ಮನೋರಂಜನೆ

‘ವಜ್ರಕಾಯ’ದ ನಟಿ ನಭಾ ನಟೇಶ್ ದೀರ್ಘ ವಿರಾಮದ ನಂತರ ‘ಲೀ’ಯಲ್ಲಿ ನಟನೆ

Pinterest LinkedIn Tumblr

nabha-natesh-large
ಬೆಂಗಳೂರು: ನಟಿ ನಭಾ ನಟೇಶ್, ಹರ್ಷ ನಿರ್ದೇಶನದ ‘ವಜ್ರಕಾಯ’ದಲ್ಲಿ ಶಿವರಾಜ್ ಕುಮಾರ್ ಎದುರು ನಟಿಸಿ ಒಳ್ಳೆಯ ಆರಂಭ ಪಡೆದವರು. ಆದರೆ ಅವರಿಗೆ ಎರಡನೇ ಸಿನೆಮಾ ಸಿಗಲು ತುಸು ಹೆಚ್ಚೇ ಸಮಯ ಹಿಡಿಯಿತು. ಈಗ ಈ ಪಟಾಕ ಹುಡುಗಿ ‘ಲೀ’ ಸಿನೆಮಾದ ಮೂಲಕ ಹಿಂದಿರುಗಿದ್ದಾರೆ.
ಈ ದೀರ್ಘ ವಿರಾಮ ನಾನು ಚಿಂತಿಸಿ ತೆಗೆದುಕೊಂಡ ನಿರ್ಧಾರ ಎಂದು ವಿವರಿಸುವ ನಭಾ “ನನಗೆ ‘ವಜ್ರಕಾಯ’ದಲ್ಲಿ ಸಿಕ್ಕಿದಂತಹ ಪಾತ್ರಗಳೇ ಬರುತ್ತಿದ್ದರಿಂದ ನಾನು ಕಾಯಲು ನಿರ್ಧರಿಸಿದೆ. ಹೆಚ್ಚು ನಿರ್ದೇಶಕರು ನನ್ನನ್ನು ಪಟಾಕ ಹುಡುಗಿ ಪಾತ್ರದಲ್ಲೇ ನೋಡಲು ಬಯಸುತ್ತಿದ್ದರು, ಆದರೆ ನನಗೆ ಒಂದೇ ರೀತಿಯ ಪಾತ್ರದಲ್ಲಿ ಸಿಕ್ಕಿಹಾಕಿಕೊಳ್ಳಲು ಇಷ್ಟವಿರಲಿಲ್ಲ. ನನಗೆ ಹೊಸದೇನಾದರೂ ಪ್ರಯತ್ನಿಸುವ ತವಕವಿತ್ತು, ಆದುದರಿಂದ ದೀರ್ಘ ಕಾಲದವರೆಗೆ ಕಾಯಬೇಕಾಯಿತು” ಎನ್ನುತ್ತಾರೆ.
ಎಚ್ ಎಂ ಶ್ರೀನಂದನ್ ಬರೆದು ನಿರ್ದೇಶಿಸಿರುವ ‘ಲೀ’ ಸಿನೆಮಾವನ್ನು ಸಾರಥಿ ಸತೀಶ್, ದರ್ಶನ್ ಕೃಷ್ಣ ಮತ್ತು ವಿನಯ್ ಎಸ್ ಬಿ ನಿರ್ಮಿಸಿದ್ದಾರೆ. ‘ವಜ್ರಕಾಯ’ದಲ್ಲಿ ನನ್ನ ಪಾತ್ರ ಕಾಲ್ಪನಿಕವಾದದ್ದಾದರೆ ‘ಲೀ’ ನಲ್ಲಿ ಹೆಚ್ಚು ನೈಜ ಪಾತ್ರ ಸಿಕ್ಕಿದೆ ಎಂದು ವಿವರಿಸುವ ನಟಿ “ಇದು ಪಕ್ಕದ ಮನೆ ಹುಡುಗಿಯ ಪಾತ್ರ ಮತ್ತು ಅದಕ್ಕೆ ಹಾಸ್ಯ ಲೇಪನ ಇದೆ. ಅಲ್ಲದೆ ಈ ಪಾತ್ರದಿಂದ ನನ್ನ ಮತ್ತೊಂದು ಬದಿಯನ್ನು ಅನಾವರಣ ಮಾಡಲು ಅವಕಾಶ ನೀಡಿದೆ. ಗಟ್ಟಿ ಮಾತಿನ ಪಟಾಕ ಹುಡುಗಿಯಿಂದ ಸರಳ ಹುಡುಗಿಯ ಪಾತ್ರ ಮಾಡುವುದು ಸವಾಲಾಗಿತ್ತು. ಹಾವಭಾವಗಳ ಮೇಲೆ ನಾನು ಕೆಲಸ ಮಾಡಬೇಕಿತ್ತು” ಎನ್ನುತ್ತಾರೆ.
ಮಾರ್ಷಿಯಲ್ ಕಲೆಯ ಸಿನೆಮಾ ‘ಲೀ’ ಎನ್ನುವ ನಭಾ “ಇಲ್ಲಿ ಕರಾಟೆ, ಕುಂಫು ಎಲ್ಲಾ ಇದೆ ಆದರೆ ಅದು ಹೀರೋಗೆ. ನಾನು ಕಮರ್ಷಿಯಲ್ ನಾಯಕಿಯಾಗಿ ನಟಿಸಿದ್ದೇನೆ. ಅಲ್ಲಿ ನೃತ್ಯ, ರೋಮ್ಯಾನ್ಸ್, ಹಾಸ್ಯ ಎಲ್ಲವು ಇದೆ. ನಾನು ನಟಿಸಲು ಬಯಸಿದ್ದ ಪಾತ್ರ ಇದು” ಎನ್ನುತ್ತಾರೆ.
ತೆಲುಗಿನಲ್ಲಿ ಒಂದು ಬೃಹತ್ ಬಜೆಟ್ ಸಿನೆಮಾದಲ್ಲಿ ನಟಿಸಿರುವುದಾಗಿ ತಿಳಿಸುವ ನಭಾ, ಎರಡನೆಯ ಸಿನೆಮಾಗೆ ಕೂಡ ಕರೆ ಬಂದಿದೆ ಎಂದು ತಿಳಿಸುತ್ತಾರೆ. ತಮಿಳಿನಲ್ಲಿ ನಟಿಸಲು ಕೂಡ ಮಾತುಕತೆ ಜಾರಿಯಲ್ಲಿದ್ದು, ಮನೋರಂಜನ್ ನಟನೆಯ ‘ಸಾಹೇಬ’ದಲ್ಲಿಯೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸದ್ಯಕ್ಕೆ ‘ಲೀ’ ಸಿನೆಮಾದಲ್ಲಿ ನಭಾ, ಸುಮಂತ್ ಶೈಲೇಂದ್ರ ಎದುರು ನಟಿಸಿದ್ದಾರೆ.

Comments are closed.