ್ ಇನ್’, ‘ಝೂಮ್ ಔಟ್’ ತಂತ್ರ ನೆಚ್ಚಿಕೊಂಡಿರುವುದು ಇದನ್ನು ಪುಷ್ಟೀಕರಿಸುತ್ತದೆ.

ಈ ವಯಸ್ಸಿನಲ್ಲಿಯೂ ಶ್ರಮ ಬೇಡುವ ಹೋರಾಟದ ಸನ್ನಿವೇಶಗಳಲ್ಲಿ ಬಾಲಕೃಷ್ಣ ತೊಡಗಿಕೊಂಡಿರುವುದನ್ನು ಮೆಚ್ಚಬೇಕು. ಅವರ ಮುಖದಲ್ಲಿ ಕಾಂತಿ ಇರುವಂತೆ ಏಕೋಭಾವವೂ ಉಳಿದಿದೆ. ಅಗಲವಾದ ದೇಹದ ಸ್ನಾಯುಗಳು ಯುದ್ಧದ ಅಗತ್ಯಕ್ಕೆ ತಕ್ಕಷ್ಟು ಹುರಿಗೊಂಡಿಲ್ಲದಿರುವುದು ಲೋಪ. ಅದನ್ನು ಮರೆಮಾಚಲು ನೀತಾ ಲಲ್ಲಾ ತೊಡಿಸಿರುವ ಉಡುಗೆಗಳ ಕಾಣ್ಕೆಯನ್ನು ಮರೆಯಲಾಗದು.

ಅಭಿನಯದಲ್ಲಿ ಬಾಲಕೃಷ್ಣ ಅವರದ್ದು ತಮ್ಮದೇ ಹಳೆಯ ವರಸೆ. ಕನ್ನಡದ ನಟ ಶಿವರಾಜ್‌ಕುಮಾರ್ ಒಂದು ಹಾಡಿನಲ್ಲಿ ಮಾಡುವ ನೃತ್ಯ ಹೆಚ್ಚು ಕಾಲ ಕಾಡುವುದಿಲ್ಲ. ನಾಯಕಿ ಶ್ರಿಯಾ ಶರಣ್ ಗೀತೆಯೊಂದಕ್ಕೆ ಸೊಂಟ ಕುಣಿಸಿರುವುದರ ಔಚಿತ್ಯವನ್ನು ಪಕ್ಕಕ್ಕಿಟ್ಟರೆ, ಅಭಿನಯದಲ್ಲಿ ಅವರನ್ನು ಮೆಚ್ಚಿಕೊಳ್ಳಲೇಬೇಕು. ಹಿಂದಿ ನಟಿ ಹೇಮಾ ಮಾಲಿನಿ ಅವರದ್ದೂ ದಣಿದಂಥ ಅಭಿನಯ.

ತೆಲುಗಿನ ಇನ್ನೊಂದು ‘ಪ್ರಯೋಗಮುಖಿ’ ಧೋರಣೆಗೆ ಉದಾಹರಣೆಯಾಗುವ ‘…ಶಾತಕರ್ಣಿ’ಗೆ ಕಾಡುವ ಗುಣ ಇಲ್ಲದೇ ಇರುವುದು ನಿರೀಕ್ಷೆಯ ಭಾರದ ಫಲಿತ ಇರಬೇಕು.

Comments are closed.