ರಾಷ್ಟ್ರೀಯ

ಅಕ್ರಮ-ಸಕ್ರಮ ಯೋಜನೆಗೆ ಸುಪ್ರೀಂ ತಡೆಯಾಜ್ಞೆ

Pinterest LinkedIn Tumblr


ನವದೆಹಲಿ: ನಿಯಮ ಉಲ್ಲಂಘಿಸಿ ನಿರ್ವಿುಸಲಾದ ಕಟ್ಟಡಗಳನ್ನು ಕಾನೂನುಬದ್ಧಗೊಳಿಸುವ ರಾಜ್ಯ ಸರ್ಕಾರದ ಅಕ್ರಮ-ಸಕ್ರಮ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಶುಕ್ರವಾರ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.
ಡಿಸೆಂಬರ್ 13ರಂದು ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ನಮ್ಮ ಬೆಂಗಳೂರು ಪೌಂಡೇಶನ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಖೆಹರ್ ಸಿಂಗ್ ನೇತೃತ್ವದ ಪೀಠ, ಹೈಕೋರ್ಟ್ ಆದೇಶಕ್ಕೆ ತೀರ್ಪಿಗೆ ತಡೆಯಾಜ್ಞೆ ನೀಡಿ ಇಡೀ ಯೋಜನೆ ಕುರಿತು ಸುದೀರ್ಘ ವಿಚಾರಣೆ ನಡೆಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ ನ್ಯಾಯಾಲಯದ ತಡೆಯಾಜ್ಞೆ ಇರುವವರೆಗೂ ಅಕ್ರಮ-ಸಕ್ರಮ ಯೋಜನೆಯ ಯಾವುದೇ ಅರ್ಜಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಬಾರದೆಂದು ಸರ್ಕಾರಕ್ಕೆ ಕೋರ್ಟ್ ಸೂಚನೆ ನೀಡಿದೆ.
ಈಗಾಗಲೇ ನಗರ ಪ್ರದೇಶಗಳಲ್ಲಿ ನಿರ್ಮಿಸಿಕೊಂಡಿರುವ ಕಟ್ಟಡಗಳನ್ನು ತೆರವುಗೊಳಿಸುವ ಬದಲು ಪ್ರದೇಶವಾರು ಶುಲ್ಕ ವಿಧಿಸಿ ಕಾನೂನು ಬದ್ಧಗೊಳಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ನ್ಯಾಯಪೀಠಕ್ಕೆ ಸರ್ಕಾರದ ಪರ ವಕೀಲ ಬಸವ ಪ್ರಭುಪಾಟೀಲ್ ವಾದ ಮಂಡಿಸಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲ ಅಭಿಷೇಕ್ ಮನುಸಿಂಗ್ವಿ ಅವರು, ಸರ್ಕಾರದ ಈ ಯೋಜನೆ ಅವೈಜ್ಞಾನಿಕವಾಗಿದೆ. ಸರ್ಕಾರಿ ಭೂಮಿಯಲ್ಲಿ ಕಟ್ಟಡಗಳನ್ನು ನಿರ್ಮಿಸಿಕೊಳ್ಳುವುದೇ ಕಾನೂನು ಬಾಹಿರ. ಕೇವಲ ದಂಡ ಪಾವತಿಸಿ ತಕ್ಷಣ ಸಕ್ರಮಗೊಳಿಸುವುದು ಸರಿಯಲ್ಲ. ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಯಬೇಕೆಂದು ವಾದಿಸಿದರು. ವಾದ ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ನೀಡಿದ್ದ ತೀರ್ಪಿಗೆ ತಡೆಯಾಜ್ಞೆ ನೀಡಿದೆ.
ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ನಿಯಮ ಉಲ್ಲಂಘಿಸಿರುವ ಕಟ್ಟಡಗಳನ್ನು ಸಕ್ರಮಗೊಳಿಸಲು ರಾಜ್ಯ ಸರ್ಕಾರ ರೂಪಿಸಿದ್ದ ಯೋಜನೆ ಪ್ರಶ್ನಿಸಿ ನಮ್ಮ ಬೆಂಗಳೂರು ಪೌಂಡೇಶನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸುವ ಮೂಲಕ ಅಕ್ರಮ-ಸಕ್ರಮ ಯೋಜನೆ ಜಾರಿಗೆ ಗ್ರೀನ್ ಸಿಗ್ನಲ್ ನೀಡಿತ್ತು.

Comments are closed.