ಬೆಂಗಳೂರು(ಜ.10): ನಂದಕಿಶೋರ್ ನಿರ್ದೇಶನದ ‘ವಿಐಪಿ’ ಚಿತ್ರದ ಚಿತ್ರೀಕರಣದ ವೇಳೆ ಸಹ ಕಲಾವಿದೆ ಪದ್ಮಾವತಿ (40) ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣ ಸಂಬಂಧ ಚಿತ್ರದ ಪ್ರೊಡಕ್ಷನ್ ಮ್ಯಾನೇಜರ್ ನರಸಿಂಹ ಎಂಬುವವರನ್ನು ರಾಜಾನುಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜತೆಗೆ, ಪ್ರಕರಣ ಸಂಬಂಧ ಚಿತ್ರದ ನಿರ್ದೇಶಕ ನಂದಕಿಶೋರ್, ಪ್ರೊಡಕ್ಷನ್ ಮ್ಯಾನೇಜರ್ ನರಸಿಂಹ, ಛಾಯಾಗ್ರಾಹಕ ಸತ್ಯಾ ಹೆಗಡೆ, ಶೇಖರ್, ಗೌರಮ್ಮ, ಪ್ರೆಸ್ಟೀಜ್ ಕಂಪೆನಿ ಮಾಲೀಕ ಹಾಗೂ ಗುತ್ತಿಗೆದಾರರ ವಿರುದ್ಧ ಜಾತಿ ನಿಂದನೆ, ನಿರ್ಲಕ್ಷ್ಯ ಆರೋಪದಡಿ ಎಫ್ಐಆರ್ ದಾಖಲಿಸಲಾಗಿದೆ.
ಜಕ್ಕೂರಿನ ನಿವಾಸಿ ಪದ್ಮಾವತಿ ಅವರು, ನಟ ವಿ.ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ವಿಐಪಿ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.
ಆವಲಹಳ್ಳಿಯಲ್ಲಿ ನಡೆಯುತ್ತಿದ್ದ ಚಿತ್ರೀಕರಣಕ್ಕೆ 200ಕ್ಕೂ ಹೆಚ್ಚು ಸಹ ಕಲಾವಿದರನ್ನು ಬಳಸಿಕೊಳ್ಳಲಾಗಿತ್ತು. ಸಂಜೆ ವೇಳೆಗೆ ಚಿತ್ರೀಕರಣ ಮುಗಿದಿದ್ದು, ಪದ್ಮಾವತಿ ನಾಪತ್ತೆಯಾಗಿದ್ದರು. ನಂತರ ಸಮೀಪದಲ್ಲಿನ ನಿರ್ಮಾಣ ಹಂತದ ಕಟ್ಟಡದ ಗುಂಡಿಯಲ್ಲಿ ಪದ್ಮಾವತಿ ಅವರ ಮೃತದೇಹ ಪತ್ತೆಯಾಗಿತ್ತು.
Comments are closed.