ಮನೋರಂಜನೆ

ಸ್ಯಾಂಡಲ್​ವುಡ್​ ಇತಿಹಾಸದಲ್ಲಿ 2016 ಅನ್ನು ಯಾರು ಮರೆಯುವಂತಿಲ್ಲ!

Pinterest LinkedIn Tumblr

kundapura_bablusha_film-4
2016ರಲ್ಲಿ ಕನ್ನಡ ಚಿತ್ರರಂಗದ ಮಟ್ಟಿಗೆ ಹಲವು ವಿಶೇಷಗಳು ಜರುಗಿವೆ. ದಾಖಲೆ ಪ್ರಮಾಣದ ಚಿತ್ರಗಳು ಈ ವರ್ಷ ತೆರೆಕಂಡಿವೆ, ಕೆಲವೊಮ್ಮೆ ವಾರವೊಂದಕ್ಕೆ 7-8 ಸಿನಿಮಾಗಳು ಚಿತ್ರಮಂದಿರಕ್ಕೆ ಎಂಟ್ರಿಯಾಗಿವೆ. ಮೇನ್ ಥಿಯೇಟರ್ ಪರಿಕಲ್ಪನೆಗೆ ಎಳ್ಳು-ನೀರು ಬಿಡುವ ಕೆಲಸ ಈ ವರ್ಷ ಬಲವಾಗಿಯೇ ಆಗಿದೆ. ವರ್ಷಾಂತ್ಯಕ್ಕೆ ನೋಟ್ ಬ್ಯಾನ್ ಎಫೆಕ್ಟ್ ಇದ್ದರೆ, ಡಿಸೆಂಬರ್ನಲ್ಲಿ 22 ಚಿತ್ರಗಳನ್ನು ರಿಲೀಸ್ ಮಾಡುವ ಮೂಲಕ ಗಾಂಧಿನಗರ ಪುಟಿದೆದ್ದಿದೆ.

ಬೆಂಗಳೂರು: 82 ವರ್ಷಗಳ ಕನ್ನಡ ಚಿತ್ರರಂಗದ ಸುದೀರ್ಘ ಇತಿಹಾಸದಲ್ಲಿ 2016ರ ವರ್ಷವನ್ನು ಯಾರೂ ಮರೆಯುವಂತಿಲ್ಲ. ಏಕೆಂದರೆ, ವರ್ಷಕ್ಕೆ 120, 130 ಸಿನಿಮಾಗಳು ರಿಲೀಸ್ ಆಗುವುದು ಸಾಮಾನ್ಯವಾಗಿತ್ತು. ಆದರೆ ಈ ವರ್ಷ ಆ ಸಂಖ್ಯೆ 184 ತಲುಪಲಿದೆ. ಡಿ. 23ಕ್ಕೆ 176 ತಲುಪಿದ್ದ ಈ ಸಂಖ್ಯೆ ಡಿ. 30ಕ್ಕೆ ತೆರೆಕಾಣಲಿರುವ 8 ಸಿನಿಮಾಗಳನ್ನು ಗಣನೆಗೆ ತೆಗೆದುಕೊಂಡರೆ 184 ಆಗುತ್ತದೆ. ಹೀಗೆ ಹಿಂದೆಂದೂ ಕಂಡರಿಯದಂಥ ಸಿನಿಪ್ರವಾಹ 2016ರಲ್ಲಿ ಆಗಿದೆ. ಇನ್ನು ತುಳು, ಕೊಂಕಣಿ, ಕುಂದಾಪುರ ಕನ್ನಡದ ಸಿನಿಮಾಗಳನ್ನು ಪರಿಗಣಿಸಿದರೆ, ಅದು 200ರ ಗಡಿ ತಲುಪುತ್ತದೆ.

ವಾರವೊಂದಕ್ಕೆ 2ರಿಂದ 3 ಚಿತ್ರಗಳು ತೆರೆಕಂಡರೆ ಹೆಚ್ಚು ಎನ್ನುವ ಮಾತಿತ್ತು. ಆದರೆ ಈ ಬಾರಿ ವಾರಕ್ಕೆ 8 ಚಿತ್ರಗಳವರೆಗೂ ರಿಲೀಸ್ ಆಗಿವೆ. ಫೆಬ್ರವರಿ 3ನೇ ವಾರದಲ್ಲಿ 7 ಚಿತ್ರಗಳು ತೆರೆಕಂಡಿದ್ದು, ಆ ತಿಂಗಳಲ್ಲಿ ಒಟ್ಟು 23 ಸಿನಿಮಾಗಳು ಚಿತ್ರಮಂದಿರದ ಅಂಗಳಕ್ಕೆ ಬಂದವು. ಮಾರ್ಚ್ನಲ್ಲೂ ಈ ರಿಲೀಸ್ ಪ್ರಮಾಣ ಅಧಿಕವಾಗಿಯೇ ಇತ್ತು. ಮೊದಲ ಹಾಗೂ ಕೊನೆಯ ವಾರ ಆರು ಸಿನಿಮಾಗಳು ಬಿಡá-ಗಡೆ ಕಂಡರೆ, 2ನೇ ವಾರ 8 ಸಿನಿಮಾಗಳು ಬಿಡುಗಡೆಯಾಗಿವೆ. ಮೇ ಮತ್ತು ಸೆಪ್ಟೆಂಬರ್ನ ಒಂದೊಂದು ವಾರಗಳಲ್ಲಿ 6-7 ಸಿನಿಮಾಗಳು ಅಖಾಡಕ್ಕಿಳಿದಿವೆ.

ವರ್ಷಾಂತ್ಯಕ್ಕೆ ರಿಲೀಸ್ ರಷ್!

ಡಿ. 30, ಈ ವರ್ಷದ ಕೊನೇ ಶುಕ್ರವಾರ. ಹಾಗಾಗಿ, ಸಾಧ್ಯ ಆದಷ್ಟೂ ಚಿತ್ರಗಳನ್ನು ಈ ವರ್ಷವೇ ತೆರೆ ಕಾಣಿಸುವ ಪ್ರಯತ್ನ ನಿರ್ವಪಕರದ್ದು. ರಕ್ಷಿತ್ ಶೆಟ್ಟಿ ನಿರ್ವಣ/ನಾಯಕತ್ವದ ‘ಕಿರಿಕ್ ಪಾರ್ಟಿ’ ಜತೆಗೆ ಇನ್ನೂ 7 ಸಿನಿಮಾಗಳೂ ಡಿ. 30ಕ್ಕೆ ರಿಲೀಸ್ ಆಗಲಿವೆ. ಇದರಲ್ಲಿ ಬಹುತೇಕ ಎಲ್ಲ ಚಿತ್ರಗಳು ಹೊಸಬರದ್ದೇ ಎನ್ನುವುದು ವಿಶೇಷ. ರಾಕೇಶ್ ಅಡಿಗ, ಸಂಜನಾ ಅಭಿನಯದ ‘ಮಂಡ್ಯ ಟು ಮುಂಬೈ’, ಸಾಯಿಪ್ರಕಾಶ್ ನಿರ್ದೇಶನದ 98ನೇ ಚಿತ್ರ ‘ಶ್ರೀ ಓಂಕಾರ ಅಯ್ಯಪ್ಪನೇ’, ಶುರುವಿನಿಂದಲೂ ಸದ್ದು ಮಾಡುತ್ತಿರುವ ‘ಬಳ್ಳಾರಿ ದರ್ಬಾರ್’, ಹೊಸಬರ ‘ಝೀರೋ’, ‘ಹ್ಯಾಪಿ ಮ್ಯಾರೀಡ್ ಲೈಫ್’, ‘ತಕೋತ್ಕರ್ಷ’, ‘ಎನ್ಎಚ್ 37’ ಚಿತ್ರಗಳು ರಿಲೀಸ್ ಆಗುತ್ತಿವೆ.

ಪರಿಣಾಮ ಬೀರಿದ ನೋಟ್ಬ್ಯಾನ್

ಪ್ರತಿ ತಿಂಗಳು ಸರಾಸರಿ 15 ಚಿತ್ರಗಳು ರಿಲೀಸ್ ಆಗಿವೆ. ಆದರೆ ನವೆಂಬರ್ 8ರಂದು ಕೇಂದ್ರ ಸರ್ಕಾರ ಹಳೆಯ ನೋಟು ನಿಷೇಧ ಮಾಡಿದ ಪರಿಣಾಮ, ಆ ತಿಂಗಳಲ್ಲಿ ತೆರೆಕಂಡ ಚಿತ್ರಗಳ ಸಂಖ್ಯೆ ಕೇವಲ 8. ಅಲ್ಲದೆ, ತೆರೆಕಂಡ ಸಿನಿಮಾಗಳ ಗಳಿಕೆಯೂ ಅಷ್ಟಕಷ್ಟೇ. ಇನ್ನೂ ಕೆಲ ಚಿತ್ರಗಳು ನವೆಂಬರ್ನಿಂದ ಡಿಸೆಂಬರ್ಗೆ ಜಂಪ್ ಆದವು.

ಕರಗುತ್ತಿದೆ ಮೇನ್ ಥಿಯೇಟರ್ ಪರಿಕಲ್ಪನೆ

ಗಾಂಧಿನಗರದಲ್ಲಿನ ಚಿತ್ರಮಂದಿರಗಳ ಸಂಖ್ಯೆ ಕೇವಲ 9. ಅದರಲ್ಲಿ 3 ಚಿತ್ರಮಂದಿರಗಳು ಬಹುಪಾಲು ಪರಭಾಷೆಗೆ ಮೀಸಲು. ಉಳಿದಿರುವ ಆರು ಚಿತ್ರಮಂದಿರಗಳಲ್ಲೇ ಕನ್ನಡ ಚಿತ್ರರಂಗ ಹೊಂದಾಣಿಕೆ ಮಾಡಿ ಕೊಳ್ಳಬೇಕು. ಇನ್ನು, ಸ್ಟಾರ್ ನಟರ ಚಿತ್ರಗಳನ್ನು ಕನಿಷ್ಠ 50 ದಿನ ಓಡಿಸಲೇಬೇಕು. ಹೀಗಾಗಿ ವಾರಕ್ಕೆ 5-6 ಸಿನಿಮಾಗಳು ಬಂದಾಗ ಸಮಸ್ಯೆ ಆಗುತ್ತಿತ್ತು. ಅದಕ್ಕೆ ಕೆಲ ಚಿತ್ರತಂಡದವರು ಮೇನ್ ಥಿಯೇಟರ್ ಕಲ್ಪನೆಯಿಂದ ಹೊರ ಬಂದಿದ್ದು ವಿಶೇಷ. ‘ಲಾಸ್ಟ್ ಬಸ್’, ‘ದೇವರ ನಾಡಲ್ಲಿ’, ‘ಪ್ರಿಯಾಂಕಾ’, ‘ಮತ್ತೆ ಶ್’, ‘ಕೌದಿ’, ‘ಕೋಮ’,‘ಸುಳಿ’, ‘ಹೋಮ್ ಸ್ಟೇ’, ‘ಪುಟ ತಿರುಗಿಸಿ ನೋಡಿ’, ‘ಬಬ್ಲುಷ’, ‘ಸ’, ‘ಸೆಲ್ಪೀ’, ‘ಕಹಿ’ ಸೇರಿದಂತೆ ಇನ್ನೂ ಅನೇಕ ಚಿತ್ರಗಳು ಮೇನ್ ಥಿಯೇಟರ್ನಿಂದ ದೂರ ಉಳಿದವು. ಅಲ್ಲದೆ, ಇನ್ನು ಕೆಲ ಚಿತ್ರಗಳಿಗೆ ಬೆಂಗಳೂರು ದರ್ಶನವೇ ಆಗಿಲ್ಲ. ಹುಬ್ಬಳ್ಳಿ, ಮಂಗಳೂರು, ಕೊಪ್ಪಳ, ಕಾರ್ಕಳ, ಕುಂದಾಪುರ ಮತ್ತಿತರ ಊರುಗಳಲ್ಲೇ ತೆರೆಕಂಡಿವೆ. ಡಿ. 30ಕ್ಕೆ ತೆರೆಗೆ ಬರಲಿರುವ ‘ಬಳ್ಳಾರಿ ದರ್ಬಾರ್’ ಚಿತ್ರದ ಮೇನ್ ಥಿಯೇಟರ್ ಬಳ್ಳಾರಿಯ ನಟರಾಜ ಆಗಿರಲಿದೆ.

Comments are closed.