ಮನೋರಂಜನೆ

ನೀವು ನಕ್ಕುನಲಿಯಬೇಕೇ? ಸುಂದರಾಂಗ ಜಾಣ ಚಿತ್ರವನ್ನು ನೋಡಿ

Pinterest LinkedIn Tumblr

ಗಣೇಶ ವೈದ್ಯ

sundaranga-jana

ಸುಂದರಾಂಗ ಜಾಣ
ನಿರ್ಮಾಪಕರು: ರಾಕ್‌ಲೈನ್ ವೆಂಕಟೇಶ್, ಅಲ್ಲು ಅರವಿಂದ್ನಿ
ರ್ದೇಶಕ: ರಮೇಶ್ ಅರವಿಂದ್ತಾ
ರಾಗಣ: ಗಣೇಶ್, ಶಾನ್ವಿ ಶ್ರೀವಾಸ್ತವ್, ದೇವರಾಜ್, ರಂಗಾಯಣ ರಘು

ಮದುವೆಯ ವಯಸ್ಸಿಗೆ ಬಂದ ಯುವಕನೊಬ್ಬ ತನ್ನ ಮರೆವಿನ ಕಾರಣದಿಂದಾಗಿ ಏನೆಲ್ಲ ಅವಾಂತರಗಳನ್ನು ಸೃಷ್ಟಿಸಿಕೊಳ್ಳುತ್ತಾನೆ, ಬಂದ ಸಂಬಂಧಗಳು ಹೇಗೆ ತಪ್ಪಿಹೋಗುತ್ತವೆ, ಒಲಿದ ಹುಡುಗಿಯನ್ನು ಪ್ರೀತಿಸಲು ಮತ್ತು ಆ ಪ್ರೀತಿಯನ್ನು ಉಳಿಸಿಕೊಳ್ಳಲು ಯಾವೆಲ್ಲ ನಾಟಕಗಳನ್ನು ಆಡುತ್ತಾನೆ ಎಂಬುದನ್ನು ‘ಸುಂದರಾಂಗ ಜಾಣ’ ಚಿತ್ರದಲ್ಲಿ ನಿರ್ದೇಶಕ ರಮೇಶ್ ಅರವಿಂದ್ ನಗೆಬುಗ್ಗೆಗಳ ರೂಪದಲ್ಲಿ ನಿರೂಪಿಸಿದ್ದಾರೆ. ತೆಲುಗಿನ ‘ಭಲೇ ಭಲೇ ಮಗಾಡಿವೋಯ್’ ಚಿತ್ರದಿಂದ ಎರವಲು ಪಡೆದ ಕಥೆಯನ್ನು ತಮ್ಮದೇ ರೀತಿಯಲ್ಲಿ ಒಗ್ಗಿಸಿಕೊಂಡಿರುವ ನಿರ್ದೇಶಕರು, ನಗಿಸುವ ಕಸುಬನ್ನು ಮುಂದುವರಿಸಿದ್ದಾರೆ.

ನಾಯಕನಿಗೆ ಒಂದು ಕೆಲಸದ ಮಧ್ಯೆ ಮತ್ತೊಂದು ಕೆಲಸ ಹೇಳಿದರೆ ಮೊದಲು ಮಾಡುತ್ತಿದ್ದ ಕೆಲಸ ಮರೆತೇಹೋಗುತ್ತದೆ. ನಂದನಾಳನ್ನು (ಶಾನ್ವಿ) ರಸ್ತೆಯಲ್ಲಿ ಕಂಡ ಲಕ್ಕಿಗೆ (ಗಣೇಶ್) ತನ್ನ ಬಾಸ್ ಆಸ್ಪತ್ರೆಯಲ್ಲಿರುವುದು ಮರೆತುಬಿಡುತ್ತದೆ. ಹೆಣ್ಣು ಕೊಡಲು ಬಂದ ಮಾವನನ್ನು ಕಾಯಲು ಹೇಳಿ, ತನ್ನ ಕಂಪೆನಿಯ ಹುಡುಗನಿಗೆ ಒಳ್ಳೆಯ ಚಹಾ ಮಾಡುವುದು ಹೇಗೆಂದು ಲೆಕ್ಚರ್ ಕೊಡುತ್ತಾನೆ. ಯಾರೋ ಬಂದು ತನ್ನ ಗಾಡಿಗೆ ಗುದ್ದಿ ಸಿಕ್ಕಿಬಿದ್ದಾಗ, ದಂಡ ಕಟ್ಟಬೇಕಿರುವುದು ತಾನೋ ಅಥವಾ ಅವರೋ ಎಂಬುದೇ ಗೊಂದಲವಾಗುತ್ತದೆ. ಇವು ಮರೆಗುಳಿಯ ಕೆಲವು ಝಲಕ್ಕುಗಳು. ಹೊಟ್ಟೆ ಹುಣ್ಣಾಗುವಂತೆ ನಗಿಸುವ ಅನೇಕ ಸನ್ನಿವೇಶಗಳು ಸಿನಿಮಾದಲ್ಲಿವೆ. ಲಕ್ಕಿಯ ಸಮಸ್ಯೆಯೇ ಆತನಿಗೆ ಹೇಗೆ ವರವೂ ಆಗುತ್ತದೆ ಎನ್ನುವುದು ಚಿತ್ರಕಥೆಯಲ್ಲಿನ ಸ್ವಾರಸ್ಯ.

ತನಗೆ ಮರೆವಿನ ತೊಂದರೆ ಇದೆ ಎಂದು ಗೊತ್ತಿದ್ದೂ ಲಕ್ಕಿ ಖುಷಿಯಿಂದಲೇ ಬದುಕುತ್ತಿರುತ್ತಾನೆ. ಅವನಿಗರಿವಿಲ್ಲದೇ ಯಾರದೋ ಸಂಕಟಕ್ಕೆ ಕಾರಣವಾಗುತ್ತಾನೆ, ಇನ್ನಾರಿಗೋ ನೆರವಾಗುತ್ತಾನೆ. ಕೆಲವೊಮ್ಮೆ ನಾಯಕನ ಮರೆಗುಳಿತನದ ಪ್ರದರ್ಶನ ಅತಿಯಾಯಿತು ಎನ್ನಿಸುವುದೂ ಇದೆ. ನಮ್ಮ ಸುತ್ತಮುತ್ತ ನಿಜವಾಗಿಯೂ ಇಂತಹ ವ್ಯಕ್ತಿತ್ವ ಇದ್ದಾರೆಯೇ ಎಂದು ಯೋಚಿಸದೆ, ಮರೆವಿನ ಸಮಸ್ಯೆ ಇರುವವನೊಬ್ಬನ ಜೀವನದ ಪ್ರತ್ಯೇಕ ಕಂತುಗಳೆಂದುಕೊಂಡು ತೆರೆಯ ಮೇಲಿನ ದೃಶ್ಯಗಳನ್ನು ಎಂಜಾಯ್ ಮಾಡಬಹುದು. ಕಾಮಿಡಿ ಷೋ ಮಧ್ಯೆ ದಿಢೀರನೆ ಅಪರಾಧ ವರದಿ ಪ್ರಸಾರವಾಗುವಂತೆ ಲವಲವಿಕೆಯಿಂದ ಕಟ್ಟಿಕೊಟ್ಟಿದ್ದ ದೃಶ್ಯಗಳ ಹೊರತಾಗಿ ಕ್ಲೈಮ್ಯಾಕ್ಸ್‌ನಲ್ಲಿ ಮಾತಿನ ಸುರಿಮಳೆಯಿದೆ.

ಶಾನ್ವಿ ನಗುವಿನಿಂದಲೇ ಗಮನ ಸೆಳೆದರೆ, ಗಣೇಶ್ ಹೊಸ ಗೆಟಪ್‌ಗೆ ತಮ್ಮನ್ನು ಒಪ್ಪಿಸಿಕೊಂಡಿದ್ದಾರೆ. ತಾರಾಗಣ ದೊಡ್ಡದಿದ್ದರೂ ಮೂರ್ನಾಲ್ಕು ಪಾತ್ರಗಳಷ್ಟೇ ತೆರೆಯ ಮೇಲೆ ರಾರಾಜಿಸುತ್ತವೆ. ಅಜನೀಶ್ ಲೋಕನಾಥ್ ಸಂಗೀತ ಮತ್ತು ಮನೋಹರ್ ಜೋಶಿ ಛಾಯಾಗ್ರಹಣ ಚಿತ್ರದ ಧನಾತ್ಮಕ ಅಂಶಗಳು.

Comments are closed.